ಸದನದಲ್ಲೂ ಸಮನ್ವಯತೆಯ ಕೊರತೆ : ಸದನದಲ್ಲಿ ಜಗಜ್ಜಾಹೀರಾದ ಬಿಜೆಪಿ ಬಣ ಬಡಿದಾಟ
- Ananthamurthy m Hegde
- Dec 10, 2024
- 1 min read

ಬೆಳಗಾವಿ: ಬೆಳಗಾವಿಯಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭಾಗಿದ್ದು, ಮೊದಲ ದಿನವೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದ್ದ ಬಿಜೆಪಿ, ಸದನದಲ್ಲೂ ಸಮನ್ವಯದ ಕೊರತೆಯಿಂದ ತಾನೇ ಇಕ್ಕಟ್ಟಿಗೆ ಸಿಲುಕಿದೆ ಘಟನೆ ನಡೆಯಿತು.
ಪಕ್ಷದೊಳಗಿನ ಬಣ ಬಡಿದಾಟ ಮುಂದುವರೆದಿದ್ದು, ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಗುಂಪು ರಾಜ್ಯ ಬಿಜೆಪಿ ನಾಯಕತ್ವವನ್ನು, ವಿಶೇಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಬಹಿರಂಗವಾಗಿ ಟೀಕಿಸುತ್ತಿದೆ.
ಇಂದು ವಕ್ಫ್ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷ ನಾಯಕ ಆರ್.ಅಶೋಕ ಅವರು ಸ್ಪೀಕರ್ ಯು.ಟಿ.ಖಾದರ್ ಅವರನ್ನು ಒತ್ತಾಯಿಸುತ್ತಿದ್ದಂತೆ ಏಕಾಏಕಿ ಯತ್ನಾಳ್ ಪ್ರತ್ಯೇಕ ವಿಷಯ ಪ್ರಸ್ತಾಪಿಸಿದರು.
ಸಂತಾಪ ಸೂಚಿಸಿದ ಕೂಡಲೇ, ಅಶೋಕ್ ಅವರು, ಸಿ ಎನ್ ಅಶ್ವಥ್ ನಾರಾಯಣ್ ಸೇರಿದಂತೆ ಕೆಲವು ಬಿಜೆಪಿ ಶಾಸಕರೊಂದಿಗೆ ವಕ್ಫ್ ವಿಷಯದ ಚರ್ಚೆಯನ್ನು ಮೊದಲು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ವಕ್ಫ್ ವಿಚಾರದಲ್ಲಿ ಚರ್ಚೆಗೆ ಸರ್ಕಾರ ಸಿದ್ಧವಿದ್ದು, ಬಳಿಕ ಅವಕಾಶ ನೀಡುವಂತೆ ಕೇಳಿಕೊಂಡ ಆಡಳಿತ ಪಕ್ಷದ ಸದಸ್ಯರೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿದ್ದ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ಸದಸ್ಯರ ಮನವೊಲಿಸಲು ಸ್ಪೀಕರ್ ಯು.ಟಿ.ಖಾದರ್ ಪ್ರಯತ್ನಿಸಿದರು.
ಬೆಳಗಾವಿ: ಪಂಚಮಸಾಲಿಗರ ಪ್ರತಿಭಟನೆಗೆ ನಿರ್ಬಂಧ, ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಪ್ರತಿಭಟನೆ
Advertisement
ಈ ವೇಳೆ ಏಕಾಏಕಿ ಮಧ್ಯ ಪ್ರವೇಶಿಸಿದ ಯತ್ನಾಳ್ ಅವರು ಪಂಚಮಸಾಲಿ ಲಿಂಗಾಯತ ಸಮುದಾಯದವರು ನಾಳೆ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಬೆಳಗಾವಿ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದರು.
ಯತ್ನಾಳ್ ಮತ್ತು ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್, ಸಿ ಸಿ ಪಾಟೀಲ್ ಮುಂತಾದ ಶಾಸಕರು ಸದನದ ಬಾವಿಗೆ ನುಗ್ಗಿ ಸರ್ಕಾರ ಮತ್ತು ಮುಖ್ಯಮಂತ್ರಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. ಈ ನಡೆಯಿಂದ ಆಶ್ಚರ್ಯಚಕಿತರಾದ ಅಶೋಕ್ ಮತ್ತು ಇತರರು ಪರಸ್ಪರ ಮುಖ ನೋಡಿಕೊಂಡರು.
ಈ ಹಂತದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅವರು, ‘ಬಿಜೆಪಿಯಲ್ಲಿ ಎರಡು ಬಣಗಳಿವೆ. ಒಂದು ಬಣ ಸದನದ ಬಾವಿಯಲ್ಲಿದ್ದಾರೆ, ಇನ್ನೊಂದು ಬಣ ಇಲ್ಲ. ಇಬ್ಬರಲ್ಲಿ ಯಾರನ್ನು ಪರಿಗಣಿಸಬೇಕು’ ಎಂದು ಹೇಳಿದರು. ಇದನ್ನು ಅನುಸರಿಸಿ ಅಶೋಕ್ ಮತ್ತು ಇತರ ಶಾಸಕರು ಯತ್ನಾಳ್ ಎತ್ತಿದ ಸಮಸ್ಯೆಗೆ ಧ್ವನಿಗೂಡಿಸಿದರು.
ಒಂದು ಸಮುದಾಯದ ಪ್ರತಿಭಟನೆಯ ಮೇಲೆ ಏಕೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ತಿಳಿಯಲು ಬಯಸಿದ ಅವರು, "ಈ ಸರ್ಕಾರದ ವಿರುದ್ಧ ಯಾರೂ ಧ್ವನಿ ಎತ್ತಲು ಸಾಧ್ಯವಿಲ್ಲವೇ? ಇದು ಹಿಟ್ಲರ್ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು
Comments