top of page

ನಿವೃತ್ತಿ ಘೋಷಿಸಿದ ಅಶ್ವಿನ್ ಗೆ ಪ್ರಧಾನಿ ಮೋದಿ ಪತ್ರ

  • Writer: Ananthamurthy m Hegde
    Ananthamurthy m Hegde
  • Dec 22, 2024
  • 2 min read
ree

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಿರುವ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸುದೀರ್ಘ ಪತ್ರ ಬರೆದಿದ್ದಾರೆ. ಅದರಲ್ಲಿ ಅವರ 14 ವರ್ಷಗಳ ಕ್ರಿಕೆಟ್ ಬದುಕಿನ ಬಗ್ಗೆ ನೆನಪಿಸಿಕೊಂಡಿದ್ದಾರೆ. ಜೊತೆಗೆ ಹಲವು ಸ್ಮರಣೀಯ ನೆನಪುಗಳನ್ನು ಮೆಲುಕು ಹಾಕಿರುವ ಅವರು ಅಶ್ವಿನ್ ಅವರ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗಲೂ ಕ್ರಿಕೆಟ್ ಆಡಿದ್ದ ಘಟನೆಯನ್ನು ಉಲ್ಲೇಖಿಸಿ ಅವರ ತ್ಯಾಗ ಮತ್ತು ಬದ್ಧತೆಯನ್ನು ಪ್ರಶಂಸಿಸಿದ್ದಾರೆ.

ನಿಮ್ಮ ಉತ್ಸಾಹ ನಿರಂತರವಾಗಿರಲಿ. ನೀವು ಕ್ರಿಕೆಟ್ ನಿಂದ ನಿವೃತ್ತರಾಗುವ ಬಗ್ಗೆ ದಿಢೀರ್ ನಿರ್ಧಾರ ತಳೆದದ್ದು ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಇರುವ ನಿಮ್ಮ ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ನಿಮ್ಮಿಂದ ಎಲ್ಲರೂ ಮತ್ತಷ್ಟು ಆಫ್ ಬ್ರೇಕ್ ಬೌಲಿಂಗ್ ನ ನಿರೀಕ್ಷೆಯಲ್ಲಿದ್ದಾಗ, ನೀವು ಮಾತ್ರ ನಿವೃತ್ತಿಯ ಕ್ಯಾರಂ ಬಾಲ್ ಎಸೆದು ಎಲ್ಲರನ್ನೂ ಚಕಿತಗೊಳಿಸಿದ್ದೀರಿ. ಭಾರತಕ್ಕೆ ಇಷ್ಟು ವರ್ಷಗಳ ಕಾಲ ಅದ್ಭುತ ಪ್ರದರ್ಶನ ನೀಡಿದ್ದೀರಿ. ಇದೀಗ ಈ ನಿರ್ಧಾರ ತಳೆಯುವುದು ಬಹಳ ಕಠಿಣ ಎಂಬುದು ಎಲ್ಲರಿಗೂ ತಿಳಿದಿದೆ.

ನಿಮ್ಮ ಅದ್ಙುತ, ಕಠಿಣ ಪರಿಶ್ರಮದಿಂದ ಕೂಡಿದ, ತಂಡಕ್ಕಿಂತ ಯಾವುದೂ ದೊಡ್ಡದಲ್ಲ ಎಂಬುದನ್ನೇ ಮನಸ್ಸಿನಲ್ಲಿ ಇಟ್ಟು ಆಡಿದ ನಿಮ್ಮಇಷ್ಟು ವರ್ಷಗಳ ಕ್ರಿಕೆಟ್ ಜೀವನಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನೀವು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದಂದಿನಿಂದ ಖಂಡಿತವಾಗಿಯೂ ಜೆರ್ಸಿ ನಂಬರ್ 99ನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನೀವು ತೆಗೆದುಕೊಂಡ 765 ವಿಕೆಟ್ ಗಳಲ್ಲಿ ಪ್ರತಿಯೊಂದು ಸಹ ವಿಶೇಷವೇ. ಅತಿ ಹೆಚ್ಚು 11 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ವಿಶ್ವದಾಖಲೆ ನಿಮ್ಮ ಹೆಸರಲ್ಲಿದೆ. ತಂಡದ ಯಶಸ್ಸಿನಲ್ಲಿ ನಿಮ್ಮ ಪಾತ್ರ ಎಷ್ಟಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ ಎಂದು ಮೋದಿ ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಇಷ್ಟೇ ಅಲ್ಲದೆ 2011ರ ವಿಶ್ವ ಕಪ್ ವಿಜಯ, 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಅಶ್ವಿನ್ ಎಸೆದ ಕೊನೆಯ ಓವರ್ ನಿಂದಾಗಿ ಭಾರತಕ್ಕೆ ಗೆಲುವು ದಕ್ಕಿದ್ದು ಎಲ್ಲವನ್ನೂ ನೆನಪಿಸಿಕೊಂಡಿದ್ದಾರೆ. ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ ನಲ್ಲಿಯೂ ಉಪಯುಕ್ತ ಕೊಡುಗೆಗಳನ್ನು ನೀಡಿ ಪಂದ್ಯಗಳನ್ನು ಗೆಲ್ಲಿಸಿಕೊಟ್ಟದ್ದನ್ನು ಪ್ರಶಂಸಿಸಿದ್ದಾರೆ.

ದೇಶಕ್ಕಾಗಿ ನಿಮ್ಮ ಬದ್ಧತೆ ಏಂದು ಎಲ್ಲರಿಗೂ ತಿಳಿದಿದೆ. ನಿಮ್ಮ ತಾಯಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗಲೂ ನೀವು ದಕ್ಷಿಣ ಆಫ್ರಿಕಾ ವಿರುದ್ಧ ಆಟವಾಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಆಗ ಚೆನ್ನೈನಲ್ಲಿ ನೆರೆ ಬಂದಿದ್ದರಿಂದ ನಿಮಗೆ ನಿಮ್ಮ ಕುಟುಂಬದೊಂದಿಗೆ ಸಂಪರ್ಕ ಸಾಧಿಸಲೂ ಸಾಧ್ಯವಾಗಿರಲಿಲ್ಲ.

ಕ್ರೀಡೆಯ ರಾಯಭಾರಿಯಾಗಿ ನೀವು ಮೈದಾನದ ಒಳಗೆ ಇರಬಹುದು ಇಲ್ಲಾ ಹೊರಗೇ ಇರಬಹುದು ನೀವು ದೇಶ ಮತ್ತು ನಿಮ್ಮ ಕುಟುಂಬ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದೀರಿ. ಈ ಸಂದರ್ಭದಲ್ಲಿ ನಾನು ನಿಮ್ಮ ಹೆತ್ತವರು, ನಿಮ್ಮ ಪತ್ನಿ ಪ್ರೀತಿ ಮತ್ತು ಪುತ್ರಿಗೂ ಶುಭಾಶಯಗಳನ್ನು ತಿಳಿಸುತ್ತೇನೆ. ಅವರ ಪ್ರೋತ್ಸಾಹ ಮತ್ತು ತ್ಯಾಗಗಳೂ ನಿಮ್ಮನ್ನು ಒಬ್ಬ ಉತ್ತಮ ಕ್ರಿಕೆಟರ್ ಮತ್ತು ವ್ಯಕ್ತಿಯನ್ನಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತದೆ ಎಂಬುದು ನನಗೆ ಗೊತ್ತು. ಈಗ ನೀವು ನಿಮ್ಮಿಚ್ಛೆಯಂತೆ ಅವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯ.

ಕ್ರಿಕೆಟ್ ಗೆ ಕೂಡ ನಿಮ್ಮ ಕೊಡುಗೆ ಮುಂದುವರಿಸುವಂತಾಗಲಿ. ಮತ್ತೊಮ್ಮೆ ನಿಮ್ಮ ಕ್ರೀಡಾ ಜೀವನಕ್ಕೆ ಮತ್ತು ಭವಿಷ್ಯಕ್ಕೆ ಅಭಿನಂದನೆಗಳು ಎಂದು ಮೋದಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

Comments


Top Stories

bottom of page