೨೦೨೮ ರ ವೇಳೆಗೆ ೮೦ ಕೋಟಿ ಪ್ರವಾಸಿಗರನ್ನು ಆಕರ್ಷಿಸುವ ಗುರಿ : ಉತ್ತರ ಪ್ರದೇಶ ಸರಕಾರದ ಮಹತ್ತರ ಹೆಜ್ಜೆ
- Ananthamurthy m Hegde
- Dec 9, 2024
- 1 min read

ಉತ್ತರ ಪ್ರದೇಶವು ತಾಜ್ ಮಹಲ್, ಆಗ್ರಾ ಕೋಟೆ, ಅಯೋಧ್ಯೆಯ ರಾಮಮಂದಿರ ಸೇರಿದಂತೆ ಅನೇಕ ಆಕರ್ಷಣೆಗಳಿಂದ ಜನರನ್ನು ಸೆಳೆಯುತ್ತದೆ. ಸಾಮಾನ್ಯವಾಗಿ ಪ್ರತಿಯೊಂದು ರಾಜ್ಯವು ತನ್ನ ಪ್ರವಾಸೋದ್ಯಮವನ್ನು ಹೆಚ್ಚಿಸುವ ಬಗ್ಗೆ ಅಲೋಚಿಸುತ್ತದೆ. ಇದರ ಮೂಲಕ ಸಾಕಷ್ಟು ಹಣವನ್ನು ಸಂಗ್ರಹಿಸಬಹುದು. ಈ ಹಿಂದೆ ಕೋವಿಡ್‌ನಂತಹ ಕಾಲದಲ್ಲಿಯೂ ಅತಿ ಹೆಚ್ಚು ಗಳಿಕೆಯನ್ನು ತಂದು ಕೊಟ್ಟ ಸ್ಮಾರಕಗಳಲ್ಲಿ ತಾಜ್ ಮಹಲ್ ಕೂಡ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ರಾಜ್ಯವು ಕೂಡ ಪ್ರವಾಸೋದ್ಯಮ ಹೆಚ್ಚಿಸಲು ಶ್ರಮಿಸುತ್ತಿದೆ.
ಹೌದು, 2028ರ ವೇಳೆಗೆ 80 ಕೋಟಿ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ಉತ್ತರ ಪ್ರದೇಶ ರಾಜ್ಯವು ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ. ಸುಧಾರಿತ ಮೂಲಸೌಕರ್ಯ ಮತ್ತು ಕಾರ್ಯತಂತ್ರದ ಅಭಿವೃದ್ಧಿ ಉಪಕ್ರಮಗಳ ಮೂಲಕ ಪ್ರವಾಸೋದ್ಯಮ ಜಗತ್ತಿನಲ್ಲಿ ಸದ್ದು ಮಾಡುತ್ತಿದೆ.
ಆಗ್ರಾದ ತಾಜ್ ಮಹಲ್ ಮತ್ತು ಅಯೋಧ್ಯೆಯ ರಾಮಮಂದಿರ ಸೇರಿದಂತೆ ಸಾಂಪ್ರದಾಯಿಕ ಹೆಗ್ಗುರುತುಗಳಿಗೆ ರಾಜ್ಯವು ಹೆಸರುವಾಸಿಯಾಗಿದೆ. ಉತ್ತರ ಪ್ರದೇಶವು ಭಾರತದ ಕೆಲವು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಂದರ್ಶಕರನ್ನು ಸ್ವಾಗತಿಸುವ ಬಗ್ಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಸರ್ಕಾರದ ವಕ್ತಾರರ ಪ್ರಕಾರ, ಈ ಉಪಕ್ರಮಗಳು ಈಗಾಗಲೇ ಸಂದರ್ಶಕರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿವೆ. ಕಳೆದ ವರ್ಷ (2023), ಉತ್ತರ ಪ್ರದೇಶವು 48 ಕೋಟಿ ಪ್ರವಾಸಿಗರನ್ನು ಸ್ವಾಗತಿಸಿತು. ಇದು ಹಿಂದಿನ ವರ್ಷಗಳಿಗಿಂತ ಗಮನಾರ್ಹ ಏರಿಕೆಯಾಗಿದೆ.
ಅದೇ ರೀತಿ, 2028 ರ ವೇಳೆಗೆ ಈ ಸಂಖ್ಯೆಯನ್ನು 80 ಕೋಟಿಗೆ ವಿಸ್ತರಿಸುವ ಬಗ್ಗೆ ಸರ್ಕಾರವು ದೃಢವಾದ ಗುರಿಯನ್ನು ಹೊಂದಿದೆ. ಈ ಮಹತ್ವಾಕಾಂಕ್ಷೆಯ ಗುರಿಯು ಪ್ರವಾಸೋದ್ಯಮ ವಲಯದ ಒಟ್ಟು ಮೌಲ್ಯವರ್ಧನೆಯನ್ನು (GVA) INR 70,000 ಕೋಟಿಗೆ ಹೆಚ್ಚಿಸುತ್ತದೆ ಎಂಬ ಭರವಸೆ ಹೊಂದಿದೆ. 2017 ರಲ್ಲಿ INR 11,000 ಕೋಟಿ ವರದಿಯಾಗಿದೆ. ಈ ಉಪಕ್ರಮವನ್ನು ಜಾರಿಗೊಳಿಸಲು ರಾಜ್ಯದಾದ್ಯಂತ 12 ಹೊಸ ಪ್ರವಾಸೋದ್ಯಮ ಸರ್ಕ್ಯೂಟ್‌ಗಳ ಅಭಿವೃದ್ಧಿ ಸೇರಿದಂತೆ ಹಲವಾರು ಕಾರ್ಯತಂತ್ರವನ್ನು ರೂಪಿಸುತ್ತಿದೆ.
ಅಂಕಿಅಂಶಗಳ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ, ಉತ್ತರ ಪ್ರದೇಶವು ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿದೆ. 2016-17ರಲ್ಲಿ ಸಂದರ್ಶಕರ ಸಂಖ್ಯೆ 23 ಕೋಟಿಯಿಂದ 2023-24ರಲ್ಲಿ 48 ಕೋಟಿಗೆ ಏರಿತು. ಇದಕ್ಕಾಗಿ ಪ್ರವಾಸಿಗರ ಅನುಕೂಲಕ್ಕಾಗಿ ವಸತಿ ಆಯ್ಕೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಯೋಜಿಸುತ್ತಿದೆ.
ವಾರಣಾಸಿ, ಕಾನ್ಪುರ್, ಆಗ್ರಾ, ಲಖನೌ ಮುಂತಾದವುಗಳನ್ನು ರಾಜ್ಯದ ಅತ್ಯಂತ ಪ್ರಮುಖ ಮತ್ತು ಪ್ರಸಿದ್ಧ ನಗರಗಳಾಗಿದ್ದು, ಅನೇಕ ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿವೆ. ಇವುಗಳನ್ನು ನೋಡಲು ದೇಶೀಯ ಮತ್ತು ವಿದೇಶಿ ಪ್ರವಾಸಿಗರು ರಾಜ್ಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ.















Comments