top of page

ಶಬರಿ ಮಲೆಯಲ್ಲಿ ಭಾರಿ ಮಳೆ : ಪಂಪ ಸ್ನಾನ ನಿಷೇಧ

  • Writer: Ananthamurthy m Hegde
    Ananthamurthy m Hegde
  • Dec 3, 2024
  • 1 min read

ree

ತಿರುವನಂತಪುರಂ: ಫೆಂಗಲ್ ಚಂಡಮಾರುತ ಪ್ರಭಾವದಿಂದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ಕೇರಳದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೇರಳದಲ್ಲೂ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಎರ್ನಾಕುಲಂ, ಇಡುಕ್ಕಿ, ತ್ರಿಶೂರ್ ಮತ್ತು ಪಾಲಕ್ಕಾಡ್‌ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸದ್ಯ ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಶಬರಿಮಲೆ ಯಾತ್ರಿಕರಿಗೆ ಸಮಸ್ಯೆಯಾಗುತ್ತಿದೆ.

 ಶಬರಿಮಲೆ ಪರಿಸರದಲ್ಲೂ ಶನಿವಾರ ಆರಂಭವಾದ ಮಳೆ ಸುರಿಯುತ್ತಲೇ ಇದೆ. ಕರ್ನಾಟಕ ಸೇರಿ ವಿವಿಧ ಜಿಲ್ಲೆಗಳಿಂದ ಶಬರಿಮಲೆಗೆ ತೆರಳಿದ್ದ ನೂರಾರು ಯಾತ್ರಿಕರು ಭಾರೀ ಮಳೆಗೆ ಸಿಲುಕಿಹಾಕಿಕೊಂಡಿದ್ದಾರೆ. ಸಂಚಾರ ವ್ಯವಸ್ಥೆಯಲ್ಲೂ ಏರುಪೇರಾಗಿದ್ದರಿಂದ ಸಮಸ್ಯೆ ಅನುಭವಿಸುವಂತಾಗಿದೆ. ಇನ್ನು ಮುನ್ನೆಚ್ಚರಿಕೆ ದೃಷ್ಟಿಯಿಂದ ಅರಣ್ಯದ ದಾರಿ ಮೂಲಕ ಕಾಲ್ನಡಿಗೆಯಲ್ಲಿ ಬರುವ ಯಾತ್ರಿಕರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.

ಭೂಕುಸಿತ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅರಣ್ಯ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅರಣ್ಯದ ದಾರಿ ಮೂಲಕ ಕಾಲ್ನಡಿಗೆಯಲ್ಲಿ ಬರುವ ಯಾತ್ರಿಕರಿಗೆ ಕರಿಮಲ, ಪುಲ್ಲುಮೇಡು ದಾರಿಯಲ್ಲಿ ಸಂಚರಿಸದಂತೆ ಸೂಚಿಸಲಾಗಿದೆ. ಶಬರಿಮಲೆ ಯಾತ್ರಿಕರ ಸುರಕ್ಷತೆ ದೃಷ್ಟಿಯಿಂದ ಅಳುತಕ್ಕಡವುನಿಂದ ಪಂಪಾವರೆಗಿನ ಸಾಂಪ್ರದಾಯಿಕ ಅರಣ್ಯ ಮಾರ್ಗದಲ್ಲಿ ಚಾರಣ ನಿಷೇಧಿಸಲಾಗಿದೆ. ಈಗಾಗಲೇ ಅರಣ್ಯ ಮಾರ್ಗದ ಮೂಲಕ ಆಗಮಿಸಿದ್ದ ಭಕ್ತರನ್ನು ವಿಶೇಷ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಪಂಪಾಗೆ ಕರೆದೊಯ್ಯಲಾಗಿದೆ. ಪುಲ್ಲುಮೇಡುವಿನಿಂದ ಶಬರಿಮಲೆಗೆ 6 ಕಿ.ಮೀ ದೂರವಿದ್ದು, ಈ ಅರಣ್ಯ ದಾರಿಯಲ್ಲಿ ದಟ್ಟ ಮಂಜು ಆವರಿಸಿದೆ.

ತೀವ್ರ ಮಳೆಯಿಂದಾಗಿ ಪಂಪಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಯಾತ್ರಿಕರು ನದಿಗೆ ಇಳಿಯುವುದನ್ನು ಹಾಗೂ ಸ್ನಾನಘಟ್ಟಕ್ಕೆ ತೆರಳುವುದನ್ನು ಜಿಲ್ಲಾಧಿಕಾರಿ ಎಸ್.ಪ್ರೇಮ್ ಕೃಷ್ಣನ್ ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ.

ಶಬರಿಮಲೆ ಪರಿಸರದಲ್ಲಿ ಮೂರು ದಿನಗಳಿಂದ ಮಳೆಯಾಗುತ್ತಿದೆ. ತಕ್ಷಣದ ಯಾವುದೇ ಅಪಾಯ ಇಲ್ಲವಾಗಿದ್ದರೂ, ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಅಪಾಯ ಸಾಧ್ಯತೆಗಳನ್ನು ಪರಿಗಣಿಸಿ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಎರುಮೇಲಿಯಲ್ಲಿ ಮಣ್ಣು ಕುಸಿದು ಬಿದ್ದಿದ್ದ ಪ್ರದೇಶವನ್ನು ತೆರವುಗೊಳಿಸಲಾಗಿದ್ದು, ಮತ್ತೆ ಸಂಚಾರ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರುಮೇಲಿಯಲ್ಲಿ ಶಬರಿಮಲೆ ಯಾತ್ರಿಗಳಿಂದ ಪೇಟ ತುಳ್ಳಲ್ ಆಚಾರಕ್ಕೆ ಬಳಸುವ ಸಾಮಾಗ್ರಿಗಳಿಗೆ ದುಬಾರಿ ಬೆಲೆ ವಸೂಲಿ ಮಾಡಲಾಗುತ್ತಿದೆ ಎಂದು ಭಕ್ತರು ಆರೋಪಿಸಿದ್ದಾರೆ. ಶರಂಗುತ್ತಿಯಲ್ಲಿ ಎಸೆಯುವ ಬಾಣ, ಪೇಟ್ಟತುಳ್ಳಲ್‌ಗೆ ಧರಿಸುವ ಕಿರೀಟ, ಖಡ್ಗ, ಚಾಕು, ಊರುಗೋಲು, ಕೊಳಲು, ಬಣ್ಣದ ಪುಡಿ ಇತ್ಯಾದಿಗಳ ಬೆಲೆ ವಿಪರೀತ ಏರಿಕೆಯಾಗಿದೆ. ಸನ್ನಿಧಾನದಲ್ಲಿ ಸಿಗುವ 10 ರೂ. ವಸ್ತುಗಳಿಗೆ ಎರುಮೇಲಿಯಲ್ಲಿ ನಾಲ್ಕು ಪಟ್ಟು ಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ ಎಂದು ಅಯ್ಯಪ್ಪ ಸೇವಾ ಸಮಾಜ ಆರೋಪಿಸಿದೆ. ಜಮಾತ್‌ ಮತ್ತು ಖಾಸಗಿ ವಾಹನ ನಿಲುಗಡೆ ಸ್ಥಳಗಳಲ್ಲಿ ಪಾರ್ಕಿಂಗ್ ದರ ವಿಪರೀತ ಏರಿಕೆಯಾಗಿದೆ ಎಂದು ಭಕ್ತರು ಹೇಳಿದ್ದಾರೆ.

Comments


Top Stories

bottom of page