top of page

ವಿಮಾನ ದುರಂತಕ್ಕೆ ಕಾರಣ ತಿಳಿಯಲು ಪಾರದರ್ಶಕ ತನಿಖೆ

  • Writer: Ananthamurthy m Hegde
    Ananthamurthy m Hegde
  • Jun 14
  • 1 min read
ree

ಗುರುವಾರ ಸಂಭವಿಸಿದ ಅಹಮದಾಬಾದ್-ಲಂಡನ್ ನಡುವಿನ ವಿಮಾನ ಅಪಘಾತದ ಬಗ್ಗೆ ಕಾರಣ ತಿಳಿಯಲು ಸಂಪೂರ್ಣ ಪಾರದರ್ಶಕವಾಗಿ ತನಿಖೆ ನಡೆಸಲಾಗುವುದು, ಟಾಟಾ ಗ್ರೂಪ್‌ ಇತಿಹಾಸದ ಕರಾಳ ದಿನಗಳಲ್ಲಿ ಇದು ಸಹ ಒಂದು ಟಾಟಾ ಸನ್ಸ್ ಮತ್ತು ಏರ್ ಇಂಡಿಯಾದ ಅಧ್ಯಕ್ಷ ಎನ್ ಚಂದ್ರಶೇಖರನ್ ಶುಕ್ರವಾರ ಹೇಳಿದ್ದಾರೆ.

242 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ಗುರುವಾರ ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ತಕ್ಷಣವೇ ಪತನಗೊಂಡಿತ್ತು.

'ನಿಮ್ಮಂತೆ, ನಾವು ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಈಗ ನಮಗೆ ಏನು ತಿಳಿದಿಲ್ಲ, ಕಳೆದ 24 ಗಂಟೆಗಳಲ್ಲಿ ಭಾರತ, ಯುಕೆ ಮತ್ತು ಯುಎಸ್ ತನಿಖಾ ತಂಡಗಳು ಅಪಘಾತದ ತನಿಖೆಗಾಗಿ ಅಹಮದಾಬಾದ್‌ಗೆ ಆಗಮಿಸಿವೆ. ಅವರಿಗೆ ನಮ್ಮ ಸಂಪೂರ್ಣ ಸಹಕಾರವಿದೆ. ಕಾರಣ ತಿಳಿಯಲು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತೇವೆ ಎಂದು ತಿಳಿಸಿದ್ದಾರೆ.

ನೊಂದ ಕುಟುಂಬಗಳು ಮತ್ತು ಪೈಲಟ್‌ ಮತ್ತು ಸಿಬ್ಬಂದಿಗೆ ನಮ್ಮ ಸಂಸ್ಥೆ ಋಣಿಯಾಗಿದೆ. ಟಾಟಾ ಗ್ರೂಪ್ ಸಮಾಜದ ಬಗ್ಗೆ ತನ್ನ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಅಹಮದಾಬಾದ್-ಲಂಡನ್ ವಿಮಾನದ ಬ್ಲ್ಯಾಕ್ ಬಾಕ್ಸ್ ಗುರುವಾರ ಪತ್ತೆಯಾಗಿದೆ. ಇದು ಪತನದ ಹಿಂದಿನ ಕಾರಣ ಹುಡುಕಲು ತನಿಖಾಧಿಕಾರಿಗಳಿಗೆ ನೆರವಾಗುವ ಸಾಧ್ಯತೆಯಿದೆ.

ಟಾಟಾ ಗ್ರೂಪ್ ಔಪಚಾರಿಕವಾಗಿ ಜನವರಿ 2022 ರಲ್ಲಿ ಏರ್ ಇಂಡಿಯಾದ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಅಂದಿನಿಂದ ಸೇವೆಯ ಗುಣಮಟ್ಟ ಮತ್ತು ಕಾರ್ಯಾಚರಣೆಯ ಕೊರತೆಗಳ ಬಗ್ಗೆ ಪ್ರಯಾಣಿಕರಿಂದ ಹಲವಾರು ದೂರುಗಳನ್ನು ಎದುರಿಸುತ್ತಿದೆ. ಅಪಘಾತಕ್ಕೆ ಕಾರಣ ಹುಡುಕುವುದು ಮಾನವನ ಪ್ರವೃತ್ತಿಯಾಗಿದೆ. ನಮ್ಮ ಸುತ್ತಲೂ ಸಾಕಷ್ಟು ಊಹಾಪೋಹಗಳಿವೆ. ಅದರಲ್ಲಿ ಕೆಲವು ಸರಿಯಾಗಿರಬಹುದು, ಕೆಲವು ತಪ್ಪಾಗಿರಲೂಬಹುದು. ತನಿಖೆಯ ಬಳಿಕ ನಿಜಾಂಶ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.

ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬಕ್ಕೆ ಟಾಟಾ ಗ್ರೂಪ್ 1 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಗುರುವಾರ ಚಂದ್ರಶೇಖರನ್ ಘೋಷಿಸಿದರು. ಸಾಧ್ಯವಾದಷ್ಟು ಬೇಗ ನಿಖರ ಮತ್ತು ಸಮಯೋಚಿತ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಏರ್‌ಲೈನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾಂಪ್‌ಬೆಲ್ ವಿಲ್ಸನ್ ಹೇಳಿದ್ದಾರೆ.

Comments


Top Stories

bottom of page