top of page

ನಾನು ಪಾಕಿಸ್ತಾನ ಸೇನೆಯ ಏಜೆಂಟ್​ ಆಗಿದ್ದೆ; ತಪ್ಪೊಪ್ಪಿಕೊಂಡ ಮುಂಬೈ ದಾಳಿ ಆರೋಪಿ ತಹವ್ವೂರ್ ರಾಣಾ

  • Writer: Ananthamurthy m Hegde
    Ananthamurthy m Hegde
  • Jul 8
  • 1 min read

ದೆಹಲಿ: ಎನ್​ಐಎ ಕಸ್ಟಡಿಯಲ್ಲಿರುವ 26/11 ದಾಳಿಯ ಮಾಸ್ಟರ್​ ಮೈಂಡ್ ​​ ಮತ್ತು ಭಯೋತ್ಪಾದಕ ತಹವ್ವೂರ್ ರಾಣಾನ ಕೊನೆಗೂ 26/11 ಮುಂಬೈ ದಾಳಿಯ ಕುರಿತು ಪ್ರಮುಖ ಮಾಹಿತಿ ಹೊರಹಾಕಿದ್ದಾನೆ. ಮುಂಬೈ ದಾಳಿಯ ಸಮಯದಲ್ಲಿ ತಾನು ನಗರದಲ್ಲಿದ್ದೆ ಮತ್ತು ಪಾಕಿಸ್ತಾನಿ ಸೇನೆಯ ವಿಶ್ವಾಸಾರ್ಹ ಏಜೆಂಟ್ ಆಗಿದ್ದೆ ಎಂದು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.

ree

ದೆಹಲಿಯ ತಿಹಾರ್ ಜೈಲಿನಲ್ಲಿ ಎನ್‌ಐಎ ವಶದಲ್ಲಿರುವ ತಹವ್ವೂರ್ ರಾಣಾ, ಮುಂಬೈ ಅಪರಾಧ ವಿಭಾಗದ ವಿಚಾರಣೆಯ ಸಂದರ್ಭದಲ್ಲಿ ತಾನು ಮತ್ತು ತನ್ನ ಸ್ನೇಹಿತ ಹಾಗೂ ಸಹಾಯಕ ಡೇವಿಡ್ ಕೋಲ್ಮನ್ ಹೆಡ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಜೊತೆ ಹಲವಾರು ತರಬೇತಿ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದೇವೆ ಎಂದು ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಐಎಸ್‌ಐ ಸಹಯೋಗದೊಂದಿಗೆ ಮುಂಬೈ ದಾಳಿ

ಮೂಲಗಳ ಪ್ರಕಾರ, ಮುಂಬೈನಲ್ಲಿ ತಮ್ಮ ಸಂಸ್ಥೆಯ ವಲಸೆ ಕೇಂದ್ರವನ್ನು ತೆರೆಯುವ ಆಲೋಚನೆಯೊಂದಿತ್ತು. ಈ ಮೂಲಕ ಹಣಕಾಸಿನ ವಹಿವಾಟು ಹಾಗೂ ವ್ಯಾಪಾರ ವೆಚ್ಚವನ್ನು ನಿರ್ವಹಿಸಲು ಯೋಚಿಸಲಾಗಿತ್ತು ಎಂದು ರಾಣಾ ಹೇಳಿದ್ದಾರೆ. ಇದರೊಂದಿಗೆ, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಂತಹ ಸ್ಥಳಗಳನ್ನು ಪರಿಶೀಲಿಸಿದ್ದಾಗಿ ರಾಣಾ ಹೇಳಿದ್ದು, 26/11 ದಾಳಿಯನ್ನು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಸಹಯೋಗದೊಂದಿಗೆ ನಡೆಸಲಾಗಿದೆ ಎನ್ನಲಾಗಿದೆ.

ಇದೇ ವೇಳೆ, 1990-91ರ ಗಲ್ಫ್ ಯುದ್ಧದ ಸಮಯದಲ್ಲಿ ಪಾಕಿಸ್ತಾನ ತನ್ನನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿತ್ತು ಎಂದು ಹೇಳಿಕೊಂಡಿದ್ದಾನೆ. ಜೊತೆಗೆ, ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮೂಲತಃ ಬೇಹುಗಾರಿಕೆ ಜಾಲವಾಗಿ ರೂಪುಗೊಂಡಿತ್ತು ಎಂದು ಬಹಿರಂಗಪಡಿಸಿರುವ ಆತ, ತನ್ನ ಸಹಚರ ಡೇವಿಡ್ ಹೆಡ್ಲಿ ನಿಷೇಧಿತ ಎಲ್‌ಇಟಿ ಗುಂಪಿನೊಂದಿಗೆ ಹಲವಾರು ಭಯೋತ್ಪಾದಕ ತರಬೇತಿ ಅವಧಿಗಳನ್ನು ನಡೆಸಿದ್ದನೆಂದು ಒಪ್ಪಿಕೊಂಡಿದ್ದಾನೆ.

ಕಳೆದ ಏಪ್ರಿಲ್ 4 ರಂದು ಅಮೆರಿಕದ ಸುಪ್ರೀಂ ಕೋರ್ಟ್ ರಾಣಾ ಹಸ್ತಾಂತರದ ವಿರುದ್ಧದ ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದ ನಂತರ ಏಪ್ರಿಲ್ 10 ರಂದು ಆತನನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲಾಯಿತು. ಹಾಗಾಗಿ, ಈತ ಪ್ರಸ್ತುತ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾನೆ. ಮುಂಬೈನ ಬೀದಿಗಳಲ್ಲಿ ಮತ್ತು ಹೋಟೆಲ್ ತಾಜ್‌ನಲ್ಲಿ ನಡೆದ ಭೀಕರ ರಕ್ತಪಾತದಲ್ಲಿ ಕನಿಷ್ಠ 166 ಜನರು ಸಾವನ್ನಪ್ಪಿದರು.


Comments


Top Stories

bottom of page