ಉದಾರೀಕರಣದ ಹರಿಕಾರ ಮನಮೋಹನ್ ಸಿಂಗ್
- Ananthamurthy m Hegde
- Dec 27, 2024
- 1 min read

ಭಾರತದ ಆರ್ಥಿಕ ಸುಧಾರಣೆಗಳ ಹರಿಕಾರ, ಉದಾರೀಕರಣದ ಹರಿಕಾರ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ತಮ್ಮ 92ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಬಹುತೇಕ ವೀಲ್ಹ್ ಚೇರ್‌ನಲ್ಲೇ ಸಂಚರಿಸುತ್ತಿದ್ದರು. ಅವರು ಗುರುವಾರ ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿಧನರಾದರು. ಮನಮೋಹನ ಸಿಂಗ್ ಅವರ ನಿಧನದ ಗೌರವಾರ್ಥ ಶುಕ್ರವಾರ ಸರಕಾರಿ ರಜೆ ಘೋಷಿಸಲಾಗಿದೆ. ಜೊತೆಗೆ, ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.ಈಗ ಪಾಕಿಸ್ತಾನದ ಭಾಗವಾಗಿರುವ ಹಳ್ಳಿಯೊಂದರಲ್ಲಿ 1932ರ ಸೆಪ್ಟೆಂಬರ್ 26ರಂದು ಹುಟ್ಟಿದ ಮನಮೋಹನ ಸಿಂಗ್, ದೇಶವು ಸ್ವತಂತ್ರಗೊಂಡ ಸಮಯದಲ್ಲಿ ಭಾರತಕ್ಕೆ ವಲಸೆ ಬಂದವರು. ಅಮೃತಸರದ ಹಿಂದೂ ಕಾಲೇಜು ಮತ್ತು ಪಂಜಾಬ್ ಯೂನಿವರ್ಸಿಟಿಯಲ್ಲಿ ಅಧ್ಯಯನದ ಬಳಿಕ ತನ್ನ ಜ್ಞಾನದ ಹಸಿವಿನಿಂದಲೇ ಬ್ರಿಟನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಪೂರೈಸಿದರು.ದೇಶದ ಮೊದಲ ಸಿಖ್ ಧರ್ಮೀಯ ಪ್ರಧಾನಿ ಎನ್ನುವ ಖ್ಯಾತಿ ಅವರದು. ಜವಾಹರಲಾಲ್ ನೆಹರು ಬಳಿಕ ಪ್ರಧಾನಿಯಾಗಿ ಐದು ವರ್ಷ ಪೂರ್ಣಾವಧಿ ಪೂರೈಸಿದ ಬಳಿಕ ಮರು ಆಯ್ಕೆಗೊಂಡ ಮೊದಲ ಪ್ರಧಾನಿ ಎನ್ನುವ ಖ್ಯಾತಿಯೂ ಮನಮೋಹನ್‌ಸಿಂಗ್‌ರದು. ಇನ್ನು 90 ರ ದಶಕದಲ್ಲಿ ವಿತ್ತ ಸಚಿವರಾಗಿ ಅವರು ಕೈಗೊಂಡ ಆರ್ಥಿಕ ಉದಾರೀಕರಣ ನೀತಿ ಮತ್ತು ಆರ್ಥಿಕ ಸಂಕಷ್ಟದಿಂದ ದೇಶವನ್ನು ಪಾರು ಮಾಡಲು 46 ಟನ್‌ಗಳಷ್ಟು ಚಿನ್ನ ಒತ್ತೆಯಿಟ್ಟಿದ್ದನ್ನು ದೇಶವಾಸಿಗಳು ಎಂದೆಂದಿಗೂ ನೆನಪಿಟ್ಟುಕೊಳ್ಳುವಂಥದ್ದು.ಸಜ್ಜನ ರಾಜಕಾರಣಿ, ಮುತ್ಸದ್ದಿ, ಆಡಳಿತದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿ ಹಂತ ಹಂತವಾಗಿ ಮೇಲೇರಿದರೂ, ಅಧಿಕಾರ ಮತ್ತು ಕೀರ್ತಿಯನ್ನು ತಲೆಗೆ ಹತ್ತಿಸಿಕೊಳ್ಳದವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್.1991ರ ಜೂನ್ 24ನೆಯ ದಿನ ಸಾಯಂಕಾಲ ಲೋಕಸಭೆಯಲ್ಲಿ ಮನಮೋಹನ ಸಿಂಗ್ ಮಂಡಿಸಿದ ಹೊಸ ಸರಕಾರದ ಹೊಸ ಬಜೆಟ್ ಭಾರತದ ಅರ್ಥ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ತೆರೆಯಿತು. 'ಯಾವುದು ಯಾವ ಕಾಲಕ್ಕೆ ಆಗಬೇಕೋ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಮನಮೋಹನ್ ಸಿಂಗ್ ಅಂದು ಹೇಳಿದ್ದರು.ಅರ್ಥಶಾಸ್ತ್ರದ ಪ್ರಾಧ್ಯಾಪಕ, ಪ್ರಧಾನಮಂತ್ರಿಯ ಆರ್ಥಿಕ ಸಲಹೆಗಾರ, ಕೇಂದ್ರ ವಿತ್ತ ಕಾರ್ಯದರ್ಶಿ, ರಿಸರ್ವ್ ಬ್ಯಾಂಕ್ ಗವರ್ನರ್, ಯೋಜನಾ ಆಯೋಗದ ಉಪಾಧ್ಯಕ್ಷ, ಸೌತ್-ಸೌತ್ ಕಮಿಷನ್‌ನ ಅಧ್ಯಕ್ಷ, ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ, ನಂತರ ಕೇಂದ್ರ ವಿತ್ತ ಸಚಿವ, ಕೊನೆಗೆ 2004ರಿಂದ 2014ರವರೆಗೂ ಎರಡು ಅವಧಿಗೆ ಪ್ರಧಾನ ಮಂತ್ರಿಯಾಗಿ ದೇಶವನ್ನು ಮುನ್ನಡೆಸಿದರು.ಅಂತಿಮ ದರ್ಶನ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದ್ದು, ನಂತರ ದೆಹಲಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.















Comments