top of page

ಹೊಸ ಬಾಂಬ್ ಸಿಡಿಸಿದ ಅರವಿಂದ ಕೇಜ್ರಿವಾಲ್

  • Writer: Ananthamurthy m Hegde
    Ananthamurthy m Hegde
  • Dec 25, 2024
  • 1 min read
ree

ನವದೆಹಲಿ: ಮುಂದಿನ ಕೆಲವೇ ದಿನಗಳಲ್ಲಿ ದೆಹಲಿ ಮುಖ್ಯಮಂತ್ರಿ ಅತಿಶಿ ಅವರನ್ನು ನಕಲಿ ಪ್ರಕರಣಗಳಲ್ಲಿ ಸಿಲುಕಿಸಿ ಬಂಧಿಸುವ ಮತ್ತು 2025ರ ದೆಹಲಿ ವಿಧಾನಸಭೆ ಚುನಾವಣೆಗೆ ಮುನ್ನ ಪಕ್ಷದ ಹಿರಿಯ ನಾಯಕರ ಮೇಲೆ ದಾಳಿ ನಡೆಸಲು ಯೋಜನೆ ರೂಪುಗೊಳ್ಳುತ್ತಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ.

ಎಎಪಿ ದೆಹಲಿಯ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವ ಸಂಜೀವಿನಿ ಯೋಜನೆಯನ್ನು ಘೋಷಿಸಿದೆ. ಆದರೆ, ಬುಧವಾರ ಪತ್ರಿಕೆಗಳಲ್ಲಿ ಪ್ರಕಟವಾದ ಸಾರ್ವಜನಿಕ ಪ್ರಕಟಣೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 'ಅಂತಹ ಯಾವುದೇ ಸಂಜೀವಿನಿ ಯೋಜನೆಯು ಅಸ್ತಿತ್ವದಲ್ಲಿಲ್ಲ'. ವಯಸ್ಸಾದ ನಾಗರಿಕರಿಂದ ವೈಯಕ್ತಿಕ ಡೇಟಾವನ್ನು ಸಂಗ್ರಹಿಸಲು ಯಾರಿಗೂ ಅಧಿಕಾರ ನೀಡಿಲ್ಲ ಮತ್ತು ಯಾವುದೇ ಕಾರ್ಡ್ ಒದಗಿಸುತ್ತಿಲ್ಲ ಎಂದಿದೆ. ಈ ಯೋಜನೆಯ ಹೆಸರಿನಲ್ಲಿ ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷವು ಮಾಹಿತಿಯನ್ನು ಸಂಗ್ರಹಿಸುವುದು ವಂಚನೆಯಾಗಿರುತ್ತದೆ ಎಂದು ಹೇಳಿದೆ.

ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವಿನಿಯಂತಹ ಕಲ್ಯಾಣ ಯೋಜನೆಗಳನ್ನು ಎಎಪಿ ಸರ್ಕಾರ ಘೋಷಿಸಿರುವುದು ಕೆಲವರಿಗೆ ಗಲಿಬಿಲಿ ಉಂಟುಮಾಡಿದೆ. ಹೀಗಾಗಿ, ದೆಹಲಿ ಮುಖ್ಯಮಂತ್ರಿ ಅತಿಶಿ ಅವರನ್ನು ಶೀಘ್ರದಲ್ಲೇ ನಕಲಿ ಪ್ರಕರಣದಲ್ಲಿ ಸಿಲುಕಿಸಿ ಬಂಧಿಸುವ ಸಾಧ್ಯತೆ ಇದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

'ಈ ಜನರು ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವಿನಿ ಯೋಜನೆಯಿಂದ ತೀವ್ರ ಅಸಮಾಧಾನಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅತಿಶಿ ಅವರನ್ನು ನಕಲಿ ಕೇಸ್ ಹಾಕಿ ಬಂಧಿಸಲು ಯೋಜನೆ ರೂಪಿಸಿದ್ದಾರೆ. ಅದಕ್ಕೂ ಮುನ್ನ ಎಎಪಿಯ ಹಿರಿಯ ನಾಯಕರ ಮೇಲೆ ತನಿಖಾ ಸಂಸ್ಥೆಗಳಿಂದ ದಾಳಿ ನಡೆಸಲಾಗುವುದು. ನಾನು ಇಂದು 12 ಗಂಟೆಗೆ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸುತ್ತೇನೆ' ಎಂದು ಕೇಜ್ರಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಎಪಿ ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವನಿ ಯೋಜನೆಗಳನ್ನು ಘೋಷಿಸಿದೆ. ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಈ ಎರಡು ಯೋಜನೆಗಳ ನೋಂದಣಿ ಪ್ರಕ್ರಿಯೆಗೆ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಚಾಲನೆ ನೀಡಿದ್ದಾರೆ ಮತ್ತು ಮನೆ-ಮನೆ ಪ್ರಚಾರ ನಡೆಸಿದ್ದಾರೆ.

Comments


Top Stories

bottom of page