top of page

ಸಿದ್ದರಾಮಯ್ಯ ದಿವಾಳಿ ಬಜೆಟ್ ನಿಂದ ಸಾಲದ ಹೊರೆ : ಬಿಜೆಪಿ ಕಿಡಿ

  • Writer: Ananthamurthy m Hegde
    Ananthamurthy m Hegde
  • Mar 19
  • 2 min read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಲ ಮಾಡಿ ತುಪ್ಪ ತಿನ್ನು ಎನ್ನುವ ಹಾಗೇ ಈ ಬಾರಿಯ ಅವಧಿಯಲ್ಲಿ ಮೂರು ಬಾರಿಯೂ ಸಾಲದ ಬಜೆಟ್‌ ಮಂಡಿಸಿದ್ದಾರೆ. ಇಂದು ರಾಜ್ಯದ ಪ್ರತಿಯೊರ್ವನ ತಲೆಯ ಮೇಲೆ ಒಂದು ಲಕ್ಷ ರೂ.ಗಳ ಸಾಲದ ಹೊರೆ ಹೊರಿಸಿದ್ದಾರೆ. ಕಳೆದ ಮೂರು ಬಜೆಟ್‌ಗಳಲ್ಲಿಯೂ ನಿರೀಕ್ಷಿತ ಆದಾಯ ಬಂದಿಲ್ಲ ಎಂದು ಬಿಜೆಪಿ ಕಿಡಿಕಾರಿದೆ.

ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ 16 ಬಾರಿ ಬಜೆಟ್ ಮಂಡಿಸಿದ್ದಾರೆ. ತಮ್ಮನ್ನು ತಾವು ಪರಿಣಿತ ಎಂದು ಕರೆದುಕೊಳ್ಳುತ್ತಾರೆ, ಆದರೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯವು 3.07 ಲಕ್ಷ ಕೋಟಿ ರೂ. ಸಾಲವನ್ನು ಪಡೆದುಕೊಂಡಿದೆ. ಈ ಸಾಲದ ಪರಿಣಾಮ ರಾಜ್ಯದ ಪ್ರತಿಯೊರ್ವನ ತಲೆಯ ಮೇಲೆ 1 ಲಕ್ಷ ರೂ. ಸಾಲದ ಹೊರೆ ಹೊರಿಸಲಾಗಿದೆ. ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ಗಳು ರಾಜ್ಯವನ್ನು ದಿವಾಳಿಯತ್ತ ತಳ್ಳಿವೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಈ ವರ್ಷವೂ ದಿವಾಳಿ ಬಜೆಟ್‌ ಮಂಡಿಸಿದ್ದಾರೆ. 3 ವರ್ಷಗಳಲ್ಲಿ 3.07 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಆದಾಯಕ್ಕೂ ಖರ್ಚಿಗೂ ಸರಿಯಾದ ಲೆಕ್ಕ ತೋರಿಸಿಲ್ಲ. ಲೆಕ್ಕ ಕೇಳಿದರೆ ಕೇಂದ್ರದತ್ತ ಬೆರಳು ತೋರಿಸುತ್ತಾರೆ. ಗ್ಯಾರಂಟಿ ನೀಡುವುದಕ್ಕೆ ಹಣವಿಲ್ಲದೆ ಪರಿಶಿಷ್ಟರ ಅನುದಾನ ಬಳಸಿಕೊಂಡಿದ್ದಾರೆ. ಅಹಿಂದ ಪರ ಎನ್ನುವ ಸರಕಾರ ಈ ರೀತಿ ಅನುದಾನ ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಹಿಂದುಳಿದಿರುವ ಸಮುದಾಯಧಿವನ್ನು ಮತ್ತಷ್ಟು ಹಿಂದಕ್ಕೆ ತಳ್ಳುತ್ತಿದೆ. ಬಜೆಟ್‌ ‘ಸಾಲ ಮಾಡಿ ತುಪ್ಪ’ ತಿನ್ನುವ ಎನ್ನುವ ಹಾಗೇ ಇದೆ. ಬಜೆಟ್‌ ಗಾತ್ರ ಹೆಚ್ಚಾಗುತ್ತಿದ್ದಂತೆಯೇ ಸಾಲದ ಪ್ರಮಾಣ ಸಹ ಹೆಚ್ಚಾಗುಧಿತ್ತಿದ್ದು, ಯಾವುದೇ ಶಾಶ್ವತ ಯೋಜನೆಗಳಿಲ್ಲ.

2023-24ರಲ್ಲಿ ಕೇಂದ್ರದಿಂದ 37 ಸಾವಿರ ಕೋಟಿ ರೂ ನಿರೀಕ್ಷೆ ಮಾಡಿದ್ದರೆ ಕೇಂದ್ರ ಸರ್ಕಾರ 40 ಸಾವಿರ ಕೋಟಿ ರೂ ನೀಡಿತ್ತು. 2024-25ರ ಸಾಲಿನಲ್ಲಿ 44,485 ಕೋಟಿ ರೂ ಅಂದಾಜಿಸಿದ್ದರೆ 46,932 ಕೋಟಿ ರೂ ಹಣ ಬಂದಿತ್ತು. ಇದೀಗ 2025-26ರ ಸಾಲಿನಲ್ಲಿ 51,876 ಕೋಟಿ ರೂಗಳ ಕೇಂದ್ರದ ನೆರವನ್ನು ನಿರೀಕ್ಷೆ ಮಾಡಿದ್ದರೆ 55 ಸಾವಿರ ಕೋಟಿ ರೂ ಹಣ ಬರುವ ಅಂದಾಜಿದೆ. ಕೇಂದ್ರ ಅಂದಾಜಿಸಿಗಿಂತ ಹೆಚ್ಚಿನ ಹಣ ಬಿಡುಗಡೆ ಮಾಡಿದ್ದರೂ ಸರ್ಕಾರವು ತನ್ನ ವೈಫ‌ಲ್ಯ ಮುಚ್ಚಿಹಾಕಲು ಕೇಂದ್ರ ಸರ್ಕಾರ ವಿರುದ್ಧ ಆರೋಪಿಸುವುದು ಖಯಾಲಿಯಾಗಿದೆ ಎಂದರು.

ಪರಿಶಿಷ್ಟ ಜಾತಿ ಹಾಗೂ ಪಂಗಡವರಿಗೆ ಮೀಸಲಿಟ್ಟಿದ್ದ ಹಣವನ್ನ ಸರ್ಕಾರವು ಗ್ಯಾರಂಟಿಗಳಿಗಾಗಿ ಬಳಕೆಯಾಗಿದ್ದು ಇದು ಆ ಸಮುದಾಯಗಳಿಗೆ ಮಾಡಿದ ವಂಚನೆ. ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ ಪಿ ಯೋಜನೆಯಡಿ ಈ ಬಾರಿ 42 ಸಾವಿರ ಕೋಟಿ ರೂ. ನಿಗದಿ ಪಡಿಸಲಾಗಿದೆ. ಈ ಪೈಕಿ 21 ಸಾವಿರ ಕೋಟಿ ರೂ ಇಲಾಖಾವಾರು ಹೋಗಲಿದೆ. ಉಳಿದಂತೆ 14 ಸಾವಿರ ಕೋಟಿ ರೂ ಗ್ಯಾರಂಟಿ ಯೋಜನೆಗೆ ಬಳಕೆಯಾಗಲಿದೆ. ಪರಿಶಿಷ್ಟ ಸಮುದಾಯಕ್ಕೆ ಕೇವಲ 7 ಸಾವಿರ ಕೋಟಿ ರೂ ಸಿಗಲಿದೆ. ಪರಿಶಿಷ್ಟ ಸಮುದಾಯಗಳಿಗೆ ಸೇರಿದ ನಿಗಮಗಳಿಗೆ ಕೇವಲ 354 ಕೋಟಿ ರೂ ಮೀಸಲಿರಿಸಲಾಗಿದೆ. ಕಳೆದ ಬಜೆಟ್‌ನಲ್ಲಿ 510 ಕೋಟಿ ರೂ ಮೀಸಲಿಟ್ಟಿದ್ದರೂ ಸಹ ಅದರಲ್ಲಿ ಬರೀ ಶೇ. 25 ಭಾಗ ಮಾತ್ರ ಬಿಡುಗಡೆಯಾಗಿ ಅದರಲ್ಲಿ ಶೇ.54ರಷ್ಟು ಮಾತ್ರ ಖರ್ಚಾಗಿತ್ತು ಎಂದು ಟೀಕಿಸಿದರು.

ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯ ಹಣವನ್ನು ಅನ್ಯ ಕಾರ್ಯಕ್ಕೆ ಬಳಸದಂತೆ 7ಡಿಯನ್ನು ರದ್ದು ಪಡಿಸಿ ಕಾನೂನು ರೂಪಿಸಿದ್ದೀರಿ. ಆದರೆ, ಕಾನೂನು ರೂಪಿಸಿದವರೇ ಕಾನೂನಿಗೆ ಬೆಲೆ ನೀಡುತ್ತಿಲ್ಲ. ಪರಿಶಿಷ್ಟರ ಹಣವನ್ನು ನೀರಾವರಿಗೆ ಬಳಸಿದ್ದೇವೆ ಎನ್ನುತ್ತೀರಿ. ಆದರೆ, ರಾಜ್ಯದ ನೀರಾವರಿ ಜಮೀನಿನ ಪೈಕಿ ಪರಿಶಿಷ್ಟರ ಬಳಿ ಶೇ. 2 ರಷ್ಟು ಮಾತ್ರವಿದೆ. ಇನ್ನು ಕೂಲಿ ನಾಲಿ ಮಾಡುತ್ತ ಬದುಕುತ್ತಿರುವ ಪರಿಶಿಷ್ಟ ಸಮುದಾಯದ ಮಹಿಳೆಯರಿಗೆ ಬಸ್‌ನಲ್ಲಿ ಸುತ್ತಾಡಲು ಸಮಯವಿದೆಯೇ? ಪರಿಶಿಷ್ಟರಿಗೆ ಇಷ್ಟು ಅನ್ಯಾಯ ನಡೆಯುತ್ತಿದ್ದರೂ ನಮಗೆ ನಮ್ಮ ಸಮುದಾಯದ ಮಂತ್ರಿಗಳೇ ಮೋಸ ಮಾಡುತ್ತಿದ್ದಾರೆ. ನಮಗಾಗುತ್ತಿರುವ ಅನ್ಯಾಯವನ್ನು ಅವರು ಪ್ರಶ್ನಿಸುತ್ತಿಲ್ಲ. ಈ ರೀತಿ ಅನ್ಯಾಯ ಮಾಡಿ ಯಾವ ಸಾಮ್ರಾಜ್ಯ ಕಟ್ಟಲು ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಗ್ಯಾರಂಟಿ ಅನುಷ್ಠಾನ ನಿರ್ವಹಣೆ ಸಮಿತಿ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಹಾಗೂ ರಾಜಕೀಯ ಕಾರ್ಯದರ್ಶಿಗಳಿಗೆ ಸರ್ಕಾರಿ ನಿವಾಸ ನೀಡಲಾಗಿದೆ. ಮೇಲ್ಮನೆ ಪ್ರತಿಪಕ್ಷದ ನಾಯಕನಾದ ನನಗೆ ನೀಡಲು ಮನೆ ಖಾಲಿಯಿಲ್ಲ ಸರ್ಕಾರ ಉತ್ತರಿಸಿದೆ. ಜನರ ತೆರಿಗೆ ಹಣ ಪಕ್ಷದ ಕಾರ್ಯಕರ್ತರ ಜೇಬಿಗೆ ಹೋಗುತ್ತಿದೆ. ಇದು ಸರ್ಕಾರದ ರೀತಿ-ನೀತಿಗಳು ಯಾರ ಪರವಾಗಿವೆ ಎಂಬುದನ್ನ ಸೂಚಿಸುತ್ತದೆ ಎಂದು ಟೀಕಿಸಿದರು.

Komentari


Top Stories

bottom of page