16 ವರ್ಷಗಳ ನಂತರ ಕೇರಳಕ್ಕೆ ಬೇಗನೆ ಮುಂಗಾರು ಆಗಮನ!
- Ananthamurthy m Hegde
- 5 hours ago
- 1 min read

ಭಾರತೀಯ ಹವಾಮಾನ ಇಲಾಖೆ ಕೇರಳಕ್ಕೆ ನೈಋತ್ಯ ಮಾನ್ಸೂನ್ ಆಗಮನವಾಗುವ ಸಾಧ್ಯತೆಯನ್ನು ದೃಢಪಡಿಸಿದ್ದು, ಈ ಬಾರಿ ಮಾನ್ಸೂನ್ ಸಾಮಾನ್ಯ ದಿನಾಂಕಕ್ಕಿಂತ ಮುಂಚಿತವಾಗಿ, ಅಂದರೆ ಮೇ 27 ರಂದು ಕೇರಳವನ್ನು ತಲುಪಲಿದೆ ಎಂದು ತಿಳಿಸಿದೆ. ಇನ್ನು ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ ಈಗಾಗಲೇ ಮಳೆ ಜೋರಾಗಿಯೇ ಬರುತ್ತಿದೆ. ಇದರ ಜೊತೆಗೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈ ಪ್ರದೇಶಗಳಿಗೆ ರೆಡ್ ಅಲರ್ಟ್ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕೇರಳದಲ್ಲಿ ಮಾನ್ಸೂನ್ ಆರಂಭ
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ನೈಋತ್ಯ ಮಾನ್ಸೂನ್ ಇನ್ನೆರಡು ದಿನಗಳಲ್ಲಿ ಕೇರಳವನ್ನು ತಲುಪಲಿದೆ. ಸಾಮಾನ್ಯವಾಗಿ ಜೂನ್ 1 ರಂದು ಕೇರಳಕ್ಕೆ ಆಗಮಿಸುವ ಮಾನ್ಸೂನ್ ಈ ಬಾರಿ 4 ದಿನ ಮುಂಚಿತವಾಗಿಯೇ ಪ್ರವೇಶಿಸಲಿದೆ. 2009ರ ಬಳಿಕ ಇದೇ ಮೊದಲ ಬಾರಿಗೆ ಮಾನ್ಸೂನ್ ಇಷ್ಟು ಬೇಗ ಭಾರತದ ಮುಖ್ಯ ಭೂಭಾಗವನ್ನು ತಲುಪಲಿದೆ. ಇದರಿಂದ ಕೇರಳದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಪ್ರದೇಶಗಳಲ್ಲಿ ಗುಡುಗು-ಮಿಂಚಿನೊಂದಿಗೆ ಧಾರಾಕಾರ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.
Comments