top of page

ಮುಸ್ಲಿಮರಲ್ಲೂ ಜಾತಿಪದ್ಧತಿ: ಮೋದಿ ವ್ಯಾಖ್ಯಾನದಲ್ಲಿದೆ ಒಂದು ‘ಮೆಸೇಜಿಂಗ್’ ಮಾದರಿಯ ಅಪಾಯ!

  • Writer: new waves technology
    new waves technology
  • Oct 22, 2024
  • 2 min read

ಪ್ರಧಾನಿ ನರೇಂದ್ರ ಮೋದಿ ಇದೀಗ ಮುಸ್ಲಿಮರ ನಡುವಿನ ಜಾತಿ ಪ್ರಸ್ತಾಪಿಸಿರುವುದು ಒಟ್ಟಾರೆ ಜಾತಿ ಆಧರಿತ ರಾಜಕೀಯ ವಿಘಟನೆಗಳ ಆಟದಲ್ಲಿ ಕಾಂಗ್ರೆಸ್ಸಿನ ವ್ಯಾಖ್ಯಾನಗಳಿಗೆ ಹೂಡಿದ ಪ್ರತಿಬಾಣದಂತಿದೆ.












ಬಿಜೆಪಿ ಸೋಲಲಿದೆ ಎಂದೇ ಸಮೀಕ್ಷೆಗಳು ನುಡಿದಿದ್ದ ಹರ್ಯಾಣ ವಿಧಾನಸಭೆ ಚುನಾವಣೆಯನ್ನು ಗೆದ್ದುಕೊಂಡ ನಂತರದ ಭಾಷಣಗಳ ಪೈಕಿ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿರುವ ವಿಷಯ ಕುತೂಹಲದ್ದು. ಅದು ಕಾಂಗ್ರೆಸ್ ಮತ್ತದರ ಮೈತ್ರಿಪಕ್ಷಗಳನ್ನು ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ, ಮುಖ್ಯವಾಗಿ ಬಿಹಾರದಲ್ಲಿ ಎದುರಿಸುವುದಕ್ಕೆ ವ್ಯಾಖ್ಯಾನವೊಂದನ್ನು ಸಿದ್ಧಪಡಿಸುತ್ತಿರುವಂತಿದೆ. 

“ಹಿಂದು ಸಮಾಜದಲ್ಲಿ ಒಂದು ಜಾತಿಯನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟಿ ರಾಜಕೀಯ ಲಾಭ ಮಾಡಿಕೊಳ್ಳುವುದಕ್ಕೆ ಯಾವತ್ತೂ ಸಿದ್ಧವಿರುವ ಕಾಂಗ್ರೆಸ್, ಮುಸ್ಲಿಂ ಸಮಾಜದ ವಿಷಯ ಬಂದಾಗ ಮೌನವಾಗುತ್ತದೆ. ಅಲ್ಲಿರುವ ಜಾತಿಗಳ ಬಗ್ಗೆ ಮಾತೇ ಆಡುವುದಿಲ್ಲ..” ಹೀಗೆ ಹೇಳಿರುವ ನರೇಂದ್ರ ಮೋದಿ ಮಾತುಗಳನ್ನು ಹೆಚ್ಚಿನ ವಿಶ್ಲೇಷಕರು ಇದು ಕಾಂಗ್ರೆಸ್ಸಿನ ಜಾತಿ ಗಣತಿ ಕಾರ್ಯಸೂಚಿ ಮೇಲೆ ಮಾಡಿರುವ ದಾಳಿ ಎಂದು ಅರ್ಥೈಸಿದ್ದಾರೆ. 

ದೀರ್ಘಾವಧಿ ಉದ್ದೇಶಗಳೇನೇ ಇದ್ದಿರಬಹುದು, ಆದರೆ ಈ ಮಾತುಗಳು ಹೊರಬೀಳುವುದರಲ್ಲಿ ಹರ್ಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ಕೊಟ್ಟಿರುವ ವಿಶ್ವಾಸವೂ ಕಾರಣವಾಗಿದ್ದಿರಬಹುದು. ಏಕೆಂದರೆ, ಹರ್ಯಾಣದಲ್ಲಿ ಕಾಂಗ್ರೆಸ್ ಅನುಸರಿಸಿದ್ದ ನೀತಿ ಎಂದರೆ ಅಲ್ಲಿನ ಒಂದು ಪ್ರಮುಖ ಸಮುದಾಯವಾಗಿರುವ ಜಾಟ್ ನ್ನು ಮುಸ್ಲಿಮರ ಜತೆಗಿಟ್ಟುಕೊಂಡು ಗೆಲ್ಲಲು ನೋಡಿದ್ದು. ಇದಕ್ಕೆ ಪ್ರತಿಯಾಗಿ ಬಿಜೆಪಿ ಅಲ್ಲಿ ಒಬಿಸಿ ಸಮುದಾಯದಲ್ಲಿ ಬರುವ ಜಾತಿಗಳು, ಜತೆಗೆ ದಲಿತರನ್ನು ಸೇರಿಸಿಕೊಂಡು ಗೆದ್ದು ತೋರಿಸಿದೆ. ಬಿಜೆಪಿ ಚುನಾವಣೆಗೆ ಹೋಗುವಾಗ ಅಲ್ಲಿ ಒಬಿಸಿ ಸಮುದಾಯದ ಮುಖ್ಯಮಂತ್ರಿಯೇ ಇದ್ದರು. ಆದರೂ, ಒಬಿಸಿ ಎನ್ನುವುದೇ ಒಂದು ಜಾತಿಯೇನಲ್ಲ; ಹಿಂದುಳಿದವರೆಂದು ಪರಿಗಣಿಸಲಾಗಿರುವ ಹಲವು ಜಾತಿಗಳ ಗುಚ್ಛ. ಇವನ್ನು ಒಗ್ಗೂಡಿಸಿ ಮತ ಗಳಿಸಿಕೊಳ್ಳುವುದಕ್ಕಾಯಿತು ಎಂಬ ಸಂಗತಿಯೇ ಬಿಜೆಪಿ ಹಾಗೂ ಪ್ರಧಾನಿ ಮೋದಿ ಹಿಂದು ಏಕತೆಯ ಧ್ವನಿಯನ್ನು ಮತ್ತಷ್ಟು ಗಟ್ಟಿಯಾಗಿ ಹೇಳುವುದಕ್ಕೆ ಹೊರಟಂತಿದೆ. 


ಮುಸ್ಲಿಮರಲ್ಲಿ ಜಾತಿಗಳೆಂಬ ವಾಸ್ತವ

ಜಾತಿ-ಪಂಗಡಗಳ ವರ್ಗೀಕರಣ ಮತ್ತು ಅವುಗಳಲ್ಲಿನ ತರತಮ ಭಾವಗಳು ಜಾಗತಿಕ ಸತ್ಯ. ಅದಲ್ಲದಿದ್ದರೆ ಸಂಪೂರ್ಣ ಇಸ್ಲಾಂಮಯ ದೇಶದಲ್ಲೂ ಯಾರು ಶುದ್ಧ ಮುಸ್ಲಿಮರೆಂಬ ಅಂಶ ಇಟ್ಟುಕೊಂಡು ಹಿಂಸಾಸಂಘರ್ಷಗಳು ಆಗುತ್ತಲೇ ಇರಲಿಲ್ಲ. ಭಾರತದಮಟ್ಟಿಗೆ ಬಂದರೆ ಇಲ್ಲಿನ ಹೆಚ್ಚಿನ ಮುಸ್ಲಿಮರು ಶತಮಾನಗಳ ಹಿಂದೆ ಖಡ್ಗದ ನೆರಳಲ್ಲಿ ಮತಾಂತರವಾದವರು. ಹಾಗೆ ಇಸ್ಲಾಂ ಅಪ್ಪಿಕೊಂಡವರನ್ನು ಅಲ್ಲಿನ ಮೂಲ ಮತಾನುಯಾಯಿಗಳು ಅಪ್ಪಿಕೊಂಡಿಲ್ಲ ಎಂಬುದು ಸ್ಪಷ್ಟ. ಇದರ ಪ್ರತಿಫಲನವೆಂದರೆ ಭಾರತದ ಇಸ್ಲಾಂ ಸಮಾಜದಲ್ಲಿರುವ ಅಶ್ರಫ್ ಮತ್ತು ಅಜ್ಲಾಫ್ ಎಂಬ ಮೇಲ್ಮಟ್ಟದ ವರ್ಗೀಕರಣ. ಭಾರತಕ್ಕೆ ಇಸ್ಲಾಮನ್ನು ಹೇರಿದ ದಾಳಿಕೋರರ ರಕ್ತದಿಂದಲೇ ಬಂದವರು ತಾವೆಂಬುವವರು ಅಶ್ರಫ್ ಉಪನಾಮದವರು.

ಇವರಿಗೆ ಸ್ಥಳೀಯವಾಗಿ ಮತಾಂತರವಾದ ದೊಡ್ಡ ಜನವರ್ಗವೊಂದರ ಮೇಲೆ ಮೊದಲಿನಿಂದಲೂ ತಾತ್ಸಾರ. ಇನ್ನು, ಸಯ್ಯದ್ ಎಂಬ ಉಪನಾಮವನ್ನೂ ಕೇಳಿರುತ್ತೀರಿ. ತಾವು ಪ್ರವಾದಿ ಪೈಗಂಬರರ ವಂಶವಾಹಿಯವರೆಂದು ಇವರು ಪ್ರತಿಪಾದಿಸುತ್ತಾರೆ. ಪ್ರವಾದಿ ಮೊಮ್ಮಗ ಹುಸೇನ್ ಇಬ್ನ ಅಲಿಯವರ ಕುಡಿಗಳ ಮುಂದುವರಿಕೆ ಎಂಬ ನಂಬಿಕೆ. ಹಾಗೆಂದೇ ಪಠಾಣ್ ಅಥವಾ ಇನ್ಯಾವುದೇ ಉಪನಾಮದ ಮುಸ್ಲಿಮರೊಂದಿಗೆ ಇವರು ವಿವಾಹ ಸಂಬಂಧಗಳಿಗೆ ಮುಂದಾಗುವುದಿಲ್ಲ. ಇದೇ ಹುಸೇನ್ ಅಲಿ ಸಹೋದರ ಹಸನ್ ಅಲಿ ಕುಡಿಯೊಂದಿಗೆ ತಮ್ಮ ವಂಶವಾಹಿಯಿದೆ ಎನ್ನುವವರು ಶರೀಫ್ ಉಪನಾಮದವರು. ಭಾರತೀಯ ಮುಸ್ಲಿಮರಲ್ಲಿ ಶೇಕಡ 85ರಷ್ಟು ಪಸ್ಮಂದಾ ಮುಸ್ಲಿಂ ಪಂಗಡದವರು. ಅಜ್ಲಾಫ್ ವರ್ಗದಲ್ಲೇ ಬರುವ ಇವರು ಈ ಹಿಂದಿನ ದಲಿತ ಸಮಾಜದಿಂದ ಇಸ್ಲಾಮಿಗೆ ಮತಾಂತರವಾಗಿದ್ದವರು. ಹೀಗಾಗಿ ಅಶ್ರಫ್ ವರ್ಗದಲ್ಲಿ ಬರುವ ಜಾತಿಗಳ ಕಣ್ಣಲ್ಲಿ ಇವರೆಲ್ಲ ‘ತುಚ್ಛ’ರು. ತಮ್ಮ ರಕ್ತದವರಲ್ಲ ಎಂದೇ ಇಸ್ಲಾಮಿನ ಮೇಲುಜಾತಿಯವರು ಇವರನ್ನು ಕಾಣುತ್ತಾರೆ. 

ಮೋದಿ ಮೆಸೇಜಿಂಗ್’ನಲ್ಲಿ ಹೀಗೊಂದು ರಿಸ್ಕ್ ಇದೆ!

ಈ ಬಾರಿ ಮುಸ್ಲಿಮರಲ್ಲೂ ಜಾತಿ ದಟ್ಟವಾಗಿರುವುದರ ಬಗ್ಗೆ ಹಾಗೂ ಕಾಂಗ್ರೆಸ್ ಆ ಬಗ್ಗೆ ಮೌನವಾಗಿರುವುದರ ಬಗ್ಗೆ ಹೇಳಿರುವುದು ಹಿಂದು ಬೆಂಬಲಿಗರನ್ನು ಸಮಾಧಾನಗೊಳಿಸುವುದಕ್ಕೆ ಇದ್ದಂತಿದೆ. ಅಂದರೆ… ಯಾವ ಕಾಂಗ್ರೆಸ್ ತನ್ನ ಮತಬ್ಯಾಂಕ್ ಆಗಿ ಮಾಡಿಕೊಳ್ಳುತ್ತಿದೆಯೋ ಆ ಸಮುದಾಯದಲ್ಲಿ ಸಹ ಜಾತಿ ಗ್ರಹಿಕೆ ದೊಡ್ಡದಿದೆ, ಹೀಗಾಗಿ ಐಕ್ಯತೆ ಎಂಬುದು ಜಾತಿಗಳಲ್ಲಿ ಹರಡಿರುವ ಹಿಂದುಗಳ ಪಾಲಿಗೆ ಕಷ್ಟ ಎಂಬ ನಿರ್ಣಯಕ್ಕೇನೂ ಬರಬೇಕಿಲ್ಲ ಎಂಬ ಸಂದೇಶ ಇದು.

ಆದರೆ, ಕೇವಲ ರಾಜಕೀಯ ನೆಲೆಯಲ್ಲಿ ನೋಡಿದಾಗ ಈ ಬಗೆಯ ಮೆಸೇಜಿಂಗ್, ಇತ್ತ ಬಿಜೆಪಿಯ ಹಿಂದು ಬೆಂಬಲಿಗರಿಗೆ ಗೊಂದಲ ಮಾಡುವ ಸಂಭವವೂ ಇದೆ. ಈ ಹಿಂದಿನ ಲೋಕಸಭೆ ಚುನಾವಣೆ ಎದುರಲ್ಲಿ ಪಸ್ಮಂದಾ ಮುಸ್ಲಿಮರ ಬಗ್ಗೆ ಮೋದಿ ಆಗಾಗ ಮಾತನಾಡಿದ್ದರು. ಆದರೆ ಮತ ಹಾಕುವ ವಿಷಯ ಬಂದಾಗ ಮಾತ್ರ ಮುಸ್ಲಿಂ ಸಮಾಜವು ಪಸ್ಮಂದಾ ಮತ್ತು ಇತರರು ಅಂತ ಯೋಚಿಸದೇ ಹೆಚ್ಚು-ಕಡಿಮೆ ಸಂಪೂರ್ಣವಾಗಿ ಇಂಡಿ ಮೈತ್ರಿಕೂಟವನ್ನು ಬೆಂಬಲಿಸಿತ್ತು.

ಇರಾನ್ ಎಂಬ ದೇಶಕ್ಕೆ ಸಮರಾಂಗಣದಲ್ಲಿ ಬಡಿದಾಡಲು ಪ್ರೇರೇಪಿಸುತ್ತಿರುವ ಅಂಶ ಯಾವುದದು? (ತೆರೆದ ಕಿಟಕಿ)

ಪಸ್ಮಂದಾ ಮುಸ್ಲಿಮರ ಬಗ್ಗೆ ಮೋದಿಯವರ ಪುನಃಪುನಃ ಉಲ್ಲೇಖಗಳು ಹಿಂದು ಸಮಾಜದ ಒಂದು ವರ್ಗಕ್ಕೆ ಬೇಸರವನ್ನೇ ಉಂಟುಮಾಡಿತು. ಲೋಕಸಭೆ ಚುನಾವಣೆಯ ಪ್ರಚಾರಾಂದೋಲನಗಳಲ್ಲಿ ಇದು ಬಿಜೆಪಿ ಅರಿವಿಗೆ ಬಂತೋ ಏನೋ, ಮೋದಿ ತಮ್ಮ ಭಾಷಣಗಳಲ್ಲಿ ಹಿಂದು ಕೆಳಜಾತಿಗಳ ಹಕ್ಕನ್ನು ಕಾಂಗ್ರೆಸ್ ಮುಸ್ಲಿಮರಿಗೆ ಹಂಚುವ ಸನ್ನಾಹದಲ್ಲಿದೆ ಎಂಬ ಎಚ್ಚರಿಕೆ ಮಾತುಗಳನ್ನೆಲ್ಲ ಆಡಿದರು. ಆದರೆ ಇದೇ ಮೋದಿ ಅದಕ್ಕೂ ಮೊದಲೇ ಪಸ್ಮಂದಾ ಮುಸ್ಲಿಮರ ಹಿಂದುಳಿದಿರುವಿಕೆ ಬಗ್ಗೆ ಕರುಣಾಮಯ ಮಾತುಗಳನ್ನು ಆಡಿದ್ದಾರಾದ್ದರಿಂದ ಮತ ಧ್ರುವೀಕರಣದ ಹಂತದಲ್ಲಿ ಅವರ ಮಾತುಗಳು ಒಂದಕ್ಕೊಂದು ಪೂರಕವೇ ಆಗಲಿಲ್ಲ. 

ಇದೀಗ ಮುಸ್ಲಿಮರ ನಡುವಿನ ಜಾತಿ ಪ್ರಸ್ತಾಪಿಸಿರುವುದು ಒಟ್ಟಾರೆ ಜಾತಿ ಆಧರಿತ ರಾಜಕೀಯ ವಿಘಟನೆಗಳ ಆಟದಲ್ಲಿ ಕಾಂಗ್ರೆಸ್ಸಿನ ವ್ಯಾಖ್ಯಾನಗಳಿಗೆ ಹೂಡಿದ ಪ್ರತಿಬಾಣದಂತಿದೆ. ಆದರೆ, ಹರ್ಯಾಣ ಚುನಾವಣೆಯಲ್ಲಿ ಕಂಡಂತೆ ಮೋದಿಯವರ ಬಿಜೆಪಿಯನ್ನು ಬೆಂಬಲಿಸಿರುವ ಒಬಿಸಿ ಮತ್ತು ದಲಿತ ಜಾತಿಗಳಿಗೆ, ಇದು ಮುಸ್ಲಿಮರ ಬಡತನದ ಕತೆಗೆ ಮರುಗಿ ಅವರನ್ನು ತುಷ್ಟೀಕರಿಸುವುದಕ್ಕೆ ಹೊರಟಿರುವ ರೀತಿ ಎಂದು ಅನ್ನಿಸಬಾರದಷ್ಟೆ. ಎಲ್ಲರನ್ನೂ ಖುಷಿಗೊಳಿಸುತ್ತೇನೆ ಎಂಬುದು ಅಧಿಕಾರದಲ್ಲಿರುವವರ ಆದರ್ಶವಾಗಿ ರೋಚಕವಾಗಿ ಕಾಣಬಹುದಾದರೂ ಅದು ಚುನಾವಣೆಯಲ್ಲಿ ಮತ ಧ್ರುವೀಕರಣದ ಲಾಭ ತಂದುಕೊಡುವುದಿಲ್ಲ ಎಂಬುದನ್ನು 2024ರ ಲೋಕಸಭೆ ಚುನಾವಣೆಯೇ ನಿರೂಪಿಸಿದೆ.

Comments


Top Stories

bottom of page