top of page

ಉಶಿರಾ ಹ್ಯಾಂಡಿಕ್ರಾಫ್ಟ್ಸ್ ಮೂಲಕ ಲಾವಂಚ ಹುಲ್ಲಿನ ಕಲಾಲೋಕ ಸೃಷ್ಟಿಸಿದ ಎಂ.ಡಿ.ಮ್ಯಾಥ್ಯೂ

  • Writer: Ananthamurthy m Hegde
    Ananthamurthy m Hegde
  • Jan 2
  • 3 min read

ಭಟ್ಕಳ: ಇದೇನು ಮನೆಯೋ ಅಥವಾ ಗಂಧರ್ವ ಲೋಕವೋ?, ಇಲ್ಲಿನ ಆರ್ಟ್ ಗ್ಯಾಲರಿಗೆ ಕಾಲಿಟ್ಟರೆ ಸಾಕು ಆಹಾ, ಆ ಮುದವೇ ಬೇರೆ ಬಿಡಿ. ಹಾಗಾದರೆ ಯಾವ ಸ್ಥಳ? ಎಲ್ಲಿದೆ? ಇಷ್ಟು ಚೆಂದದ ಲೋಕದ ರೂವಾರಿ ಯಾರು ಅಂತ ತಿಳಿದುಕೊಳ್ಳೋಣ ಬನ್ನಿ.



ಇದು ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಬೆಂಗ್ರೆ, ಅಲ್ಲಿರುವ ಈ ಕಲಾ ಕುಠೀರದ ಹೆಸರು "ಉಶಿರಾ ಹ್ಯಾಂಡಿಕ್ರಾಫ್ಟ್ಸ್" ಈ ಉಶಿರಾ ಅಂದ್ರೆ ಏನು ಅಂತೀರಾ?

ಲಾವಂಚ ಒಂದು ಬಹುಪಯೋಗಿ ಹುಲ್ಲಿನ ಜಾತಿಯ ಗಿಡ. ಅದರಿಂದ ಅನೇಕಾನೇಕ ಉಪಯೋಗಗಳಿವೆ. ಅದರಂತೆಯೇ ಲಾವಂಚದ ಬೇರಿಂದ ಕಳೆದ 35 ವರ್ಷಗಳಿಂದ ಇಲ್ಲಿ ಕಲಾಕೃತಿಗಳನ್ನು ಸೃಷ್ಟಿಸಲಾಗುತ್ತಿದೆ. ಗಣೇಶ, ಕೃಷ್ಣ, ಪ್ರಾಣಿ, ಪಕ್ಷಿ ಎಲ್ಲವೂ ಇಲ್ಲಿ ಲಾವಂಚಮಯವಾಗಿದೆ.

ಕೇರಳ ಮೂಲದ ಎಂ.ಡಿ.ಮ್ಯಾಥ್ಯೂ ಅವರು ಈ ಉದ್ಯಮದ ಸೃಷ್ಟಿಕರ್ತರು. 35 ವರ್ಷದ ಹಿಂದೆ ಅವರು ಲಾವಂಚ ಬೆಳೆಯುತ್ತಿದ್ದರು. ಅದಾದ ಐದು ವರ್ಷಕ್ಕೆ ಲಾವಂಚದ ಕಲಾಕೃತಿಗಳನ್ನು ತಯಾರಿಸುವಲ್ಲಿ ನಿರತರಾದರು. ಈಗ ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳಿಗೆ ಲಾವಂಚ ಬೆಳೆಯಲು ಪ್ರೋತ್ಸಾಹಿಸಿ ಅವರಿಂದ ಖರೀದಿಸಿ ಉತ್ಪನ್ನ ತಯಾರಿಸುತ್ತಾರೆ. ಭಟ್ಕಳದ ಬೆಂಗ್ರೆ ಅಕ್ಷರಶಃ ಲಾವಂಚದ ಹಬ್ ಆಗಿದೆ.


ಇವರ ಪ್ರಾಡೆಕ್ಟ್ ಗಳಿಗೆ ದಕ್ಷಿಣ ಭಾರತದಲ್ಲಿ ದೊಡ್ಡ ಮಾರುಕಟ್ಟೆಯಿದೆ. ಲಾವಂಚದ ಎಣ್ಣೆ, ನೋನಿಯೂ ಉಪ ಉತ್ಪನ್ನವಾಗಿರುವ ಈ ಉಶಿರಾ ಹ್ಯಾಂಡಿಕ್ರಾಫ್ಟ. ಗೊಂಬೆಗಳು, ಅಲಂಕಾರಿಕ ವಸ್ತುಗಳು, ಮುಖವಾಡಗಳು, ವಿಗ್ರಹಗಳು ಇವಿಷ್ಟೇ ಈ ಉದ್ಯಮದ ಜೀವಾಳ. ಒಂದು ಹುಲ್ಲು ಕಡ್ಡಿಯಿಂದ ಹೊನ್ನಿನ ಮಳೆಯನ್ನೇ ಸುರಿಸಿದ ಕೀರ್ತಿ ಎಂ.ಡಿ. ಮ್ಯಾಥ್ಯೂ ಅವರಿಗೆ ಸಲ್ಲಬೇಕು.

ಬೆಂಗಳೂರು, ಚೆನ್ನೈ, ನವದೆಹಲಿ, ಮಹಾರಾಷ್ಟ್ರ, ದುಬೈ ಸೇರಿದಂತೆ ದೇಶದ ಹೊರಗೂ ಇವರ ವಸ್ತುಗಳಿಗೆ ಮನ್ನಣೆ ಇದೆ. ವಿಶೇಷವಾಗಿ ಇವರ ಕೈಯಲ್ಲಿ ಅರಳುವ ಲಾವಂಚದ ಗಣಪತಿ ಮೂರ್ತಿಗಳು ಜನರ ಮನ ಸೆಳೆದಿವೆ.

ಭಾರತವೂ ಮೂಲದಲ್ಲಿ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ನೈಪುಣ್ಯತೆ ಹಾಗೂ ಹೆಚ್ಚಿನ ಬೇಡಿಕೆ ಹೊಂದಿದ ದೇಶವಾಗಿದ್ದು, ಆದರೆ ಕಾಲಕ್ರಮೇಣ ವಿದೇಶಿ ವಸ್ತುಗಳ ಆರ್ಭಟದಿಂದ ಸ್ವದೇಶಿ ಕರಕುಶಲ ವಸ್ತುಗಳು ಕಣ್ಮರೆಯಾಗುತ್ತಿದೆ. ಆದರೆ ಇದರ ಮಧ್ಯೆ ಭಟ್ಕಳದ ಬೇಂಗ್ರೆಯಲ್ಲಿ ಉಸಿರ ಕೈಗಾರಿಕೆಯ ಉದ್ದಿಮೆ ಎಂ. ಡಿ. ಮ್ಯಾಥ್ಯೂ ತಯಾರಿಸಿದ ಲಾವಂಚ ಕರಕುಶಲ ವಸ್ತುಗಳು ಈಗ ಪ್ರಖ್ಯಾತಿ ಹೊಂದಿದ್ದು, ಭಟ್ಕಳ ತಾಲೂಕು ಇದರಿಂದ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ.

ಕಳೆದ 27 ವರ್ಷದ ಹಿಂದೆ ಭಟ್ಕಳಕ್ಕೆ ಲಾವಂಚ ಕೃಷಿಯಲ್ಲಿ ಲಾವಂಚ ಎಣ್ಣೆಯ ವ್ಯಾಪಾರ ಹಿನ್ನೆಲೆಯಲ್ಲಿ ಬಂದು ಇಲ್ಲೆ ನೆಲೆಸಿದ ಇವರು ದಿನದಿಂದ ದಿನಕ್ಕೆ ಎಣ್ಣೆ ವ್ಯಾಪಾರವೂ ವೃದ್ದಿಯಾಗುತ್ತಿದ್ದಂತೆಯೇ ಲಾವಂಚದಿಂದ ಏನಾದರು ಕರಕುಶಲ ವಸ್ತು ಅಥವಾ ಬೇರೆ ಮಾದರಿಯ ಉತ್ಪನ್ನವನ್ನು ನಡೆಸಬೇಕೆಂಬ ಇವರ ಹಂಬಲಕ್ಕೆ ಬ್ಯಾಂಕನಲ್ಲಿ ಸಾಲ ಸಿಕ್ಕಿದ್ದು ಅದೇ ರೀತಿ ತಯಾರಿಕೆಯ ವಸ್ತುವಿನ ಬಗ್ಗೆ ತರಬೇತಿ ಇಲ್ಲದೇ ಕರಕುಶಲ ವಸ್ತುಗಳನ್ನು ತಯಾರಿಸಲು ಆರಂಭಿಸಿದರು. ಮೊದ ಮೊದಲು ಉದ್ಯಮದ ಪರಿಚಯ ಜನರಿಗೆ ಆಗುವ ತನಕ ಶ್ರಮಿಸಿದ ಇವರಿಗೆ ನಂತರದ ದಿನದಲ್ಲಿ ಜನರಿಂದ ಜನರೇ ವಸ್ತುವಿನ ಪ್ರಚಾರ ಕೈಗೊಂಡು ವ್ಯಾಪಾರ ಅಭಿವೃದ್ಧಿಯಾಗ ತೊಡಗಿತು..

ಮೂಲತಃ ಉಡುಪಿಯ ಕೊಲ್ಲುರಿನವರಾದ ಇವರು ಭಟ್ಕಳದ ಬೆಂಗ್ರೆಯಲ್ಲಿ ತಮ್ಮ ವಾಸ ಆರಂಭವಾದ ಬಳಿಕ ಇಲ್ಲಿನ ಸ್ಥಳೀಯ ಜನರಿಗೆ ಮುಖ್ಯವಾಗಿ ಅಂಗವಿಕಲರಿಗೆ ಸ್ವಯಂ ಉದ್ಯೋಗ ಸಿಗಬೇಕೆಂಬ ನಿಟ್ಟಿನಲ್ಲಿ ತರಬೇತಿ ‌ನೀಡಿ ಲಾವಂಚದ ವಿವಿಧ ಮಾದರಿಯ ಉತ್ಪನ್ನ ಹಾಗೂ ವಸ್ತುಗಳ ತಯಾರಿಕೆಯನ್ನು ಆರಂಭಿಸಿದರು. ಇವರು ಈಗಾಗಲೇ 5 ಸಾವಿರಕ್ಕೂ ಅಧಿಕ ಸ್ಥಳಿಯ ಜನರಿಗೆ ಉದ್ಯೋಗ ನೀಡಿದ್ದು ಸದ್ಯಕ್ಕೆ ಇವರಲ್ಲಿ 200ಕ್ಕೂ ಅಧಿಕ ಜನರು ಕೆಲಸ ನಿರ್ವಹಿಸುತ್ತಿದ್ದಾರೆ. ಬೇಂಗ್ರೆ ಹಾಗೂ ಮುರುಡೇಶ್ವರದಲ್ಲಿ ಲಾವಂಚ ತಯಾರಿಕೆ ಘಟಕವಿದ್ದು, ಇತ್ತೀಚಿನ ದಿನದಲ್ಲಿ ಲಾವಂಚ ಬಳ್ಳಿಯಿಂದ 200ಕ್ಕೂ ಹೆಚ್ಚಿನ ಮಾದರಿ ಕರಕುಶಲ ವಸ್ತು ತಯಾರಾಗುತ್ತಿದೆ.‌

ಲಾವಂಚ ಕೃಷಿಯಲ್ಲಿ ನಿಪುಣರು:

ಇವರ ಮೂಲ ಉದ್ಯೋಗ ಲಾವಂಚ ಗಿಡಗಳಿಂದ ಎಣ್ಣೆಯನ್ನು ತಯಾರಿಸಿ ಮಾರಾಟ ಮಾಡುವದಾಗಿದ್ದು ಹೊಸತನಕ್ಕೆ ಮನಸ್ಸು ಮಾಡಿ ಸದ್ಯ ಸಾಕಷ್ಟು ವಿನ್ಯಾಸದ ಕರಕುಶಲ ವಸ್ತುಗಳನ್ನು ಸ್ರಷ್ಟಿಸಿದ್ದಾರೆ.

ಹಿಂದೆ ಇಟಲಿ ದೇಶದ ರೋಮ್ ನಗರದ ವ್ಯಾಟಿಕನ್ ಸಿಟಿಯಲ್ಲಿ ವಿಶ್ವದ ಕ್ಯಾಥೋಲಿಕ್ ಚರ್ಚ್ ನ ಪರಮೋಚ್ಛ ಧರ್ಮ ಗುರುಗಳಾದ ಪೋಪ್ಫ್ರಾನ್ಸಿಸ್ ರವರ ಅಧ್ಯಕ್ಷತೆಯಲ್ಲಿ ವ್ಯಾಟಿಕನ್ ಸಿಟಿಯಲ್ಲಿ ಭಾರತದ ಬಿಷಪ್ ಗಳ ಮಹಾಸಭೆಯು ಜರುಗಿತು. ಬಿಷಪ್‍ಗಳ ಮಹಾಸಭೆಯಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಂಗ್ರೆಯ ಉಸಿರಾ ಕೈಗಾರಿಕೋದ್ಯಮಿ ಎಂ.ಡಿ.ಮ್ಯಾಥ್ಯೂ ತಯಾರಿಸಿದ ಲಾವಂಚದ ಸುಂದರವಾದ ಹಾರ ಮತ್ತು ಲಾವಂಚದಿಂದ ತಯಾರಿಸಿದ ಅಲಂಕೃತ ದಿವ್ಯ ಸಂಸ್ಕಾರದ (Holy Sacrement) ಆಕೃತಿ ಕಾಣಿಕೆಯಾಗಿ ಬೆಳ್ತಂಗಡಿಯ ಬಿಷಪ್ ಲಾರೆನ್ಸ್ ರವರ ಮೂಲಕ ಗೌರವಪೂರ್ವಕವಾಗಿ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರಿಗೆ ಉಡುಗೊರೆಯಾಗಿ ಸಮರ್ಪಿಸಲಾಯಿತು.



ಲಾವಂಚದ ಕರಕುಶಲ ವಸ್ತುಗಳನ್ನು ಮೆಚ್ಚಿಕೊಂಡ ಪೋಪ್ ಅವರು ಪ್ರಸಿದ್ಧ ವ್ಯಾಟಿಕನ್ ಮ್ಯೂಸಿಯಂನಲ್ಲಿ ಇಡಲಾಗುತ್ತದೆ ಎಂದು ಬಿಷಪ್ ಲಾರೆನ್ಸ್ ಮೂಲಕ ತಿಳಿದು ಬಂದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅದೇ ರೀತಿ ಇವರು ತಯಾರಿಸಿದ ಲಾವಂಚಕ್ಕೆ ಮನಸೋತು ಕಳೆದ ವರ್ಷ ಛತ್ತಿಸಗಡ ಮುಖ್ಯಮಂತ್ರಿ ಅವರು ಮ್ಯಾಥ್ಯೂ ಅವರನ್ನು ಸನ್ಮಾನಿಸಿ ರಾಜ್ಯದ‌ ಬುಡಕಟ್ಟು ಜನಾಂಗದವರಿಗೆ ಇದರ ತಯಾರಿಕೆಯ ವಸ್ತುಗಳ ಬಗ್ಗೆ ತರಬೇತಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.‌ ಹಾಗೂ ಜರ್ಮನಿಗೂ ಸಹ ಇವರ ಲಾವಂಚ ಮಾದರಿಯ ವಸ್ತುಗಳ ಬೇಡಿಕೆಯಿದೆ.

ಸದ್ಯ ಇವರ ಮನಸ್ಸಿನಲ್ಲಿ ನಮ್ಮಲಿಯೇ ಸಿಗುವ ಕೈಗೆಟಕುವ ಆಯುರ್ವೇದದ ಗಿಡ ಸಸ್ಯಗಳನ್ನು ಬಳಸಿ ಜನರಿಗೆ ಉಪಯುಕ್ತವಾಗುವ ಜೌಷಧಿಗಳ ತಯಾರಿಕೆ, ಜ್ಯೂಸಗಳ ತಯಾರಿಯತ್ತ ಹಂತ ಹಂತವಾಗಿ ಕಾರ್ಯವನ್ನು ಆರಂಭಿಸಿದ್ದಾರೆ. ತಮ್ಮ ತೋಟದಲ್ಲಿ ವಿವಿಧ ಮಾದರಿಯ ಔಷಧಿ ಗಿಡ, ಸಸ್ಯಗಳನ್ನು ಬೆಳೆಸಿದ್ದು ಇದರಲ್ಲಿ ಕ್ಯಾನ್ಸರ್ ರೋಗದ‌ ನಿರ್ಮೂಲನೆಗೆ ನೋನಿ ಎಂಬ ಹೆಸರಿನ ಹಣ್ಣಿನ‌ಗಿಡ ನೆಟ್ಟಿದ್ದು ಅದನ್ನು‌ ಜನರಿಗೆ ನೀಡುತ್ತಾ ಬಂದಿದ್ದಾರೆ.ಇವರು ಕೋವಿಡ್ ಸಮಯದಲ್ಲಿ ವಿಶೇಷವಾಗಿ ಸುಗಂಧಭರಿತ ಆಯುರ್ವೇದ ಗಿಡಮೂಲಿಕೆಯ ಲಾವಂಚ ಬೇರಿನ ಮುಖಗವಸು ಗಳನ್ನು ಕೂಡ ತಯಾರಿಸಿದ್ದು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.ಇವರ ಈ ಕಾರ್ಯಕ್ಕೆ ಅನೇಕ ಪ್ರಶಸ್ತಿಗಳು ದೊರಕಿದೆ

ಈ ಬಗ್ಗೆ ಬೆಂಗ್ರೆಯ ಉಸಿರ ಕೈಗಾರಿಕೆಯ ಉದ್ದಿಮೆ ಎಂ. ಡಿ. ಮ್ಯಾಥ್ಯೂ ಮಾತನಾಡಿಇತ್ತೀಚಿನ ದಿನದಲ್ಲಿ ಜನರು ಸ್ವದೇಶಿ ಉತ್ಪನ್ನಗಿಂತ ವಿದೇಶಿ ವಸ್ತುವಿಗೆ ಮಾರು ಹೋಗುತ್ತಿದ್ದಾರೆ. ಮನುಷ್ಯರು ಸದಾ ಪ್ರಕೃತಿಯ ಜೊತೆಗೆ ಇರಬೇಕಿದ್ದು, ಆಗ ಜೀವನ ಸುಂದರವಾಗಿರುತ್ತದೆ. ಲಾವಂಚ ಬೇರಿನ ಸುವಾಸನೆಯನ್ನರಿತು ಜನರಿಗೆ ಇದು ತಲುಪಬೇಕೆಂದು ಕರಕುಶಲ ವಸ್ತುವಿನಿಂದ ಸುವಾಸನೆ ವಸ್ತು ಕೈಗೆ ಸೇರಬೇಕೆಂಬ ಉದ್ದೇಶ ಈಡೇರಿದೆ. ಜನರು ಹೆಚ್ಚಾಗಿ ಸ್ವದೇಶಿ ಮಾದರಿ ವಸ್ತುವನ್ನು ಬಳಸಬೇಕು ಎಂದರು.

Comments


Top Stories

bottom of page