top of page

ಹೊಸ ಅಪರಾಧ ಕಾನೂನುಗಳ ಪ್ರಾಯೋಗಿಕ ಬಳಕೆ ವೀಕ್ಷಿಸಿದ ಮೋದಿ

  • Writer: Ananthamurthy m Hegde
    Ananthamurthy m Hegde
  • Dec 4, 2024
  • 1 min read


ree

ಭಾರತದ ಹೊಸದಾದ ಮೂರು ಅಪರಾಧ ಕಾನೂನುಗಳ ಪ್ರಾಯೋಗಿಕ ಬಳಕೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ವೀಕ್ಷಿಸಿದರು. ಮಂಗಳವಾರ ಚಂಡೀಗಢದಲ್ಲಿ ಆಯೋಜನೆಯಾಗಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮತ್ತು ಕೇಂದ್ರದ ಗೃಹ ಸಚಿವರು ಓಡಾಡಿದರು.ಬ್ರಿಟಿಷ್‌ ಕಾಲದ ಭಾರತೀಯ ದಂಡ ಸಂಹಿತೆ, ಅಪರಾಧ ದಂಡಪ್ರಕ್ರಿಯಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಾಗಿ ಈ ಮೂರು ಕಾನೂನುಗಳು ಜಾರಿಯಾಗಿವೆ. ಕ್ರಿಮಿನಲ್‌ ಅಪರಾಧಗಳ ವಿರುದ್ಧ ಕ್ರಮ ಜರುಗಿಸಲು 2024ರ ಜುಲೈನಿಂದ ಅನುಷ್ಠಾನಗೊಂಡಿರುವ ಮೂರು ಕಾನೂನುಗಳು- ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮದ ಪ್ರಾಯೋಗಿಕ ಅನುಭವವನ್ನು ನಾಯಕರು ಪಡೆದರು.ಚಂಡೀಗಢದ ಪಂಜಾಬ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಲೈವ್‌ ಡೆಮೋ ಆಯೋಜನೆಯಾಗಿದ್ದು, ಚಂಡೀಗಢದ ಪೊಲೀಸರು ಸಾಕ್ಷ್ಯಗಳ ಸಂಗ್ರಹ ಹಾಗೂ ಆರೋಪಿಗಳಿಂದ ಹೇಳಿಕೆಗಳನ್ನು ದಾಖಲಿಸುವುದು ಸೇರಿದಂತೆ ಇತರೆ ಪ್ರಕ್ರಿಯೆಗಳನ್ನು ತೋರಿಸಿದರು. ಚಂಡೀಗಢದ ಹಿರಿಯ ಎಸ್ಪಿ ಕನ್ವರ್‌ದೀಪ್‌ ಕೌರ್‌ ಅವರು ಪ್ರಧಾನಿ ಮೋದಿಯವರಿಗೆ ಪ್ರಕ್ರಿಯೆಗಳ ಬಗ್ಗೆ ವಿವರಿಸಿದರು. ಕೊಲೆಯ ರೀತಿಯ ಅಪರಾಧ ನಡೆದಾಗ ಅಲ್ಲಿಂದ ಕಂಟ್ರೋಲ್‌ ರೂಂಗೆ ಮಾಹಿತಿ ರವಾನೆಯಾಗುವುದು, ಪಿಸಿಆರ್‌ ವ್ಯಾನ್‌, ಪೊಲೀಸ್‌ ಠಾಣೆ, ಸಿಎಫ್‌ಎಸ್‌ಎಲ್‌, ಆಸ್ಪತ್ರೆ, ಜೈಲು ಹಾಗೂ ಕೋರ್ಟ್‌ ಈ ಎಲ್ಲ ಹಂತಗಳ ಬಗ್ಗೆ ವಿವರಿಸಲಾಯಿತು.ಇಡೀ ದೇಶದಲ್ಲೇ ಮೂರೂ ಕಾನೂನುಗಳನ್ನು ಚಂಡೀಗಢದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇನ್ನು ಮೂರು ವರ್ಷಗಳಲ್ಲಿ ದೇಶದ ಎಲ್ಲ ಕಡೆಯು ಹೊಸ ಕಾನೂನುಗಳು ಅನುಷ್ಠಾನಗೊಳಿಸಲು ಕ್ರಮವಹಿಸಲಾಗುತ್ತಿದೆ.ಹೊಸ ಕಾನೂನುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಪ್ರಾಯೋಗಿಕ ಮಾದರಿಯನ್ನು ಲೈವ್‌ ಆಗಿ ವೀಕ್ಷಿಸಿದರು. ಇದರೊಂದಿಗೆ ಹೊಸದಾಗಿ ಪರಿಚಯಿಸಲಾಗಿರುವ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳು ಕಾನೂನು ಜಾರಿಯಲ್ಲಿ ಹೇಗೆ ಮಹತ್ವದ ಪಾತ್ರವಹಿಸುತ್ತವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಇ-ಸಾಕ್ಷ್ಯ, ನ್ಯಾಯ ಸೇತು, ನ್ಯಾಯ ಶೃತಿ ಹಾಗೂ ಇ-ಸಮನ್ಸ್‌ ಪ್ಲಾಟ್‌ಫಾರ್ಮ್‌ಗಳ ಮೂಲಕ ಕಾನೂನು ಜಾರಿ, ನ್ಯಾಯಾಂಗದ ಪ್ರಕ್ರಿಯೆಗಳು ಹಾಗೂ ಸಾಕ್ಷ್ಯಗಳ ನಿರ್ವಹಣೆಯನ್ನು ಮಾಡುವುದಕ್ಕೆ ಅನುವಾಗಲಿದೆ.ಒಂದು ಅಪರಾಧ ಪ್ರಕರಣ ನಡೆದಾಗ ಈ ಎಲ್ಲ ವ್ಯವಸ್ಥೆಗಳನ್ನು ಬಳಸಿಕೊಂಡು ಹೇಗೆ ತನಿಖೆ ಕೈಗೊಳ್ಳಬಹುದು ಹಾಗೂ ಮುಂದಿನ ಪ್ರಕ್ರಿಯೆಗಳನ್ನು ಸರಳಗೊಳಿಸಬಹುದು ಅನ್ನೋದನ್ನು ಪ್ರಾಯೋಗಿಕವಾಗಿ ತೋರಿಸಲಾಗಿದೆ. ಎಐ ತಂತ್ರಜ್ಞಾನ ಬಳಕೆ ಸೇರಿದಂತೆ ಈ ಎಲ್ಲ ಅಪ್ಲಿಕೇಷನ್‌ಗಳನ್ನು ನ್ಯಾಷನಲ್‌ ಇನ್ಫರ್ಮ್ಯಾಟಿಕ್ಸ್‌ ಸೆಂಟರ್ ಮತ್ತು ನ್ಯಾಷನಲ್‌ ಕ್ರೈಮ್‌ ರೆಕಾರ್ಡ್‌ ಬ್ಯೂರೋ ಜೊತೆಯಾಗಿ ಅಭಿವೃದ್ಧಿ ಪಡಿಸಿವೆ.ಸಂವಿಧಾನಕ್ಕೆ 75 ವರ್ಷ ತುಂಬಿರುವ ಈ ಸಮಯದಲ್ಲಿ ಹೊಸ ಕಾನೂನುಗಳು ಜಾರಿಯಾಗಿವೆ. ಶಿಕ್ಷೆ ಕೊಡುವುದಕ್ಕಿಂತಲೂ ನ್ಯಾಯ ಕೊಡುವುದರ ಕಡೆಗೆ ಗಮನ ಹರಿಸುವ ಮಹತ್ತದ ಉದ್ದೇಶವು ಇದರ ಹಿಂದಿದೆ. 'ಸುರಕ್ಷಿತ ಸಮಾಜ, ಅಭಿವೃದ್ಧಿಯಾದ ಭಾರತ ಹಾಗೂ ಶಿಕ್ಷೆಯಿಂದ ನ್ಯಾಯದ ಕಡೆ' ಎಂಬ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮ ಆಯೋಜನೆಯಾಗಿದೆ.

Comments


Top Stories

bottom of page