ಚರ್ಚೆಯನ್ನು ಹುಟ್ಟುಹಾಕಿದ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಹೇಳಿಕೆ
- Ananthamurthy m Hegde
- Dec 26, 2024
- 1 min read

ಮುಂಬೈ: ಭಾರತದ ಕೆಲಸದ ಸಂಸ್ಕೃತಿ ಬಗ್ಗೆ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ನೀಡಿರುವ ಹೇಳಿಕೆ, ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಇತ್ತೀಚೆಗಷ್ಟೇ ಕೋಲ್ಕತ್ತಾದಲ್ಲಿ ಮಾತನಾಡಿದ್ದ ನಾರಾಯಣ ಮೂರ್ತಿ, ದೇಶದ ಯುವಜನತೆ ಶ್ರಮಿಸಬೇಕು, ಭಾರತವನ್ನು ನಂಬರ್ 1 ಮಾಡುವುದರೆಡೆಗೆ, ಜೊತೆಗೆ ತಾವೂ ಬಡತನದಿಂದ ಹೊರಬರಲು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದರು.
ಈಗ ಈ ಬಗ್ಗೆ ಹಲವು ಉದ್ಯಮಿಗಳು ಮಾತನಾಡತೊಡಗಿದ್ದಾರೆ. ಈ ಪೈಕಿ Shaadi.com ನ ಸಿಇಒ ಅನುಪಮ್ ಮಿತ್ತಲ್, ಹಾಗೂ ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಸಿಇಒ ನಮಿತಾ ಥಾಪರ್ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು ಗಮನಾರ್ಹವಾಗಿದೆ.
ವಾರಕ್ಕೆ 70 ಗಂಟೆಗಳ ಕಾಲ ಓರ್ವ ಉದ್ಯೋಗಿ ಕೆಲಸ ಮಾಡಬೇಕೆಂದು ನಿರೀಕ್ಷಿಸುವುದು ಆತನ ಮೇಲೆ ಅತಿ ಹೆಚ್ಚು ಒತ್ತಡ ಹೇರಿದಂತಾಗುತ್ತದೆ ಎಂದು ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಮಿತಾ ಥಾಪರ್ ಹೇಳಿದ್ದಾರೆ. ಸಂಸ್ಥೆಯ ಸ್ಥಾಪಕರಿಗೂ ಉದ್ಯೋಗಿಗಳಿಗೂ ಒಂದೇ ರೀತಿಯ ನಿರೀಕ್ಷೆ ಇಟ್ಟುಕೊಳ್ಳುವುದು ಅಸಮಂಜಸ ಎಂಬುದು ನಮಿತಾ ಥಾಪರ್ ಹೇಳಿಕೆ. ಕಂಪನಿಗಳ ಸ್ಥಾಪಕರು ಹಾಗೂ ಅದರಲ್ಲಿ ಹೆಚ್ಚು ಪಾಲನ್ನು ಹೊಂದಿರುವವರು, ಅವರ ಗಮನಾರ್ಹ ಆರ್ಥಿಕ ಹೂಡಿಕೆಗಳ ಮೌಲ್ಯಗಳ ಕಾರಣದಿಂದಾಗಿ, ಹೆಚ್ಚಿನ ಅವಧಿ ಕೆಲಸ ಮಾಡಲು ಬಯಸುತ್ತಾರೆ. ಆದರೆ ಇದೇ ಮಾನದಂಡಗಳನ್ನು ಓರ್ವ ಸಾಮಾನ್ಯ ಉದ್ಯೋಗಿಯ ಮೇಲೆ ಹೇರುವುದು ತಪ್ಪಾಗುತ್ತದೆ.
ಅತಿಯಾದ ಕೆಲಸದ ಸಮಯ ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರಬಹುದು ಎಂದು ಥಾಪರ್ ಒತ್ತಿ ಹೇಳಿದ್ದಾರೆ. "ಯಾರಾದರೂ ಅಂತಹ ದೀರ್ಘ ಗಂಟೆಗಳ ಕೆಲಸ ಮಾಡುತ್ತಿದ್ದರೆ, ಅವರು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ" ಎಂದು ಅವರು ಎಚ್ಚರಿಸಿದರು, ಸರಾಸರಿ ಕೆಲಸಗಾರರಿಗೆ ಹೆಚ್ಚು ಸಮತೋಲಿತ ಕೆಲಸದ ವೇಳಾಪಟ್ಟಿಯ ಅಗತ್ಯದೆಡೆಗೆ ನಮಿತಾ ಥಾಪರ್ ಪ್ರಬಲ ವಾದ ಮಂಡಿಸಿದ್ದಾರೆ.















Comments