top of page

ಇಡೀ ದೇಶದಲ್ಲಿ ಮತಗಳ್ಳತನವಾಗಿದೆ; ಪಿಎಂ ರಾಜೀನಾಮೆ ನೀಡಬೇಕು; ಸಿಎಂ ಆಗ್ರಹ

  • Writer: Ananthamurthy m Hegde
    Ananthamurthy m Hegde
  • Aug 8
  • 1 min read
ree

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಮತಗಳ್ಳತನವಾಗಿದೆ. ಹೀಗಾಗಿ ಮೋದಿ ಪ್ರಧಾನಿ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ. ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಆಗ್ರಹಿಸಿದ್ದಾರೆ.

ಮತಗಳ್ಳತನದ ವಿರುದ್ಧ ಇಂದು ನಗರದ ಫ್ರೀಡಂಪಾರ್ಕ್​ನಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನರೇಂದ್ರ ಮೋದಿಗೆ ಪ್ರಧಾನಿ ಕುರ್ಚಿಯಲ್ಲಿ ಕೂರುವ ನೈತಿಕ ಹಕ್ಕಿಲ್ಲ. ಈ ಕೂಡಲೇ ರಾಜೀನಾಮೆ ನೀಡಬೇಕು ಎಂದರು.

ಚುನಾವಣಾ ಆಯೋಗ ಬಿಜೆಪಿಯ ಶಾಖಾ ಕಚೇರಿ ಆಗಿದೆ. ಮತಗಳ್ಳತನದ ವಿರುದ್ಧ ಕರ್ನಾಟಕ ರಾಜ್ಯದಿಂದ ಆರಂಭವಾಗಿರುವ ಪ್ರತಿಭಟನಾ ಅಭಿಯಾನ ಇಡೀ ದೇಶಾದ್ಯಂತ ವ್ಯಾಪಿಸಲಿದೆ. ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ಅಧ್ಯಯನ ಮಾಡಿ, ಮತದಾನದ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿ ದಾಖಲೆಗಳ ಸಮೇತ ದೇಶದ ಜನರ ಮುಂದೆ ಇಟ್ಟಿದ್ದಾರೆ.

ಚುನಾವಣಾ ಆಯೋಗ ಸಂವಿಧಾನದ ಅಡಿಯಲ್ಲಿ ನ್ಯಾಯಬದ್ದವಾಗಿ ನಡೆದುಕೊಳ್ಳಬೇಕು. ಸಂವಿಧಾನ ಕೊಟ್ಟಿರುವ ಮತದಾನದ ಮೂಲಭೂತ ಹಕ್ಕನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ದೇಶದ ಜನತೆ ಅವಕಾಶ ಕೊಡುವುದಿಲ್ಲ ಎಂದರು.

ಮನುವಾದಿಗಳು ಸಂವಿಧಾನ ವಿರೋಧಿಗಳು. ಇವರು ಸಂವಿಧಾನದ ಪ್ರಕ್ರಿಯೆಯನ್ನೇ ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ವಂಚನೆ ಕಾರಣದಿಂದ ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿದೆಯೇ ಹೊರತು ಜನಾಭಿಪ್ರಾಯ ಕಾಂಗ್ರೆಸ್ ಪರವಾಗಿಯೇ ಇತ್ತು ಎನ್ನುವುದು ಈಗ ಗೊತ್ತಾಗಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 14 ಸೀಟುಗಳನ್ನು ಗೆಲ್ಲಬೇಕಿತ್ತು. ಆದರೆ ಮತಗಳ್ಳತನದ ಕಾರಣದಿಂದ ನಾವು ಸೋತಿದ್ದೇವೆ. ಇವಿಎಂ ಬಂದ ಮೇಲೆ ಇವನ್ನು ದುರುಪಯೋಗ ಮಾಡಿಕೊಳ್ಳುವ ಕೆಲಸ ಆಗುತ್ತಿರುವುದು ಈಗ ದಾಖಲೆ ಸಮೇತ ಸಿಕ್ಕಿಬಿದ್ದಿದ್ದಾರೆ.

ರಾಹುಲ್ ಗಾಂಧಿಯಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗೆ ಚಳವಳಿ ಆರಂಭವಾಗಿದೆ. ಇದಕ್ಕೆ ಇಡೀ ರಾಜ್ಯದ ಜನತೆ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದರು.

ಚುನಾವಣಾ ಆಯೋಗ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಕೊಟ್ಟಿದ್ದು, ಮತದಾನ ನಮ್ಮ ಮೂಲಭೂತ ಹಕ್ಕು, ನಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Comments


Top Stories

bottom of page