ಶಿಕ್ಷಕರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಸಾವು
- Ananthamurthy m Hegde
- Nov 29, 2024
- 1 min read

ಹಳಿಯಾಳ: ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ ತೆರಳಿದ ವಿದ್ಯಾರ್ಥಿನಿಗೆ ತುಂಡಾದ ವಿದ್ಯುತ್ ವಯರ್ ತಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ. ಎರಡನೇ ತರಗತಿ ಓದುತ್ತಿರುವ ಸಾನ್ವಿ ಬಸವರಾಜ ಗೌಳಿ (೮) ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕಿಯಾಗಿದ್ದಾಳೆ. ಶಾಲೆಯ ಆವರಣದ ಶೌಚಾಲಯದ ಬಳಿಯೇ ಬೋರ್ವೆಲ್ ತೆಗಿಸಲಾಗಿದ್ದು ಇದಕ್ಕೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ಆದರೆ ಮೇನ್ ಲೈನ್‌ನಿಂದ ಪಡೆದಿದ್ದ ತಂತಿ ತುಂಡಾಗಿ ಶೌಚಾಲಯದಲ್ಲಿ ಬಿದ್ದಿದ್ದು ಬಾಲಕಿ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಶಾಕ್ ನಿಂದ ಸ್ಥಳದಲ್ಲೇ ಮೃತಳಾಗಿದ್ದಾಳೆ. ಶಾಲೆಯ ಮುಖ್ಯ ಶಿಕ್ಷಕರು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಲ್ಲದೇ ವಿದ್ಯುತ್ ವಯರ್ ತುಂಡಾದರೂ ನಿರ್ಲಕ್ಷ್ಯ ವಹಿಸಿದ್ದರಿಂದ ಏನೂ ಅರಿಯದ ಮಗುವೊಂದು ಸಾವನ್ನಪ್ಪಿದೆ.
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ್ , ಸಿಪಿಐ ಜಯವಂತ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದು ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಸಹ ಆಸ್ಪತ್ರೆಗೆ ಭೇಟಿನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
Comments