top of page

ಕಾಲುಬೆರಳ ಒಳಗೆ ಬೆಳೆದ ಉಗುರಿನ ಸಮಸ್ಯೆ (ಕುಶಲವೇ ಕ್ಷೇಮವೇ)

  • Writer: new waves technology
    new waves technology
  • Oct 22, 2024
  • 2 min read

ಶಸ್ತ್ರಚಿಕಿತ್ಸೆ ಮಾಡುವುದರ ಮೂಲಕ ಮತ್ತು ಶಸ್ತ್ರಚಿಕಿತ್ಸೆ ಮಾಡದೆಯೂ ಕಾಲುಬೆರಳ ಒಳಗೆ ಬೆಳೆದ ಉಗುರಿನ ಸಮಸ್ಯೆಯನ್ನು ಸರಿಪಡಿಸಬಹುದಾಗಿದೆ. ಶಸ್ತ್ರಚಿಕಿತ್ಸೆ ಮಾಡುವುದು ಸಮಸ್ಯೆಯ ತೀವ್ರತೆಯನ್ನು ಅವಲಂಬಿಸಿದೆ.












ಕೆಲವೊಮ್ಮೆ ಉಗುರು ಕಾಲುಬೆರಳಿನ ಒಳಗೆ ಸುತ್ತಲಿನ ಚರ್ಮದೊಳಗೆ ಬೆಳೆಯುತ್ತದೆ. ಇದರಿಂದ ಚರ್ಮ ಕೆಂಪಾಗಿ ನೋವು ಮತ್ತು ಕೆಲವು ಸಲ ಸೋಂಕು ಉಂಟಾಗಬಹುದು. ಇದನ್ನು ಸರಿಪಡಿಸಿಕೊಳ್ಳಲು ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿ ಬರಬಹುದು. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಆನಿಕೋಕ್ರಿಪ್ಟೋಸಿಸ್ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಕಾಲಿನ ಹೆಬ್ಬೆರಳಿನ ಮೇಲೆ ಪರಿಣಾಮ ಬೀರುತ್ತದೆ. ಉಗುರಿನ ಅಂಚು ಅಸಹಜವಾಗಿ ಬೆಳೆದಾಗ ಮತ್ತು ಮೃದುವಾದ ಮಾಂಸವನ್ನು ಒತ್ತಿದಾಗ ಈ ಸಮಸ್ಯೆ ಬರುತ್ತದೆ. ಸರಿಯಾಗಿ ಉಗುರನ್ನು ಕತ್ತರಿಸದೇ ಇರುವುದು, ಬಿಗಿಯಾದ ಪಾದರಕ್ಷೆಗಳನ್ನು ತೊಡುವುದು, ಗಾಯ ಅಥವಾ ಉಗುರಿನ ನೈಸರ್ಗಿಕ ಆಕಾರದಂತಹ ಕಾರಣಗಳಿಂದ ಈ ಸಮಸ್ಯೆ ಉಂಟಾಗಬಹುದು.

ಶಸ್ತ್ರಚಿಕಿತ್ಸೆ ಮಾಡುವುದರ ಮೂಲಕ ಮತ್ತು ಶಸ್ತ್ರಚಿಕಿತ್ಸೆ ಮಾಡದೆಯೂ ಕಾಲುಬೆರಳ ಒಳಗೆ ಬೆಳೆದ ಉಗುರಿನ ಸಮಸ್ಯೆಯನ್ನು ಸರಿಪಡಿಸಬಹುದಾಗಿದೆ. ಶಸ್ತ್ರಚಿಕಿತ್ಸೆ ಮಾಡುವುದು ಸಮಸ್ಯೆಯ ತೀವ್ರತೆಯನ್ನು ಅವಲಂಬಿಸಿದೆ. ಸೌಮ್ಯವಾದ ಪ್ರಕರಣಗಳನ್ನು ಸಾಮಾನ್ಯವಾಗಿ ಮನೆಯಲ್ಲಿ ಅಥವಾ ಸಾಂಪ್ರದಾಯಿಕ ವಿಧಾನಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಬಹುದು. ಆದರೆ ಹೆಚ್ಚು ತೀವ್ರವಾದ ಪ್ರಕರಣಗಳಿಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.

ಕಾರಣಗಳು

  • ಸರಿಯಾಗಿ ಉಗುರನ್ನು ಕತ್ತರಿಸದೇ ಇರುವುದು: ಉಗುರುಗಳನ್ನು ತುಂಬಾ ಚಿಕ್ಕದಾಗಿ ಕತ್ತರಿಸುವುದು ಅಥವಾ ಅಂಚುಗಳು ಸರಿಯಾಗಿ ಬೆಳೆಯದೇ ಉಗುರ ತುಂಬಾ ಸುತ್ತಿಕೊಳ್ಳುವುದು ಚರ್ಮದೊಳಗೆ ಉಗುರು ಬೆಳೆಯಲು ಕಾರಣವಾಗಬಹುದು.

  • ಬಿಗಿಯಾದ ಪಾದರಕ್ಷೆ: ಕಾಲುಬೆರಳುಗಳನ್ನು ಸಂಕುಚಿತಗೊಳಿಸುವ ಪಾದರಕ್ಷೆಗಳನ್ನು ಧರಿಸುವುದರಿಂದ ಉಗುರು ಅಸಹಜವಾಗಿ ಬೆಳೆದು ಈ ಸಮಸ್ಯೆ ಬರಬಹುದು.

  • ಆಘಾತ: ಕಾಲುಬೆರಳಿಗೆ ಸೂಜಿ, ಮುಳ್ಳು ಅಥವಾ ಏನಾದರೂ ಚೂಪಾದ ವಸ್ತು ಚುಚ್ಚಿಕೊಳ್ಳುವುದು ಅಥವಾ ಅದರ ಮೇಲೆ ಏನಾದರೂ ವಸ್ತುಗಳು ಬಿದ್ದರೆ ಉಗುರು ಸರಿಯಾಗಿ ಬೆಳೆಯದೇ ಇರಬಹುದು.

  • ಅನುವಂಶೀಯತೆ: ಉಗುರುಗಳ ನೈಸರ್ಗಿಕ ಆಕಾರದಿಂದಾಗಿ ಕಾಲುಬೆರಳ ಉಗುರುಗಳನ್ನು ಕೆಲವು ಜನರಿಗೆ ಒಳಗೆ ಅಥವಾ ಸಮಸ್ಯಾತ್ಮಕವಾಗಿ ಅನುವಂಶೀಯ ಕಾರಣಗಳಿಂದ ಬೆಳೆಯಬಹುದು.

  • ನೈರ್ಮಲ್ಯದ ಕೊರತೆ ಮತ್ತು ಬೆವರುವಿಕೆ: ನೈರ್ಮಲ್ಯದ ಕೊರತೆ ಅಥವಾ ಅತಿಯಾದ ಬೆವರುವಿಕೆಯು ಚರ್ಮವನ್ನು ಮೃದುಗೊಳಿಸಿ ಉಗುರು ಸರಿಯಾಗಿ ಬೆಳೆಯದಿರಬಹುದು. ಪ್ರತಿದಿನ ಸ್ನಾನ ಮಾಡುವಾಗ ಉಗುರುಗಳನ್ನು ಸ್ವಚ್ಛಗೊಳಿಸಬೇಕು.

ಶಸ್ತ್ರಚಿಕಿತ್ಸೆರಹಿತ ಪರಿಹಾರ

  • ಸೌಮ್ಯವಾದ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೇ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಪ್ರತಿದಿನವೂ ಹಲವಾರು ಬಾರಿ 15-20 ನಿಮಿಷಗಳ ಕಾಲ ಬಿಸಿ ನೀರಿಗೆ ಉಪ್ಪು ಹಾಕಿ ಅದರಲ್ಲಿ ಪಾದವನ್ನು ನೆನೆಸುವುದು ಊತವನ್ನು ಕಡಿಮೆ ಮಾಡಲು ಮತ್ತು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

  • ಸ್ವಲ್ಪವಾಗಿ ಬೆಳೆದ ಕಾಲುಬೆರಳ ಉಗುರಿನ ಅಂಚನ್ನು ಮೇಲಕ್ಕೆತ್ತಿ ಅದಕ್ಕೆ ಹತ್ತಿ, ಡೆಂಟಲ್ ಫ್ಲಾಸ್ ಅಥವಾ ಗಟ್ಟಿಯಾದ ಪಟ್ಟಿಯನ್ನು ಸುತ್ತಿ ಆಧಾರ ನೀಡಿದರೆ ಉಗುರು ಚರ್ಮಕ್ಕೆ ಬದಲಾಗಿ ಅದರ ಮೇಲೆ ಸರಿಯಾಗಿ ಬೆಳೆಯಲು ಸಹಾಯವಾಗುತ್ತದೆ.

  • ಆ ಭಾಗದಲ್ಲಿ ಸೋಂಕು ಇದ್ದರೆ ಸೋಂಕುನಿವಾರಕ ಮುಲಾಮನ್ನು ಹಚ್ಚಿ ಸರಿಪಡಿಸಬಹುದು.

  • ಉಗುರುಗಳನ್ನು ಸರಿಯಾಗಿ ಕತ್ತರಿಸಿ ಅವು ಸಮರ್ಪಕವಾಗಿ ಬೆಳೆಯುವಂತೆ ಚೆನ್ನಾಗಿ ಆರೈಕೆ ಮಾಡಬೇಕು.

ಶಸ್ತ್ರಚಿಕಿತ್ಸಾ ವಿಧಾನಗಳು

  • ಗಂಭೀರ ಅಥವಾ ದೀರ್ಘಕಾಲ ಕಾಡುವ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಾಗಬಹುದು. ಸಾಮಾನ್ಯವಾಗಿ ಈ ವಿಧಾನದಲ್ಲಿ ಉಗುರಿನ ಒಂದು ಭಾಗವನ್ನು ತೆಗೆದುಹಾಕಲಾಗುತ್ತದೆ. ಹೆಚ್ಚು ತೀವ್ರವಾದ ಸಂದರ್ಭಗಳಲ್ಲಿ ಬಾಧಿತ ಪ್ರದೇಶದಲ್ಲಿ ಉಗುರನ್ನು ತೆಗೆದುಹಾಕಿದರೆ ಅದು ಮತ್ತೆ ಬೆಳೆಯುವುದಿಲ್ಲ.

  • ಉಗುರು ತೆಗೆಯುವಿಕೆಯು ಈ ಸಮಸ್ಯೆಯ ಪರಿಹಾರದ ಸಾಮಾನ್ಯ ವಿಧಾನವಾಗಿದೆ. ಇದರಲ್ಲಿ ಚರ್ಮದೊಳಗೆ ಬೆಳೆದ ಉಗುರಿನ ಬದಿಗಳನ್ನು ಅರಿವಳಿಕೆ ನೀಡಿ ತೊಂದರೆ ಇರುವ ಭಾಗವನ್ನು ಮಾತ್ರ ತೆಗೆದುಹಾಕಲಾಗುತ್ತದೆ. ನಂತರ ಕಾಲುಬೆರಳಿಗೆ ಪಟ್ಟಿ ಕಟ್ಟಿ ರಕ್ಷಿಸಲಾಗುತ್ತದೆ. ಈ ಚಿಕಿತ್ಸೆಯು ಸಾಮಾನ್ಯವಾಗಿ ಕೆಲವು ವಾರಗಳನ್ನು ತೆಗೆದುಕೊಳ್ಳುತ್ತದೆ.

  • ಕೆಲವು ಸಂದರ್ಭಗಳಲ್ಲಿ ಸಂಪೂರ್ಣವಾಗಿ ಬಾಧಿತ ಉಗುರನ್ನು ತೆಗೆಯಬೇಕಾಗಬಹುದು. ಉಗುರು ವ್ಯಾಪಕವಾಗಿ ಹಾನಿಗೊಳಗಾದ ಅಥವಾ ಸೋಂಕಿಗೆ ಒಳಗಾದ ತೀವ್ರತರವಾದ ಪ್ರಕರಣಗಳಲ್ಲಿ ಹೀಗೆ ಮಾಡಲಾಗುತ್ತದೆ.

  • ಉಗುರು ಮತ್ತೆ ಬೆಳೆಯುವುದನ್ನು ತಡೆಯಲು ಮ್ಯಾಟ್ರಿಕ್ಸೆಕ್ಟಮಿಯನ್ನು ಮಾಡಬಹುದು. ಈ ವಿಧಾನದಲ್ಲಿ ಉಗುರಿನ ಮ್ಯಾಟ್ರಿಕ್ಸ್ ಅನ್ನು (ಉಗುರು ಬೆಳೆಯುವ ಮೂಲ) ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗುತ್ತದೆ ಅಥವಾ ರಾಸಾಯನಿಕವಾಗಿ ಚಿಕಿತ್ಸೆ ನೀಡಲಾಗುತ್ತದೆ (ಫೀನಾಲ್ ಅಥವಾ ಸೋಡಿಯಂ ಹೈಡ್ರಾಕ್ಸೈಡ್ ಬಳಸಿ). ಪದೇ ಪದೇ ಉಗುರು ಚರ್ಮದೊಳಗೆ ಬೆಳೆದು ಸಮಸ್ಯೆ ಎದುರಾಗುತ್ತಿದ್ದರೆ ಅದಕ್ಕೆ ಇದು ಶಾಶ್ವತ ಪರಿಹಾರವಾಗಿದೆ.


ಕಾಲುಬೆರಳ ಒಳಗೆ ಬೆಳೆದ ಉಗುರನ್ನು ಸರಿಪಡಿಸುವ ಮುಖ್ಯ ಪ್ರಯೋಜನವೆಂದರೆ ನೋವು ಮತ್ತು ಕಿರಿಕಿರಿಯಿಂದ ಬಿಡುಗಡೆ. ಜೊತೆಗೆ ಕಾಲುಗಳ ಸೌಂದರ್ಯ ಹೆಚ್ಚಾಗುತ್ತದೆ. ಕಾಲುಬೆರಳ ಒಳಗೆ ಬೆಳೆದ ಉಗುರಿಗೆ ಚಿಕಿತ್ಸೆ ನೀಡುವುದರಿಂದ ಆರಾಮವಾಗಿ ನಡೆಯಬಹುದು ಅಥವಾ ಬೂಟುಗಳನ್ನು ಸುಲಭವಾಗಿ ಧರಿಸಬಹುದು. ಈ ಸಮಸ್ಯೆಯನ್ನು ಸರಿಪಡಿಸುವುದರಿಂದ ಸೋಂಕು ಹರಡುವುದನ್ನು ತಡೆಯಬಹುದು. ಮ್ಯಾಟ್ರಿಕ್ಸೆಕ್ಟಮಿಯಂತಹ ಶಾಶ್ವತ ಕಾರ್ಯವಿಧಾನಗಳು ಕಾಲುಬೆರಳ ಉಗುರು ಸಮಸ್ಯೆ ಮರುಕಳಿಸುವ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಅನೇಕ ಜನರಿಗೆ ಕಾಲುಬೆರಳ ಒಳಗೆ ಬೆಳೆದಿರುವ ಉಗುರಿನ ಸಮಸ್ಯೆಯನ್ನು ಪರಿಹರಿಸುವುದು ಅವರ ಆತ್ಮವಿಶ್ವಾಸವನ್ನು ಸುಧಾರಿಸುತ್ತದೆ. ಆದ್ದರಿಂದ ಈ ಸಮಸ್ಯೆ ಇದ್ದವರು ಶಸ್ತ್ರಚಿಕಿತ್ಸಾ ವೈದ್ಯರ ಸಲಹೆ ಪಡೆದು ಮುಂದುವರೆಯುವುದು ಒಳ್ಳೆಯದು.

Comments


Top Stories

bottom of page