top of page

ಯುಎಸ್‌ ವೀಸಾ ನಿರಾಕರಣೆಯ ಕ್ಷಣ ನೆನೆದ ಮೋದಿ

  • Writer: Ananthamurthy m Hegde
    Ananthamurthy m Hegde
  • Jan 11
  • 2 min read

ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗಿನ ತಮ್ಮ ಮೊಟ್ಟಮೊದಲ ಪಾಡ್‌ಕಾಸ್ಟ್‌ನಲ್ಲಿ, ಪ್ರಧಾನಿ ಮೋದಿ ಅವರು 2005ರ ವೀಸಾ ನಿರಾಕರಣೆಯ ಸಂದರ್ಭವನ್ನು ಮೆಲುಕು ಹಾಕಿದ್ದಾರೆ. ಆ ಸಂದರ್ಭದಲ್ಲಿ ತಾವು ನೀಡಿದ್ದ ಹೇಳಿಕೆಯೊಂದನ್ನು ನೆನೆದಿರುವ ಪ್ರಧಾನಿ ಮೋದಿ, "ಮುಂದೊಂದು ದಿನ ಭಾರತದ ವೀಸಾಗಾಗಿ ಜಗತ್ತು ಕ್ಯೂ ನಿಲ್ಲುತ್ತದೆ.." ಎಂಬ ತಮ್ಮ ಮಾತು ಈಗ ನಿಜವಾಗುತ್ತಿರುವುದಕ್ಕೆ ಸಂತಸವಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಪಾಡ್‌ಕಾಸ್ಟ್ ಸಂದರ್ಶನದ ಆಯ್ದ ಭಾಗದ ವಿಸ್ತೃತ ವರದಿ ಇಲ್ಲಿದೆ.


ree

2005ರಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಅಮೆರಿಕ ವೀಸಾ ನಿರಾಕರಿಸಿತ್ತು. ಗುಜರಾತ್‌ ಕೋಮುಗಲಭೆ ಹಿನ್ನೆಲೆಯಲ್ಲಿ ಮೋದಿ ಅವರಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಘಟನೆ ನಡೆದು ಈಗ 20 ವರ್ಷಗಳು ಉರುಳಿದ್ದು, ನರೇಂದ್ರ ಮೋದಿ ಈಗ ಭಾರತದ ಪ್ರಧಾನಿಯಾಗಿ ಮೂರನೇ ಅವಧಿಯಲ್ಲಿ ಮುನ್ನಡೆಯುತ್ತಿದ್ದಾರೆ.

ಇದೀಗ ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗಿನ ತಮ್ಮ ಮೊಟ್ಟಮೊದಲ ಪಾಡ್‌ಕಾಸ್ಟ್‌ನಲ್ಲಿ, ಪ್ರಧಾನಿ ಮೋದಿ ಅವರು 2005ರ ವೀಸಾ ನಿರಾಕರಣೆಯ ಸಂದರ್ಭವನ್ನು ಮೆಲುಕು ಹಾಕಿದ್ದಾರೆ. ಅಲ್ಲದೇ ಆ ಸಂದರ್ಭದಲ್ಲಿ ನೀಡಿದ್ದ ತಮ್ಮ ಹೇಳಿಕೆಯೊಂದನ್ನು ಮೋದಿ ನೆನಪಿಸಿಕೊಂಡಿದ್ದಾರೆ.

"ಗುಜರಾತ್‌ ಗಲಭೆ ಹಿನ್ನೆಲೆಯಲ್ಲಿ ಅಮೆರಿಕ ನನ್ನ ವೀಸಾ ಮೇಲೆ ನಿರ್ಬಂಧ ಹೇರಿತು. ಆಗ ನಾನು ಪತ್ರಿಕಾಗೋಷ್ಠಿ ನಡೆಸಿ, ಮುಂದೊಂದು ದಿನ ಭಾರತದ ವೀಸಾ ಪಡೆಯಲು ಇಡೀ ಜಗತ್ತು ಸರತಿ ಸಾಲಿನಲ್ಲಿ ನಿಲ್ಲುತ್ತದೆ ಎಂದು ಹೇಳಿದ್ದೆ. ಈಗ ಆ ಮಾತು ನಿಜವಾಗುತ್ತಿರುವುದನ್ನು ನೋಡಿ ತುಂಬ ಸಂತಸವಾಗುತ್ತದೆ.." ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

"2025ರಲ್ಲಿ ಭಾರತದ ಜಾಗತಿಕ ಸ್ಥಾನಮಾನ ತುಂಬ ಎತ್ತರಕ್ಕೆ ಏರಿದೆ. ಜಾಗತಿಕ ವೇದಿಕೆಗಳಲ್ಲಿ ಭಾರತದ ಧ್ವನಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಭಾರತದ ಅಗಾಧ ಮಾನವ ಶಕ್ತಿಯು ಈ ಅದ್ಭುತವನ್ನು ಸಾಧಿಸಿ ತೋರಿಸಿದೆ. ಭಾರತಕ್ಕೆ ಬರಲು, ಭಾರತದ ವೀಸಾ ಪಡೆಯಲು ಈಗ ವಿದೇಶಿಯರು ಕಾತರದಿಂದ ಕಾಯುತ್ತಿದ್ದಾರೆ. ನನ್ನ 20 ವರ್ಷಗಳ ಹಿಂದಿನ ಮಾತು ಈಗ ನಿಜವಾಗುತ್ತಿದೆ.." ಎಂದು ಪ್ರಧಾನಿ ಮೋದಿ ನುಡಿದರು.

"ನಾನು ಇತ್ತೀಚಿಗೆ ಕುವೈತ್‌ ಪ್ರವಾಸ ಹಮ್ಮಿಕೊಂಡಿದ್ದೆ. ಅಲ್ಲಿನ ಲೇಬರ್‌ ಕಾಲೋನಿಗೆ ಭೇಟಿ ನೀಡಿ ಭಾರತೀಯ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದೆ. ಆಗ ಅಲ್ಲೋರ್ವ ಕಾರ್ಮಿಕ, 'ಭಾರತದಲ್ಲಿರುವ ನನ್ನ ಸ್ವಂತ ಜಿಲ್ಲೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಾವಾಗ ಆಗುತ್ತೆ..?' ಎಂದು ಪ್ರಶ್ನಿಸಿದ. ಇದು ವರ್ತಮಾನ ಭಾರತದ ಪರಿಸ್ಥಿತಿಗೆ ಹಿಡಿದ ಕನ್ನಡಿ.." ಎಂದು ಪ್ರಧಾನಿ ಮೋದಿ ಹೇಳಿದರು.

"2047ರಲ್ಲಿ 'ವಿಕಸಿತ ಭಾರತ'ದ ನಮ್ಮ ಕನಸು ನನಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಸಂಪೂರ್ಣ ಭಾರತ ಒಂದಾಗಿ ಕೆಲಸ ಮಾಡುತ್ತಿದೆ. ಭಾರತ ಮಾನವ ಸಂಪನ್ಮೂಲ ಜಗತ್ತಿನ ಒಳಿತಿಗಾಗಿಯೇ ಇದ್ದು, ಇಡೀ ವಿಶ್ವವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಭಾರತ ಪಡೆದುಕೊಳ್ಳಲಿದೆ.." ಎಂದು ಪ್ರಧಾನಿ ಮೋದಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದ್ದಾರೆ.

ಇನ್ನು ಪಾಡ್‌ಕಾಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಬಿಕ್ಕಟ್ಟುಗಳ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, "ನಮ್ಮದು ತಟಸ್ಥ ವಿದೇಶಾಂಗ ನೀತಿ ಅಲ್ಲವಾದರೂ, ಜಾಗತಿಕ ಶಾಂತಿಯ ಪರವಾಗಿ ಗಟ್ಟಿಯಾಗಿ ಮಾತನಾಡುವುದನ್ನು ಮುಂದುವರೆಸುತ್ತೇವೆ. ಜಾಗತಿಕ ಶಾಂತಿಗಾಗಿ ಅಗತ್ಯವಿರುವ ಎಲ್ಲವನ್ನೂ ಭಾರತ ಮಾಡಲಿದೆ.." ಎಂದು ಭರವಸೆ ನೀಡಿದರು.

"ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅಸಾಧಾರಣ ಸಾಧನೆ ಮಾಡುತ್ತಿದ್ದು, ತಂತ್ರಜ್ಞಾನದ ಅಭಿವೃದ್ಧಿ ದೇಶದ ಅಭಿವೃದ್ಧಿ ಎಂಬ ಮಂತ್ರವನ್ನು ನಂಬಿದೆ. ಭಾರತದಲ್ಲಿ ಡಿಜಿಟಲ್‌ ಯುಗಕ್ಕೆ ಹೊಂದಾಣಿಕೆಯಾಗುವ ವಾತಾವರಣವಿದ್ದು, ನಮ್ಮ ಶಕ್ತಿಯನ್ನು ಹಗತ್ತು ಗ್ರಹಿಸಿದೆ.." ಎಂದು ಪ್ರಧಾನಿ ಮೋದಿ ಹೇಳಿದರು.

Comments


Top Stories

bottom of page