top of page

ಶ್ರೀ ಪ್ರಣವಾನಂದ ತೀರ್ಥ ಸ್ವಾಮಿಗಳ ಚಾತುರ್ಮಾಸ್ಯ ವ್ರತ ಸಂಪನ್ನ : ಚಂದಗುಳಿಯಲ್ಲಿ ಪೂಜೆ ಸಲ್ಲಿಸಿ ಸೀಮೋಲ್ಲಂಘನ

  • Writer: Ananthamurthy m Hegde
    Ananthamurthy m Hegde
  • 17 hours ago
  • 1 min read

ಯಲ್ಲಾಪುರ: ತಾಲೂಕಿನ ಚಂದಗುಳಿ ಘಂಟೆ ಗಣಪತಿ ದೇವಸ್ಥಾನದಲ್ಲಿ ಎರಡು ತಿಂಗಳಿನಿಂದ ಅನುಷ್ಠಾನದಲ್ಲಿದ್ದ ಶ್ರೀ ಪ್ರಣವಾನಂದ ತೀರ್ಥ ಸ್ವಾಮಿಗಳ ಚಾತುರ್ಮಾಸ್ಯ ವ್ರತ ಭಾನುವಾರ ಸಂಪನ್ನಗೊಂಡಿತು.

ಚಾತುರ್ಮಾಸ್ಯ ವ್ರತ ಮುಕ್ತಾಯದ ಅಂಗವಾಗಿ ದೇವಸ್ಥಾನದಲ್ಲಿ ರುದ್ರಾಭಿಷೇಕ ನೆರವೇರಿಸಲಾಯಿತು. ಘಂಟೆ ಗಣಪತಿಗೆ ಪೂಜೆ ಸಲ್ಲಿಸಿ, ಸೀಮೋಲ್ಲಂಘನ ಮಾಡುವ ಮೂಲಕ ಚಾತುರ್ಮಾಸ್ಯ ವ್ರತವನ್ನು ಶ್ರೀಗಳು ಸಂಪನ್ನಗೊಳಿಸಿದರು.

ಸೀಮೋಲ್ಲಂಘನದ ಪ್ರಯುಕ್ತ ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀಗಳು, ಪೂಜೆ ಸಲ್ಲಿಸಿದರು. ಆಡಳಿತ ಮಂಡಳಿಯ ಪರವಾಗಿ ಮೊಕ್ತೇಸರ ಗೋಪಾಲಕೃಷ್ಣ ಭಟ್ಟ ವೈದಿಕರಮನೆ ಹಾಗೂ ಲಕ್ಷ್ಮೀ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಭಟ್ಟ ಬಿದ್ರೆಪಾಲ ಫಲ ಸಮರ್ಪಿಸಿದರು.

ನಂತರ ಆಶೀರ್ವಚನ ನೀಡಿದ ಶ್ರೀಗಳು, ನಿತ್ಯವೂ ಗಾಯತ್ರಿ ಉಪಾಸನೆ ಮಾಡಿದರೆ ಇಷ್ಟಾರ್ಥಗಳು ಈಡೇರುತ್ತವೆ. ನಿತ್ಯವೂ ಹೆಚ್ಚು ಹೆಚ್ಚು ಗಾಯತ್ರಿ ಜಪಾನುಷ್ಠಾನ ಮಾಡುವುದರಿಂದ ಬದುಕನ್ನು ಸಾರ್ಥಕವಾಗಿಸಿಕೊಂಡ ಅನೇಕ ನಿದರ್ಶನಗಳಿವೆ. ಗಾಯತ್ರಿ ಜಪಾನುಷ್ಠಾನ ನಮ್ಮ‌ ನಿತ್ಯ ಬದುಕಿನ ಭಾಗವಾಗಬೇಕು ಎಂದರು.

ದೇವಸ್ಥಾನದ ಪುರೋಹಿತ ಡಾ.ಶಂಕರ ಭಟ್ಟ ಬಾಲೀಗದ್ದೆ, ಸಮಿತಿಯ ಉಪಾಧ್ಯಕ್ಷ ಸುಹಾಸ ಭಾಗ್ವತ, ಕಾರ್ಯದರ್ಶಿ ಮಹಾಬಲೇಶ್ವರ ಭಾಗ್ವತ ಗುಡ್ನಮನೆ, ಸದಸ್ಯರಾದ ಸುಬ್ರಾಯ ಗುಮ್ಮಾನಿ, ಶ್ರೀಕೃಷ್ಣ ಭಟ್ಟ, ಶಿವರಾಮ‌ ಭಟ್ಟ, ಮಂಜುನಅಥ ಭಾಗ್ವತ, ವಿನಾಯಕ ಭಾಗ್ವತ, ಅರ್ಚಕ ನಾರಾಯಣ ಹೆಗಡೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಚಂದಗುಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವಾರದಲ್ಲಿ ಗುರುಭವನ ನಿರ್ಮಾಣಗೊಂಡ ಮೊದಲ ವರ್ಷವೇ ನಡೆದ ಶ್ರೀ ಪ್ರಣವಾನಂದ ತೀರ್ಥ ಸ್ವಾಮಿಗಳ ಚಾತುರ್ಮಾಸ್ಯ ಹಲವು ವಿಶೇಷತೆಗಳಿಂದ ಕೂಡಿತ್ತು.

ಎರಡು ತಿಂಗಳುಗಳ ಅವಧಿಯಲ್ಲಿ ಶ್ರೀಗಳ ಸಮ್ಮುಖದಲ್ಲಿ ಹತ್ತಾರು ತಾಳಮದ್ದಲೆಗಳು, ಹರಿಕೀರ್ತನೆ, ಹಿಮ್ಮೇಳ ವೈಭವ, ಭಕ್ತಿ ಸಂಗೀತ, ಸಂಪೂರ್ಣ ಭಗವದ್ಗೀತಾ ಪಠಣ, ಭಜನೆ, ಕುಂಕುಮಾರ್ಚನೆ, ನೂತನ ಯಕ್ಷಗಾನ ಪ್ರಸಂಗ ಬಿಡುಗಡೆ, ರುದ್ರಾಭಿಷೇಕ, ಪಾದಪೂಜೆ ಸೇರಿದಂತೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡನೆದವು. ನೂರಾರು ಕಲಾವಿದರು ಕಲಾ ಸೇವೆ ಮಾಡಿ, ಶ್ರೀಗಳ ಅಶೀರ್ವಾದ ಪಡೆದರು.

Comments


Top Stories

bottom of page