top of page

ಸಿದ್ದರಾಮಯ್ಯ ಸರಕಾರದಿಂದ ೧೭ ತಿಂಗಳಲ್ಲಿ ೧೭ ಅವಾಂತರ : ವಿಪಕ್ಷ ನಾಯಕ ಆರ್.ಅಶೋಕ್ ಆರೋಪ

  • Writer: Ananthamurthy m Hegde
    Ananthamurthy m Hegde
  • Dec 9, 2024
  • 1 min read

ree

ಬೆಳಗಾವಿ: ಸಿಎಂ ಸಿದ್ದರಾಮಯ್ಯ ಸರ್ಕಾರ 17 ತಿಂಗಳು ಪೂರ್ಣಗೊಳಿಸಿದೆ. ಆದರೆ, 17 ತಿಂಗಳಲ್ಲಿ ಯಾವುದೇ ಅಭಿವೃದ್ದಿ ಕೆಲಸ ಆಗಿಲ್ಲ. ಬದಲಾಗಿ, 17 ತಿಂಗಳಲ್ಲಿ 17 ಅವಾಂತರಗಳನ್ನು ಸರ್ಕಾರ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ವಾಗ್ದಾಳಿ ನಡೆಸಿದರು.

ಬೆಳಗಾವಿಯಲ್ಲಿ ಸೋಮವಾರ ಮಾತನಾಡಿದ ಅವರು, " ಸಿದ್ದರಾಮಯ್ಯ ಕಳೆದ ಬಾರಿ ಸಿಎಂ ಆಗಿದ್ದಾಗ ನೀಡಿದ ಆಡಳಿತ ಈ ಬಾರಿ ನೀಡುತ್ತಿಲ್ಲ. ಸಿಎಂ ಮೂಡಾ ಕೇಸ್‌ನಲ್ಲಿ ನರಳುತ್ತಿದ್ದರೆ, ಸರ್ಕಾರ ನಿದ್ದೆ ಮಾಡುತ್ತಿದೆ. ಇಲಾಖೆಯ ಮೇಲೆ ಸಿಎಂಗೆ ಹಿಡಿತ ಇಲ್ಲ. ಬಾಣಂತಿಯರು, ಮಕ್ಕಳು ಸಾಯುತ್ತಿದ್ದಾರೆ. ಸಿಎಂಗೆ ಇಲಾಖೆಗಳ ಮೇಲಿನ ಹಿಡಿತ ತಪ್ಪಿದೆ .

ಸಿಎಂಗೆ ಇಲಾಖೆಯ ಮೇಲೆ ಹಿಡಿತ ಕೈತಪ್ಪಿದ ಕಾರಣದಿಂದ ಎಲ್ಲಾ ಇಲಾಖೆಗಳಲ್ಲಿ ಅನಾಹುತ ಆಗುತ್ತಿದೆ. ಎಲ್ಲಾ ಸಚಿವರು ಹಣ ಮಾಡುವುದರಲ್ಲಿ ನಿರತರಾಗಿದ್ದಾರೆ. ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ಇದು ಗುರುವಾರದ ಸರ್ಕಾರವಾಗಿದೆ. ಹಣ ಮಾಡಲು ಮಾತ್ರ ಸಚಿವರು ಗುರುವಾರ ವಿಧಾನಸೌಧಕ್ಕೆ ಆಗಮಿಸುತ್ತಾರೆ. ಅಭಿವೃದ್ದಿ ಕೆಲಸ ಆಗುತ್ತಿಲ್ಲ ಎಂದು ಕಿಡಿಕಾರಿದರು.

ಇನ್ನು ರಾಜ್ಯ ಸರ್ಕಾರದ ನಡೆಯ ಬಗ್ಗೆ ಸದನದಲ್ಲಿ ನಾವು ಪ್ರಸ್ತಾಪ ಮಾಡುತ್ತೇವೆ. ಶಾಸಕರಿಗೆ ಅನುದಾನ ನೀಡದೆ ಇರುವುದು, ಅಭಿವೃದ್ದಿ ಕಾರ್ಯಗಳಲ್ಲಿ ಹಿನ್ನಡೆ ಆಗಿರುವುದು, ವಕ್ಫ್‌ ಹಗರಣ, ಬಾಣಂತಿಯರ ಸಾವು, ಲಿಕ್ಕರ್ ಹಗರಣ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದರು.

ಉತ್ತರ ಕರ್ನಾಟಕ ಅಭಿವೃದ್ದಿಗೆ ಸರ್ಕಾರ ಹೇಳಿದ್ದೇನು ಮಾಡಿದ್ದೇನು ಎಂಬ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ಇದೊಂದು ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಕಳಪೆ ಸರ್ಕಾರವಾಗಿದೆ ಎಂದು ಆರ್. ಅಶೋಕ್ ಆಕ್ಷೇಪ ವ್ಯಕ್ತ ಪಡಿಸಿದರು.

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ 6 ತಿಂಗಳಲ್ಲಿ 29 ಬಾಣಂತಿಯರು ಹಾಗೂ 322 ಶಿಶುಗಳ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಇರುವುದು, ರಕ್ತಸ್ರಾವ, ವೈದ್ಯರ ನಿರ್ಲಕ್ಷ್ಯತೆಯ ಹಿನ್ನೆಲೆಯಲ್ಲಿ ಈ ಸಾವುಗಳು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಬಿವೈ ವಿಜಯೇಂದ್ರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇನ್ನು ರಾಜ್ಯದ ಬಳ್ಳಾರಿ ಹಾಗೂ ಇತರ ಜಿಲ್ಲೆಗಳಲ್ಲಿ ಬಾಣಂತಿಯರು ಹಾಗೂ ಶಿಶುಗಳ ಸಾವಿನ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಸದನದಲ್ಲೂ ಈ ವಿಚಾರವನ್ನು ಪ್ರಸ್ತಾಪ ಮಾಡಲು ಬಿಜೆಪಿ ನಿರ್ಧಾರ ಮಾಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆಗೆ ಈ ವೇಳೆ ಆಗ್ರಹಿಸಲಿದೆ.

Comments


Top Stories

bottom of page