top of page

ರೈಲ್ವೆ ಟಿಕೆಟ್‌ಗಳಲ್ಲಿ 'ಆಪರೇಷನ್ ಸಿಂಧೂರ್ʼ, ಮೋದಿ ಫೋಟೋ ಅಬ್ಬರ

  • Writer: Ananthamurthy m Hegde
    Ananthamurthy m Hegde
  • 13 hours ago
  • 2 min read

ಹೊಸ ದಿಲ್ಲಿ: ಪಹಲ್ಗಾಮ್‌ ದಾಳಿಯ ನಂತರ ಪಾಕಿಸ್ತಾನ ಮಾಡಿದ ದಾಳಿಗೆ ಭಾರತ ಆಪರೇಷನ್‌ ಸಿಂಧೂರ್‌ನಡಿ ಪ್ರತಿದಾಳಿ ಮಾಡಿತ್ತು. ಅಮೆರಿಕ ಡೊನಾಲ್ಡ್‌ ಟ್ರಂಪ್‌ ಮಧ್ಯಸ್ಥಿಕೆಯಲ್ಲಿ ಕದನವಿರಾಮ ಘೋಷಿಸಿಕೊಳ್ಳಲಾಯಿತು. ಸದ್ಯ ಆ ಯಶಸ್ಸನ್ನು ರೈಲ್ವೆ ಇಲಾಖೆಯು ಟಿಕೆಟ್‌ಗಳಲ್ಲಿ ಪ್ರದರ್ಶಿಸುತ್ತಿದೆ. ಈ ಬಗ್ಗೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಬಿಹಾರ ಚುನಾವಣೆಗೆ ವೋಟ್‌ ಬ್ಯಾಂಕಿಗಾಗಿ ಸರ್ಕಾರದ ಕುತಂತ್ರ ಎಂದಿದೆ.


ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಿಲಿಟರಿ ಕಾರ್ಯಾಚರಣೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮೇ 17 ರಂದು ಭೋಪಾಲ್-ಝಾನ್ಸಿ ಮಾರ್ಗದಲ್ಲಿ ಬುಕ್ ಮಾಡಿದ ಟಿಕೆಟ್‌ನಲ್ಲಿ, 'ಆಪರೇಷನ್ ಸಿಂಧೂರ್' ಕುರಿತು ಪ್ರಧಾನಿ ಮೋದಿ ಅವರ ಚಿತ್ರ ಮತ್ತು ವಿವರಣೆ ಇದೆ. ಈ ಬಗ್ಗೆ ಕಾಂಗ್ರೆಸ್ ಮತ್ತು ಬಿಎಸ್‌ಪಿ ಪಕ್ಷ ಟೀಕೆ ಮಾಡಿವೆ. ಭಾರತೀಯ ರೈಲ್ವೆ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ದೇಶದ ಹೆಮ್ಮೆಯ ವಿಷಯ ಎಂದು ಹೇಳಿದೆ.

ಆಪರೇಷನ್‌ ಸಿಂಧೂರ ಪ್ರಚಾರದ ಸರಕಾಗಿ ಬಳಕೆ

ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರ ಮಾಧ್ಯಮ ಸಲಹೆಗಾರ ಪಿಯೂಷ್ ಬಬೆಲೆ ಅವರು ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದು, IRCTC ಇ-ಟಿಕೆಟ್‌ನ ಫೋಟೋವನ್ನು ಹಂಚಿಕೊಂಡಿದ್ದಾರೆ. "ಮೋದಿ ಸರ್ಕಾರವು ಜಾಹೀರಾತು ಪ್ರಿಯವಾಗಿದೆ. ಅವರು ರೈಲ್ವೆ ಟಿಕೆಟ್‌ಗಳಲ್ಲಿ 'ಆಪರೇಷನ್ ಸಿಂಧೂರ್' ಅನ್ನು ಜಾಹೀರಾತಿನಂತೆ ಬಳಸುತ್ತಿದ್ದಾರೆ. ಮಿಲಿಟರಿಯ ಶೌರ್ಯವನ್ನು ಒಂದು ಉತ್ಪನ್ನದಂತೆ ಮಾರಾಟ ಮಾಡುತ್ತಿದ್ದಾರೆ. ಇದು ದೇಶಭಕ್ತಿಯಲ್ಲ, ವ್ಯಾಪಾರ" ಎಂದು ಪೋಸ್ಟ್‌ ಮಾಡಿದ್ದಾರೆ.

ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ನ ಥರ್ಡ್ AC ಕೋಚ್‌ನಲ್ಲಿ ಈ ಟಿಕೆಟ್ ಬುಕ್ ಮಾಡಲಾಗಿತ್ತು. ಟಿಕೆಟ್‌ನಲ್ಲಿ ಪ್ರಧಾನಿ ಮೋದಿ ಅವರ ಚಿತ್ರದೊಂದಿಗೆ 'ಆಪರೇಷನ್ ಸಿಂಧೂರ್' ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತವು ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ಆಪರೇಷನ್ ಸಿಂಧೂರ್ ನಡೆಸಿದೆ. ಇದನ್ನು ಬಿಜೆಪಿ ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಬಬೆಲೆ ಆರೋಪಿಸಿದ್ದಾರೆ.

ಬಿಹಾರ ಚುನಾವಣೆ ವೋಟ್‌ಗಾಗಿ ತಂತ್ರ

"ಭಾರತವು ಸೈನ್ಯವನ್ನು ರಾಜಕೀಯಕ್ಕೆ ಬಳಸುವುದನ್ನು ತಪ್ಪಿಸುತ್ತಿತ್ತು. ಆದರೆ, ಬಿಜೆಪಿ ನಾಯಕರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗ ರೈಲ್ವೆ ಟಿಕೆಟ್‌ಗಳನ್ನು ಮೋದಿ ಅವರ ಫೋಟೋ ಮತ್ತು ಹೇಳಿಕೆಗಳೊಂದಿಗೆ ಪ್ರಚಾರ ಸಾಧನವನ್ನಾಗಿಸಿಕೊಂಡಿದ್ದಾರೆ. ಇದು ಬಿಹಾರ ಚುನಾವಣೆಯಲ್ಲಿ ವೋಟ್‌ಗಾಗಿ ಸರ್ಕಾರ ಈ ತಂತ್ರ ಬಳಸಿಕೊಂಡಿದೆ. ಇಂತಹ ಕುತಂತ್ರವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.

ಬಹುಜನ ಸಮಾಜ ಪಕ್ಷದ (BSP) ಸಂಸದ ಕುನ್ವರ್ ದಾನಿಶ್ ಅಲಿ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಈ ಜಾಹೀರಾತನ್ನು ಟೀಕಿಸಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧ ಮತ್ತು ಹುತಾತ್ಮತೆಯನ್ನು ಅವಕಾಶಗಳಂತೆ ನೋಡುತ್ತಾರೆ. ಮುಗ್ಧ ನಾಗರಿಕರು ರಕ್ತ ಹರಿಸುತ್ತಿದ್ದರೆ ಮತ್ತು ಸೈನಿಕರು ಪ್ರಾಣವನ್ನು ಪಣಕ್ಕಿಟ್ಟು ಪಾಕಿಸ್ತಾನವನ್ನು ಎದುರಿಸುತ್ತಿರುವ ಹೊತ್ತಲ್ಲಿ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಹುತಾತ್ಮರ ಹೆಸರು ಅಥವಾ ಮುಖಗಳಿಲ್ಲ, ಕೇವಲ ಮೋದಿ ಅವರ ಚಿತ್ರ ಮತ್ತು ಪ್ರಚಾರವಿದೆ. ಇದು ಸ್ವಯಂ-ಮೋಹದ ಪರಮಾವಧಿಯಲ್ಲವೇ?" ಎಂದು ಅವರು ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

ಆಪರೇಷನ್‌ ಸಿಂಧೂರ ಯಶಸ್ವಿ ಜನರಿಗೆ ಮುಟ್ಟಿಸೋದು ನಮ್ಮ ಕರ್ತವ್ಯ

ಈ ವಿವಾದದ ಬಗ್ಗೆ ರೈಲ್ವೆ ಮಂಡಳಿಯ ಅಧಿಕಾರಿ ದಿಲೀಪ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. "ಆಪರೇಷನ್ ಸಿಂಧೂರ್ ಅನ್ನು ಯಶಸ್ವಿಯಾಗಿ ನಡೆಸಿದ ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಇಡೀ ದೇಶವು ಅವರ ಧೈರ್ಯವನ್ನು ಆಚರಿಸುತ್ತಿದೆ. ಗೌರವದ ಸಂಕೇತವಾಗಿ, ಭಾರತೀಯ ರೈಲ್ವೆ ಟಿಕೆಟ್‌ಗಳಲ್ಲಿ ಈ ಸಂದೇಶವನ್ನು ಹೈಲೈಟ್ ಮಾಡಲು ಮತ್ತು ತ್ರಿವರ್ಣ ಧ್ವಜದೊಂದಿಗೆ ನಿಲ್ದಾಣಗಳನ್ನು ಬೆಳಗಿಸಲು ನಿರ್ಧರಿಸಿದೆ. ಇದು ಆಪರೇಷನ್‌ನ ಯಶಸ್ಸಿನ ಸಂದೇಶವನ್ನು ಹರಡುವ ರಾಷ್ಟ್ರವ್ಯಾಪಿ ಅಭಿಯಾನ" ಎಂದು ಹೇಳಿದ್ದಾರೆ.

ಆಪರೇಷನ್‌ ಸಿಂಧೂರ್‌ ಯಶಸ್ವಿ ಬಗ್ಗೆ ಪ್ರಚಾರವಷ್ಟೆ!

ಕಾಂಗ್ರೆಸ್ ಪಕ್ಷದ ಆಕ್ಷೇಪಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಕುಮಾರ್, "ಆಪರೇಷನ್ ಸಿಂಧೂರ್‌ನ ಯಶಸ್ಸು ದೇಶಕ್ಕೆ ಹೆಮ್ಮೆಯ ವಿಷಯ. ಈ ಬಗ್ಗೆ ಭಾರತದ ಮೂಲೆ ಮೂಲೆಗೂ ತಲುಪಬೇಕು ಎಂದು ನಾವು ನಂಬುತ್ತೇವೆ. ಅದಕ್ಕಾಗಿ ನಾವು ಅಭಿಯಾನವನ್ನು ನಡೆಸುತ್ತಿದ್ದೇವೆ" ಎಂದು ಉತ್ತರಿಸಿದ್ದಾರೆ.

ಸರಳವಾಗಿ ಹೇಳಬೇಕೆಂದರೆ, ಭಾರತೀಯ ರೈಲ್ವೆಯು ಟಿಕೆಟ್‌ಗಳಲ್ಲಿ 'ಆಪರೇಷನ್ ಸಿಂಧೂರ್' ಬಗ್ಗೆ ಪ್ರಚಾರ ಮಾಡುತ್ತಿದೆ. ಇದರಲ್ಲಿ ಪ್ರಧಾನಿ ಮೋದಿಯವರ ಫೋಟೋ ಕೂಡ ಇದೆ. ಇದನ್ನು ಕಾಂಗ್ರೆಸ್ ಮತ್ತು BSP ವಿರೋಧಿಸುತ್ತಿವೆ. ಆದರೆ, ರೈಲ್ವೆ ಇಲಾಖೆಯು ಇದು ದೇಶದ ಹೆಮ್ಮೆಯ ವಿಷಯ ಎಂದು ಸಮರ್ಥಿಸಿಕೊಂಡಿದೆ.

Comentarios


Top Stories

bottom of page