top of page

ವೈಷ್ಣೋದೇವಿ ರೋಪ್ ವೇ ಯೋಜನೆಗೆ ವಿರೋಧ; 72 ಗಂಟೆ ಕತ್ರಾ ಬಂದ್

  • Writer: Ananthamurthy m Hegde
    Ananthamurthy m Hegde
  • Dec 26, 2024
  • 1 min read
ree

ಶ್ರೀನಗರ: ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಮೂಲ ಶಿಬಿರವಾದ ಕತ್ರಾ ಪಟ್ಟಣದಿಂದ ದೇಗುಲದವರೆಗೆ ಪ್ರಸ್ತಾವಿತ ರೋಪ್‌ವೇ ಯೋಜನೆ ವಿರುದ್ಧ ಬುಧವಾರದಿಂದ 72 ಗಂಟೆಗಳ ಕಾಲ ಬಂದ್ ನಡೆಸಲಾಗುತ್ತಿದೆ.

ವ್ಯಾಪಾರಿಗಳು, ಅಂಗಡಿಕಾರರು, ಪೋನಿ ಆಪರೇಟರ್‌ಗಳು, ಕೂಲಿ ಕಾರ್ಮಿಕರು ಸೇರಿದಂತೆ ಸ್ಥಳೀಯರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ತಮ್ಮ ಜೀವನೋಪಾಯವನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಬಂದ್‌ನಿಂದಾಗಿ ಯಾತ್ರಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅಂಗಡಿ ಮುಂಗಟ್ಟುಗಳು ಹಾಗೂ ಇತರೆ ವ್ಯಾಪಾರ ಸಂಸ್ಥೆಗಳು ಕೂಡ ಬಂದ್ ಆಗಿವೆ. ರೋಪ್‌ವೇ ಯೋಜನೆ ವಿರುದ್ಧ ಆಂದೋಲನದ ನೇತೃತ್ವ ವಹಿಸಿರುವ ಶ್ರೀ ಮಾತಾ ವೈಷ್ಣೋದೇವಿ ಸಂಘರ್ಷ ಸಮಿತಿಯು ಈ ಬಂದ್‌ಗೆ ಕರೆ ನೀಡಿದೆ.

ಪ್ರಸ್ತಾವಿತ `250 ಕೋಟಿ ರೂ. ರೋಪ್‌ವೇ ಯೋಜನೆಯು ತಾರಾಕೋಟ್ ಮಾರ್ಗವನ್ನು ಸಂಜಿ ಛಾಟ್‌ಗೆ ಸಂಪರ್ಕಿಸುತ್ತದೆ. ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯು ವಯೋವೃದ್ಧರು ಮತ್ತು ಇತರರು ದೇವಸ್ಥಾನ ಪ್ರವೇಶಿಸಲು ಅನುಕೂಲವಾಗುವಂತೆ ರೋಪ್‌ವೇ ನಿರ್ಮಿಸಲು ನಿರ್ಧರಿಸಿದೆ.

ವೈಷ್ಣೋದೇವಿ ಸಂಘರ್ಷ ಸಮಿತಿ ಮುಖಂಡರ ಪ್ರಕಾರ, ರೋಪ್‌ವೇ ಯೋಜನೆಯು ಸ್ಥಳೀಯರ ಜೀವನೋಪಾಯವನ್ನು ಕಸಿದುಕೊಳ್ಳುತ್ತದೆ. ಪಟ್ಟಣದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. "ಇದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಮತ್ತು ನಮ್ಮ ಪರಿಸರವನ್ನು ಹಾಳು ಮಾಡುತ್ತದೆ" ಎಂದು ಸಂಘರ್ಷ ಸಮಿತಿಯ ನಾಯಕರೊಬ್ಬರು ಹೇಳಿದ್ದಾರೆ.

ಈ ಸಂಬಂಧ ರಿಯಾಸಿ ಜಿಲ್ಲಾಧಿಕಾರಿ ಅವರೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸಮಿತಿಯು 72 ಗಂಟೆಗಳ ಕಾಲ ಬಂದ್‌ಗೆ ಕರೆ ನೀಡಿದೆ.

ಕತ್ರಾ ಪಟ್ಟಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಸಮಿತಿ ಮುಖಂಡರು ಮತ್ತು ವ್ಯಾಪಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಅನೇಕ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕ್ರಮ ಅನಪೇಕ್ಷಿತ ಮತ್ತು ಅನಗತ್ಯ. ಇದು ಜನರ ಕೋಪವನ್ನು ಹೆಚ್ಚಿಸಿದೆ ಎಂದು ಮಾಜಿ ಶಾಸಕ ಜುಗಲ್ ಶರ್ಮಾ ಹೇಳಿದ್ದಾರೆ.

Comments


Top Stories

bottom of page