top of page

೪೩ ವರ್ಷಗಳ ಬಳಿಕ ಭಾರತೀಯ ಪ್ರಧಾನಿಯಿಂದ ಕುವೈತ್ ಪ್ರವಾಸ

  • Writer: Ananthamurthy m Hegde
    Ananthamurthy m Hegde
  • Dec 21, 2024
  • 2 min read
ree

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರದಿಂದ ಎರಡು ದಿನಗಳ ಕಾಲ ಗಲ್ಫ್‌ ರಾಷ್ಟ್ರ ಕುವೈತ್‌ಗೆ ಪ್ರವಾಸ ಕೈಗೊಂಡಿದ್ದು, 43 ವರ್ಷಗಳ ಬಳಿಕ ಪಶ್ಚಿಮ ಏಷ್ಯಾ ರಾಷ್ಟ್ರಕ್ಕೆ ಭಾರತದ ಪ್ರಧಾನಿ ನೀಡುತ್ತಿರುವ ಮೊದಲ ಭೇಟಿಯಾಗಿದೆ.

ಕುವೈತ್‌ನ ಅಮೀರ್, ಶೇಖ್‌ ಮಿಶಾಲ್‌ ಅಲ್‌ ಅಹ್ಮದ್‌ ಅಲ್‌ ಜಬೇರ್‌ ಅಲ್‌ ಸಬ್ಹಾ ಅವರ ಆಹ್ವಾನದ ಮೇರೆಗೆ ಮೋದಿ ಕುವೈತ್‌ಗೆ ತೆರಳುತ್ತಿದ್ದಾರೆ. ಭೇಟಿ ವೇಳೆ ಮೋದಿಯವರು ಅಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ ಜೊತೆಗೆ ಕುವೈತ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಭೇಟಿಯು ಭಾರತ ಮತ್ತು ಕುವೈತ್‌ ನಡುವಿನ ಬಹುಮುಖಿ ಸಂಬಂಧವನ್ನು ಬಲಪಡಿಸಲು ನೆರವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಕುವೈತ್‌ನಲ್ಲಿಂದು ನಡೆಯುವ ʻಹಾಲಾ ಮೋದಿ ಮೆಗಾ ಡಯಾಸ್ಪೊರಾʼ ಕಾರ್ಯಕ್ರಮಕ್ಕೆ ಈಗಾಗಲೇ ವೇದಿಕೆ ಸಿದ್ಧಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸುಮಾರು 5,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಅಭಿವೃದ್ಧಿ ಪಡಿಸುವ ಸಲುವಾಗಿ ಮೋದಿ ಭೇಟಿ ನೀಡುತ್ತಿದ್ದಾರೆ. ಮೊದಲು ಬಯಾನ್ ಅರಮನೆಯಲ್ಲಿ ಗೌರವಾನ್ವಿತ ಗೌರವ ಸ್ವೀಕರಿಸಲಿದ್ದಾರೆ. ಬಳಿಕ ಕುವೈತ್ ನಾಯಕತ್ವದೊಂದಿಗೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ರಾಜಕೀಯ, ವ್ಯಾಪಾರ, ಹೂಡಿಕೆ, ಇಂಧನ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳು ಹಾಗೂ ಇದಕ್ಕಾಗಿ ಉಭಯ ರಾಷ್ಟ್ರಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ. ನಂತರ ಔತಣಕೂಟದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಅರಣು ಕುಮಾರ್ ಚಟರ್ಜಿ ಮಾಹಿತಿ ನೀಡಿದ್ದಾರೆ.

ಪ್ರಧಾನಿಗಳ ಈ ಭೇಟಿಯು ಭವಿಷ್ಯದಲ್ಲಿ ಉತ್ತಮ ಸಹಕಾರಕ್ಕಾಗಿ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ. ಭಾರತ ಮತ್ತು ಗಲ್ಫ್‌ ಸಹಕಾರ ಮಂಡಳಿಯ ನಡುವಿನ ಬಾಂಧವ್ಯ ಹೆಚ್ಚಿಸುತ್ತದೆ. ಮುಖ್ಯವಾಗಿ, ಭಾರತ ಸರ್ಕಾರವು ವಿದೇಶದಲ್ಲಿರುವ ಎಲ್ಲಾ ಕಾರ್ಮಿಕರ ಕಲ್ಯಾಣಕ್ಕೆ ಪ್ರಾಮುಖ್ಯತೆ ನೀಡುತ್ತಲೇ ಇದೆ. ಕುವೈತ್‌ನಲ್ಲಿ ಸದ್ಯ 10 ಲಕ್ಷ ಭಾರತೀಯರು ಇದ್ದಾರೆ. ಈ ಕಾರಣಕ್ಕಾಗಿ ಅಲ್ಲಿನ ಕಾರ್ಮಿಕ ಸಮುದಾಯಕ್ಕೂ ಭೇಟಿ ನೀಡಿವ ಯೋಜನೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿಯವರು ಕೂಡ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಕುವೈತ್'ಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದ ಪೋಸ್ಟ್ ನಲ್ಲೇನಿದೆ?

ಇಂದು ಮತ್ತು ನಾಳೆ ನಾನು ಕುವೈತ್‌ಗೆ ಭೇಟಿ ನೀಡುತ್ತಿದ್ದೇನೆ. ಈ ಭೇಟಿಯು ಕುವೈತ್‌ನೊಂದಿಗಿನ ಭಾರತದ ಐತಿಹಾಸಿಕ ಸಂಬಂಧವನ್ನು ಗಾಢವಾಗಿಸುತ್ತದೆ. ಕುವೈತ್‌ನ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ ಅಮೀರ್ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ. ಇಂದು ಸಂಜೆ, ನಾನು ಕುವೈತ್ ನಲ್ಲಿರುವ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಲಿದ್ದೇನೆ ಮತ್ತು ಅರೇಬಿಯನ್ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತೇನೆಂದು ಹೇಳಿದ್ದಾರೆ.

1981ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಕುವೈತ್‌ಗೆ ಭೇಟಿ ನೀಡಿದ್ದರು. ಅದಾದ ಬಳಿಕ 2009ರಲ್ಲಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಕುವೈತ್ ಪ್ರವಾಸ ಕೈಗೊಂಡಿದ್ದರು. 2013ರಲ್ಲಿ ಕುವೈತ್‌ನ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿ ಮತ್ತು ಕುವೈತ್‌ ದೊರೆ ಪರಸ್ಪರ ಭೇಟಿಯಾಗಿದ್ದರು.



Comments


Top Stories

bottom of page