ಭಾರೀ ಹಿಮಪಾತದಿಂದ ವಿಮಾನಗಳ ಹಾರಾಟ, ರಸ್ತೆ ಸಂಚಾರ ಬಂದ್
- Ananthamurthy m Hegde
- Dec 28, 2024
- 1 min read

ಭಾರೀ ಹಿಮಪಾತದ ಕಾರಣ ಶ್ರೀನಗರ-ಜಮ್ಮುವಿನ ರಾಷ್ಟ್ರೀಯ ಹೆದ್ದಾರಿ ಮತ್ತು ಮೊಘಲ್ ರಸ್ತೆಗಳು ಮುಚ್ಚಿಹೋಗಿವೆ . ಇದರಿಂದಾಗಿ ದೇಶದ ಇತರ ಭಾಗಗಳಿಗೆ ಸಂಪರ್ಕ ಕಳೆದುಕೊಂಡಿದೆ. ಶ್ರೀನಗರ ವಿಮಾನ ನಿಲ್ದಾಣದಿಂದ ವಿಮಾನಗಳು ಟೇಕ್-ಆಫ್ ಮಾಡಲುಸಾಧ್ಯವಾಗಲಿಲ್ಲ. ಬನಿಹಾಲ್-ಬಾರಾಮುಲ್ಲಾ ವಿಭಾಗದ ರೈಲು ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಶ್ರೀನಗರ ಮತ್ತು ಕಾಶ್ಮೀರದ ಬಯಲು ಸೀಮೆಯ ಇತರ ಪ್ರದೇಶಗಳಲ್ಲಿ ಶುಕ್ರವಾರ ಈ ಸೀಸನ್ನ ಮೊದಲ ಹಿಮಪಾತ ಕಂಡುಬಂದಿದ್ದು, ಕಣಿವೆನಾಡು ಸಂಪೂರ್ಣವಾಗಿ ಬಿಳಿ ಬಣ್ಣದಿಂದ ಆವರಿಸಿದೆ.
ರಸ್ತೆಯಲ್ಲೇ ನಿಂತ ವಾಹನಗಳು
ಹಿಮಪಾತದಿಂದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸುಮಾರು 2,000 ವಾಹನಗಳು ಸಿಕ್ಕಿಹಾಕಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಮ ತೆರವಿನ ಬಳಿಕ ಭಾರೀ ವಾಹನಗಳನ್ನು ಚಲಿಸಲು ಅನುಮತಿಸಲಾಗಿದೆ ಮತ್ತು ಸಿಲುಕಿರುವ ಇತರ ವಾಹನಗಳನ್ನು ತೆರವುಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ನಾನು ಇಂದು ಜಮ್ಮುವಿನಿಂದ ಶ್ರೀನಗರಕ್ಕೆ ತೆರಳಿದೆ. ಬನಿಹಾಲ್‌ನಿಂದ ಶ್ರೀನಗರದವರೆಗೆ ನಿರಂತರವಾಗಿ ಹಿಮ ಸುರಿಯುತ್ತಿದೆ. ಪರಿಸ್ಥಿತಿಗಳು ಸಾಕಷ್ಟು ಬಿಗಡಾಯಿಸಿದೆ. ಟನಲ್ ಮತ್ತು ಖಾಜಿಗುಂಡ್ ನಡುವೆ ಸುಮಾರು 2000 ವಾಹನಗಳು ಸಿಲುಕಿಕೊಂಡಿವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ದಕ್ಷಿಣ ಕಾಶ್ಮೀರದ ಆಡಳಿತದೊಂದಿಗೆ ನನ್ನ ಕಚೇರಿ ಸಂಪರ್ಕದಲ್ಲಿದೆ. ಸ್ನೋ ಕ್ಲಿಯರೆನ್ಸ್ ಮಾಡಿದರೂ ರಸ್ತೆ ತುಂಬಾ ಹಿಮಾವೃತವಾಗಿದೆ. ಭಾರೀ ವಾಹನಗಳನ್ನು ಚಲಿಸಲು ಅನುಮತಿಸಲಾಗಿದೆ ಮತ್ತು ಸಿಕ್ಕಿಬಿದ್ದ ಉಳಿದ ವಾಹನಗಳನ್ನು ತೆರವುಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ’ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ರೈಲು ಸಂಚಾರ ಬಂದ್
ಹಳಿಯಲ್ಲಿ ಭಾರೀ ಹಿಮದ ಶೇಖರಣೆ ಮತ್ತು ನಿರಂತರ ಹಿಮಪಾತದಿಂದಾಗಿ, ಬನಿಹಾಲ್-ಬಾರಾಮುಲ್ಲಾ ವಿಭಾಗದಲ್ಲಿ ರೈಲು ಸೇವೆಗಳನ್ನು ಶನಿವಾರ ಮಧ್ಯಾಹ್ನ 1 ಗಂಟೆಯವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರದ ಪ್ರತಿಕೂಲ ಹವಾಮಾನವು ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಾಯು ಸಂಚಾರದ ಮೇಲೆ ಪರಿಣಾಮ ಬೀರಿತು. “ಕಡಿಮೆ ಗೋಚರತೆ ಮತ್ತು ರನ್‌ವೇಯಲ್ಲಿ ಹಿಮದ ಶೇಖರಣೆಗೆ ಕಾರಣವಾಗುವ ಕೆಟ್ಟ ಹವಾಮಾನದಿಂದಾಗಿ ಸಂಜೆ 4:30 ರಿಂದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಹಾರಾಟ ರದ್ದು
ಹವಾಮಾನ ಪರಿಸ್ಥಿತಿಗಳಲ್ಲಿ ತೀವ್ರವಾದ ಬದಲಾವಣೆಯಿಂದಾಗಿ ಶ್ರೀನಗರಕ್ಕೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಇಂಡಿಗೋ ಏರ್ಲೈನ್ಸ್ ಹೇಳಿದೆ. ‘ಶ್ರೀನಗರದ ಹವಾಮಾನವು ಒಂದು ತಿರುವು ಪಡೆದುಕೊಂಡಿದೆ, ಇದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕ ರನ್‌ವೇ ಮುಚ್ಚುವಿಕೆಗೆ ಕಾರಣವಾಗಿದೆ. ದುರದೃಷ್ಟವಶಾತ್, ಮತ್ತೊಮ್ಮೆ ವಿಮಾನಗಳನ್ನು ರದ್ದುಗೊಳಿಸುವ ಅಗತ್ಯವಿದೆ ಎಂದು ಏರ್ಲೈನ್ಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಪರೀಕ್ಷೆಗಳು ಕೂಡ ಮುಂದೂಡಿಕೆ
ಪ್ರತಿಕೂಲ ಹವಾಮಾನದ ಕಾರಣ ಕಾಶ್ಮೀರ ವಿಶ್ವವಿದ್ಯಾಲಯವು ಶನಿವಾರ ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ. ಮುಂದೂಡಲ್ಪಟ್ಟ ಪರೀಕ್ಷೆಗಳಿಗೆ ಹೊಸ ದಿನಾಂಕಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಶ್ರೀನಗರದ ಹೊರತಾಗಿ, ಗಂದರ್‌ಬಾಲ್, ಅನಂತನಾಗ್, ಕುಲ್ಗಾಮ್, ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳ ಬಯಲು ಪ್ರದೇಶಗಳಲ್ಲಿಯೂ ಈ ಸೀಸನ್ನ ಮೊದಲ ಹಿಮಪಾತವು ದಾಖಲಾಗಿದೆ.















Comments