ಬ್ರಹ್ಮಪುತ್ರ ನದಿಗೆ ಅತಿ ದೊಡ್ಡ ಡ್ಯಾಮ್ ನಿರ್ಮಾಣ
- Ananthamurthy m Hegde
- Dec 28, 2024
- 1 min read

ಬೀಜಿಂಗ್: ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ವಿಶ್ವದ ಅತಿದೊಡ್ಡ ಡ್ಯಾಮ್ ನಿರ್ಮಾಣ ಮಾಡುವ ಯೋಜನೆಯು ನದಿ ಹರಿಯುವ ರಾಷ್ಟ್ರಗಳ ಮೇಲೆ ಪರಿಣಾಮ ಬೀರುವುದಿಲ್ಲ. ದಶಕಗಳ ಅಧ್ಯಯನಗಳ ಮೂಲಕ ಸುರಕ್ಷತಾ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಚೀನಾ ಶುಕ್ರವಾರ ಹೇಳುವ ಮೂಲಕ ಯೋಜನೆಯನ್ನು ಸಮರ್ಥಿಸಿಕೊಂಡಿದೆ.
ಭೂಕಂಪಗಳು ಆಗಾಗ್ಗೆ ಸಂಭವಿಸುವ ಟೆಕ್ಟೋನಿಕ್ ಪ್ಲೇಟ್ ಗಡಿಯುದ್ದಕ್ಕೂ ಇರುವ ಹಿಮಾಲಯ ಪ್ರದೇಶದಲ್ಲಿ ಸುಮಾರು 137 ಬಿಲಿಯನ್ ಡಾಲರ್ ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದು, ದಶಕಗಳ ಕಾಲ ಅಧ್ಯಯನ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಂಡು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾವೋ ನಿಂಗ್ ಹೇಳಿದ್ದಾರೆ.
ಗಡಿಯಾಚೆಗಿನ ನದಿಗಳ ಅಭಿವೃದ್ಧಿ ವಿಷಯದಲ್ಲಿ ಚೀನಾ ಯಾವಾಗಲೂ ಹೊಣೆಯಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಿಂಗ್, ಟಿಬೆಟ್‌ನಲ್ಲಿ ಜಲವಿದ್ಯುತ್ ಅಭಿವೃದ್ಧಿಯನ್ನು ದಶಕಗಳಿಂದ ಧೀರ್ಘವಾಗಿ ಅಧ್ಯಯನ ಮಾಡಲಾಗಿದೆ. ಯೋಜನೆಯ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನದಿ ಕಡಿಮೆಯಾಗಿ ಹರಿಯುವ ಪ್ರದೇಶಗಳಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಆ ರಾಷ್ಟ್ರಗಳೊಂದಿಗೆ ಮಾತುಕತೆಯನ್ನು ಮುಂದುವರೆಸುತ್ತದೆ ಮತ್ತು ನದಿಯಿಂದ ತೊಂದರೆಯಾಗುವ ಜನರಿಗೆ ವಿಪತ್ತು ತಡೆ ಮತ್ತು ಪರಿಹಾರಕ್ಕಾಗಿ ಅಂತಾರಾಷ್ಟ್ರೀಯ ಸಹಕಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಭಾರತದ ಗಡಿಯಾಚೆ ಬ್ರಹ್ಮಪುತ್ರ ನದಿಯಲ್ಲಿ ವಿಶ್ವದ ಅತಿದೊಡ್ಡ ಡ್ಯಾಮ್ ನಿರ್ಮಾಣ ಮಾಡುವುದಕ್ಕೆ ಚೀನಾ ಬುಧವಾರ ಅನುಮೋದನೆ ನೀಡಿದೆ. ಇದು ನದಿ ಹರಿಯುವ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಆತಂಕ ಮೂಡಿಸಿದೆ. ಭಾರತದ ಅರುಣಾಚಲ ಪ್ರದೇಶ ಪ್ರವೇಶಿಸುವ ಮುನ್ನ ಬ್ರಹ್ಮಪುತ್ರ ನದಿಯು ದೊಡ್ಡದಾಗಿ ತಿರುವು (U-Turn) ಪಡೆಯುವ ಹಿಮಾಲಯದ ಆಳವಾದ ಕಮರಿ ಪ್ರದೇಶದಲ್ಲಿ ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದೆ. ಅರುಣಾಚಲ ಪ್ರದೇಶದಲ್ಲಿ ಭಾರತ ಕೂಡಾ ಬ್ರಹ್ಮಪುತ್ರ ನದಿಗೆ ಡ್ಯಾಮ್ ನಿರ್ಮಿಸಲು ಮುಂದಾಗಿದೆ.















Comments