ಸುವರ್ಣ ಸೌಧದಲ್ಲಿ 'ಕೈ' ಬಲ ಅಡಗಿಸಲು ವಿಪಕ್ಷ ವಿಫಲ
- Ananthamurthy m Hegde
- Dec 20, 2024
- 2 min read

ಬೆಳಗಾವಿ: ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಕಟ್ಟಿಹಾಕುವಲ್ಲಿ ವಿಪಕ್ಷಗಳು ವಿಫಲವಾಗಿದೆ. ವಿಪಕ್ಷದ ಕಾರ್ಯವೈಖರಿ ಹಾಗೂ ತಂತ್ರಗಾರಿಕೆಯ ಬಗ್ಗೆ ಸ್ವತಃ ಕೆಲವು ಬಿಜೆಪಿ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಆಂತರಿಕ ಭಿನ್ನಮತ, ಸಮನ್ವಯತೆಯ ಕೊರತೆ ಹಾಗೂ ನಿರ್ಧಾರ ಕೈಗೊಳ್ಳುವಲ್ಲಿ ಆದ ಎಡವಟ್ಟುಗಳು ಆಡಳಿತ ಪಕ್ಷಕ್ಕೆ ವರವಾಗಿ ಪರಿಣಮಿಸಿದವು.
ವಕ್ಫ್ ವಿಚಾರವಾಗಿ ಬಿಜೆಪಿ ನಿಲುವಳಿ ಸೂಚನೆ ಮಂಡಿಸಿ ಚರ್ಚೆ ನಡೆಸಿದರೂ ಅದರ ಅಂತ್ಯ ಬಿಜೆಪಿ ನಾಯಕರು ಅಂದುಕೊಂಡಂತೆ ಆಗಲಿಲ್ಲ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಬಿಜೆಪಿಯ ಸದಸ್ಯರು ವಕ್ಫ್ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರೂ ದೊಡ್ಡ ಪ್ರಮಾಣದಲ್ಲಿ ಗಮನ ಸೆಳೆಯುವುದಲ್ಲಿ ವಿಫಲರಾದರು.
ಬುಧವಾರ ಸದನದಲ್ಲಿ ಸರ್ಕಾರ ಉತ್ತರ ಕೊಡುವ ಸಂದರ್ಭದಲ್ಲಿ ಜಮೀರ್ ಉತ್ತರಕ್ಕೆ ಕೌಂಟರ್ ಕೊಡುವ ಮೂಲಕ ಗದ್ದಲ ಉಂಟು ಮಾಡಿದರೂ, ಸಭಾತ್ಯಾಗ ನಿರ್ಧಾರದಿಂದ ಆಡಳಿತ ಪಕ್ಷಕ್ಕೆ ವಕ್ಫ್ ವಿಚಾರವಾಗಿ ಸುದೀರ್ಘವಾದ ಉತ್ತರ ಕೊಡಲು ಅವಕಾಶ ಸಿಕ್ಕಂತಾಯಿತು.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕೈಗೊಂಡ ಸಭಾತ್ಯಾಗದ ನಿರ್ಧಾರಕ್ಕೆ ಬಿಜೆಪಿ ಸದಸ್ಯರು ಬಳಿಕ ಆಕ್ಷೇಪವನ್ನು ಎತ್ತಿದ್ದಾರೆ. ಸಭಾತ್ಯಾಗ ಮಾಡುವ ಬದಲಾಗಿ ಸದನದಲ್ಲೇ ಇದ್ದು ಗದ್ದಲ ಉಂಟು ಮಾಡಿದ್ದಲ್ಲಿ ಸರ್ಕಾರಕ್ಕೆ ತಮ್ಮನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ವಕ್ಫ್, ಬಾಣಂತಿಯರ ಸಾವು, ಭ್ರಷ್ಟಾಚಾರದ ಆರೋಪ ಸೇರಿದಂತೆ ಸರ್ಕಾರದ ವಿರುದ್ಧ ವಿಪಕ್ಷಗಳ ಬಳಿ ಹಲವು ಅಸ್ತ್ರಗಳಿದ್ದವು. ಅದರೆ ಇದನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ. ಮಾಜಿ ಸಿ.ಎಂ ಎಸ್.ಎಂ ಕೃಷ್ಣ ನಿಧನ ಸೇರಿದಂತೆ ಮಾಜಿ ಶಾಸಕರು, ಮಹನೀಯರ ನಿಧನದ ಸಂತಾಪ ಸೂಚನಾ ನಿರ್ಣಯದ ಮೇಲಿನ ಚರ್ಚೆಗೆ ಈ ಬಾರಿ ಹೆಚ್ಚಿನ ಅವಧಿ ತೆಗೆದುಕೊಳ್ಳಲಾಗಿರುವುದು ವಿಪಕ್ಷಗಳಿಗೆ ವಿಚಾರ ಪ್ರಸ್ತಾಪಕ್ಕೆ ಹಿನ್ನಡೆಯಾಗಲು ಒಂದು ಕಾರಣ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಾರ್ಯವೈಖರಿಯ ಬಗ್ಗೆ ಬಿಜೆಪಿ ಶಾಸಕರಲ್ಲಿ ಪೂರ್ಣ ಪ್ರಮಾಣದಲ್ಲಿ ಸಮ್ಮತಿ ಇಲ್ಲದಂತಾಗಿದೆ. ಹಲವು ಶಾಸಕರು ಆಂತರಿಕವಾಗಿ ಈ ನಿಟ್ಟಿನಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಸದನದಲ್ಲಿ ವಿಚಾರಗಳನ್ನು ಸ್ಪಷ್ಟವಾಗಿ ಪ್ರಸ್ತಾಪ ಮಾಡಿ ತಂತ್ರಗಾರಿಕೆ ರೂಪಿಸುವಲ್ಲಿ ಆರ್ ಅಶೋಕ್ ಎಡವಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಇನ್ನು ಮೈತ್ರಿ ಪಕ್ಷವಾದ ಜೆಡಿಎಸ್ ಜೊತೆಗೂ ಬಿಜೆಪಿ ಸಮನ್ವಯದ ಕೊರತೆ ಈ ಬಾರಿ ಸದನದಲ್ಲಿ ಎದ್ದು ಕಾಣುತ್ತಿತ್ತು. ವಕ್ಫ್ ವಿಚಾರವಾಗಿ ಬಿಜೆಪಿ ಸಭಾತ್ಯಾಗ ಮಾಡಿದರೆ ಜೆಡಿಎಸ್ ಶಾಸಕಾಂಗ ಪಕ್ಷದ ನೇತೃತ್ವದಲ್ಲಿ ಶಾಸಕರು ಸದನದಲ್ಲೇ ಉಳಿದುಕೊಂಡರು. ವಕ್ಫ್ ವಿಚಾರವಾಗಿ ಭಿನ್ನ ನಿಲುವು ಹೊಂದಿದ್ದ ಕಾರಣದಿಂದಾಗಿ ಸದನದಲ್ಲೇ ಉಳಿದುಕೊಂಡಿರುವುದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ತಿಳಿಸಿದರು. ಅಲ್ಲದೆ, ಜಿಟಿ ದೇವೇಗೌಡ ಕೂಡಾ ಸಚಿವರ ಉತ್ತರಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದರು.
ಒಟ್ಟಿನಲ್ಲಿ ಒಂದು ಸರ್ಕಾರಿ ರಜೆಯನ್ನು ಹೊರತು ಪಡಿಸಿ 8 ದಿನಗಳ ಕಾಲ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಪ್ರದರ್ಶನ ಗಮನ ಸೆಳೆಯುವಂತಿರಲಿಲ್ಲ. ಇದು ಬಿಜೆಪಿಯಲ್ಲಿನ ಗೊಂದಲ ಹಾಗೂ ತಂತ್ರಗಾರಿಕೆ ವೈಫಲ್ಯ ಸರ್ಕಾರಕ್ಕೆ ವರವಾಗಿ ಮಾರ್ಪಟ್ಟಿದೆ ಎಂಬುವುದಲ್ಲಿ ಸಂಶಯವಿಲ್ಲ.















Comments