10 ಬಾರಿ ದುಬೈಗೆ ಪ್ರಯಾಣ ಮಾಡಿದ್ದ ನಟಿ ರನ್ಯಾ ರಾವ್ ಭೇಟಿ
- Ananthamurthy m Hegde
- Mar 16
- 1 min read
ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿ ಹಾಗೂ ಡಿಜಿಪಿ ಮಲಮಗಳು ನಟಿ ರನ್ಯಾರಾವ್ ಅವರು ನಾಲ್ಕು ತಿಂಗಳ ಅವಧಿಯಲ್ಲಿ 10ಕ್ಕೂ ಹೆಚ್ಚು ಬಾರಿ ದುಬೈಗೆ ಭೇಟಿ ನೀಡಿದ್ದರು ಎನ್ನಲಾದ ಮಾಹಿತಿ ಬಹಿರಂಗವಾಗಿದೆ. ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡುವ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ಅವರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು.

ಬಳಿಕ ಅವರ ವಿದೇಶಿ ಪಯಣದ ದಾಖಲೆಗಳನ್ನು ಪರಿಶೀಲಿಸಿದಾಗ ನವೆಂಬರ್‌ನಿಂದ ಮಾರ್ಚ್‌ವರೆಗೆ 10ಕ್ಕೂ ಹೆಚ್ಚು ಬಾರಿ ದುಬೈಗೆ ಭೇಟಿ ನೀಡಿದ್ದ ಸಂಗತಿ ಗೊತ್ತಾಗಿದೆ ಎಂದು ತಿಳಿದು ಬಂದಿದೆ. ಈ ನಿರಂತರ ಭೇಟಿ ಹಿನ್ನೆಲೆಯಲ್ಲಿ ಚಿನ್ನ ಕಳ್ಳ ಸಾಗಣೆಯಲ್ಲಿ ರನ್ಯಾ ಸಕ್ರಿಯವಾಗಿರುವ ಬಗ್ಗೆ ಅನುಮಾನ ಸಹ ವ್ಯಕ್ತವಾಗಿದೆ. ಇನ್ನು ಮಾ.2 ರಂದು ದುಬೈಗೆ ಹೋಗಿದ್ದ ಅವರು ಮರುದಿನವೇ ಬೆಂಗಳೂರಿಗೆ ಮರಳಿದ್ದಾರೆ. ಆಗಲೇ ಕೆಐಎನಲ್ಲಿ ಡಿಆರ್‌ಐ ಬಲೆಗೆ ರನ್ಯಾ ಬಿದ್ದಿದ್ದರು ಎಂದು ಮೂಲಗಳು ಹೇಳಿವೆ.
ಚಿನ್ನ ಸಾಗಿಸಿದ್ದ ರನ್ಯಾ ರಾವ್: ನಟಿ ರನ್ಯಾರಾವ್ ಅವರು ಕಳೆದ ವರ್ಷ ಸ್ವಿಟ್ಜರ್‌ಲ್ಯಾಂಡ್ ಗೆ ಹೋಗುವುದಾಗಿ ಹೇಳಿ ದುಬೈನಿಂದ ಬೆಂಗಳೂರಿಗೆ ಕೆಜಿಗಟ್ಟಲೇ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರು ಎಂಬ ಸಂಗತಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದುಬೈನಲ್ಲಿ 2024ರ ಡಿಸೆಂಬರ್ 13 ಹಾಗೂ 20 ರಂದು ಪ್ರತ್ಯೇಕವಾಗಿ ಎರಡು ಬಾರಿ ಕೋಟ್ಯಂತರ ರು. ಮೌಲ್ಯದ ಚಿನ್ನವನ್ನು ರನ್ಯಾ ಖರೀದಿಸಿದ್ದರು. ಬಳಿಕ, ಆ ಚಿನ್ನವನ್ನು ಸಾಗಿಸುವಾಗ ಅಲ್ಲಿನ ವಿಮಾನ ನಿಲ್ದಾಣದಲ್ಲಿ ತಾವು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾಕ್ಕೆ ಹೋಗುವುದಾಗಿ ಸುಳ್ಳು ಹೇಳಿಕೆ ಕೊಟ್ಟಿದ್ದರು.
ಆದರೆ ಅಲ್ಲಿಗೆ ಹೋಗದೆ ಅವರು ಬೆಂಗಳೂರಿನ ವಿಮಾನ ಹತ್ತಿದ್ದರು. ಹೀಗಾಗಿ ದುಬೈ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳನ್ನು ಆಕೆ ಕಣ್ತಪ್ಪಿಸಿದ್ದಾರೆ ಎಂದು ಡಿಆರ್‌ಐ ಹೇಳಿದೆ.ರನ್ಯಾ ಅವರು ನಿರಂತರವಾಗಿ ವಿದೇಶಕ್ಕೆ ತೆರಳುತ್ತಿದ್ದರು. ಕಳೆದ ವರ್ಷ ಆರು ತಿಂಗಳು ಬಹುತೇಕ ವಿದೇಶ ಪ್ರಯಾಣದಲ್ಲೇ ಕಾಲ ಕಳೆದಿದ್ದರು. ಈ ವೇಳೆ ದುಬೈನಲ್ಲಿ ಎರಡು ಬಾರಿ ಚಿನ್ನ ಖರೀದಿಸಿ ಅಲ್ಲಿನ ಅಧಿಕಾರಿಗಳ ಮುಂದೆ ತೆರಿಗೆ ಘೋಷಿಸಿದ್ದರು. ನಂತರ ಕಳ್ಳ ಮಾರ್ಗದಲ್ಲಿ ಬೆಂಗಳೂರಿಗೆ ಚಿನ್ನ ತಂದಿದ್ದರು. ಈಗಲೂ ಸಹ ಅದೇ ರೀತಿ ದುಬೈನಲ್ಲಿ ಅಧಿಕಾರಿಗಳಿಗೆ ಸುಳ್ಳು ಹೇಳಿ ಮತ್ತೆ ಬೆಂಗಳೂರಿಗೆ 14 ಕೆಜಿ ಚಿನ್ನ ಸಾಗಿಸಿರುವ ಬಗ್ಗೆ ಶಂಕೆ ಇದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಡಿಆರ್‌ಐ ತಿಳಿಸಿದೆ.
Comments