ಕಾಂಗ್ರೆಸ್ ಭ್ರಷ್ಟಾಚಾರ ವಿರೋಧಿಸಿ ಹಳಿಯಾಳದಲ್ಲಿ ಪ್ರತಿಭಟನೆ
- Ananthamurthy m Hegde
- Jun 27
- 1 min read

ಹಳಿಯಾಳ : ತಾಲೂಕಿನ ಗುಂಡೋಳ್ಳಿ ಗ್ರಾಮ ಪಂಚಾಯತ ಕಚೇರಿಯ ಮುಂಭಾಗದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಜನ ವಿರೋಧಿ ನೀತಿ ಮತ್ತು ಕೋಮು ಆಧಾರಿತ ತುಷ್ಠೀಕರಣ ನೀತಿಯನ್ನು ಖಂಡಿಸಿ ಹಾಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ ಅವರ ರಾಜಿನಾಮೆಗೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಿ ಬಳಿಕ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಯುವ ಧುರೀಣ ಶ್ರೀನಿವಾಸ ಘೋಟ್ನೇಕರ ಅವರು ಕರ್ನಾಟಕ ಎರಡು ವರ್ಷಗಳಿಂದ ಅಭಿವೃದ್ಧಿಯನ್ನೇ ನೋಡಿಲ್ಲ, ಅಭಿವೃದ್ಧಿಗೆ ಹಣ ಇಲ್ಲದ ಕಾರಣ ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದು. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ದಿವಾಳಿಯತ್ತ ಸಾಗಿದೆ ಎಂದು ವಾಗ್ದಾಳಿ ನಡೆಸಿದರು. ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಮನೆಗಳನ್ನು ಕೊಡುತ್ತಿವೆ. ಆದರೆ ಕೇಂದ್ರದಿಂದ ಮನೆಗಳ ನಿರ್ಮಾಣಕ್ಕೆ ಹಣ ಬಂದರೆ ಆ ಹಣದಲ್ಲಿ ಕಮೀಷನ್ ಹೊಡೆಯುವ ಕೆಲಸವನ್ನು ರಾಜ್ಯ ಸರ್ಕಾರದಲ್ಲಿನ ಕೆಲವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣಪತಿ ಕರಂಜೇಕರ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಜನರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತ ಸುಮಾರು ಯೋಜನೆಗಳಿಂದ ಹಾಗೂ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಗ್ರಾಮ ಪಂಚಾಯತ ಅಭಿವೃದ್ಧಿಗೆ ಅನುದಾನ ಇಲ್ಲ. ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕ ಆಗದೆ ಜನರು ಬವಣೆ ಪಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವಿಶೇಷ ಆಹ್ವಾನಿತ ಅನಿಲ್ ಮುತ್ನಾಳೆ, ಸಾಮಾಜಿಕ ಜಾಲತಾಣ ಮಂಡಲ ಸಂಚಾಲಕ ಆಕಾಶ ಉಪ್ಪಿನ, ಗುಂಡೊಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ರೇಷ್ಮಾ ಮಡಿವಾಳ, ಉಪಾಧ್ಯಕ್ಷ ನಾಗು ದೊಡ್ಡಗೌಡ, ಸೊಸೈಟಿ ಅಧ್ಯಕ್ಷ ರವಿ ಚೌಗಲೆ, ಘಟಕ ಅಧ್ಯಕ್ಷ ಅರುಣ ದೇಸೂರಕರ, ಗ್ರಾ.ಪಂ ಸದಸ್ಯ ಬಸವರಾಜ ಶೀಮನಗೌಡ, ಲಕ್ಷ್ಮಣ ಜಾಧವ, ಮಾರುತಿ ಮಡಿವಾಳ, ಬಾಬು ಲಮಾಣಿ, ಪುಷ್ಪಾ ಪಾಟೀಲ್, ಗೀತಾ ಸಕ್ಕಪ್ಪನವರ, ದೇಮಕ್ಕಾ ಬೇಡರ, ಸೊಸೈಟಿ ನಿರ್ದೇಶಕ ಮಂಜು ಬೆಡದೋಳಕರ, ಮಂಜು ಮೇತ್ರಿ, ಪರಶುರಾಮ ಶೀಮನಗೌಡ, ಬಾಬು ಶೀಮನಗೌಡ, ಪ್ರಮುಖರಾದ ಸಿದ್ದಪ್ಪ ದಲಾಲ, ಉದಯ ಸಕ್ಕಪ್ಪನವರ, ಮಾರುತಿ ಸಾಲಗುಡಿ, ಸಂದೀಪ ಡಿಸೋಜಾ, ಮೊದಲಾದವರು ಇದ್ದರು.














Comments