top of page

ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 29 ವರ್ಷ

  • Writer: Ananthamurthy m Hegde
    Ananthamurthy m Hegde
  • Feb 2
  • 1 min read

ನಟ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು ಬರೋಬ್ಬರಿ 29 ವರ್ಷಗಳನ್ನು ಪೂರೈಸಿದ್ದು, ಇಂದಿಗೂ ಬೇಡಿಕೆ ಇರುವ ನಟನಾಗಿ ಹೊರಹೊಮ್ಮಿದ್ದಾರೆ. ತಮ್ಮ ಸಿನಿ ಜರ್ನಿಯಲ್ಲಿ ತಮ್ಮನ್ನು ಬೆಂಬಲಿಸಿದ ನಿಷ್ಠಾವಂತ ಅಭಿಮಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.

ಕ್ರಿಯಾತ್ಮಕ ಪಾತ್ರಗಳಿಗೆ ಹೆಸರುವಾಸಿಯಾದ ಸುದೀಪ್, 'ಸ್ಪರ್ಶ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಬಳಿಕ 'ಹುಚ್ಚ' ಚಿತ್ರದಲ್ಲಿನ ಅದ್ಭುತ ಅಭಿನಯದ ಮೂಲಕ ಮನೆಮಾತಾದರು. ಇಷ್ಟು ವರ್ಷಗಳಲ್ಲಿ ಅವರು 47ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ 'ಮ್ಯಾಕ್ಸ್' ಚಿತ್ರವು ಈಗಾಗಲೇ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ₹ 50 ಕೋಟಿ ಗಳಿಕೆ ಕಂಡಿದೆ. ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ.

ಸುದೀಪ್ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಮತ್ತು ಮಿಂಚಿದ್ದಾರೆ. ಕನ್ನಡ ಚಿತ್ರರಂಗದ ಕೆಲವೇ ಬಹುಭಾಷಾ ನಟರಲ್ಲಿ ಸುದೀಪ್ ಕೂಡ ಒಬ್ಬರಾಗಿದ್ದಾರೆ.

ತಮ್ಮ 29 ವರ್ಷಗಳ ಸಿನಿ ಪ್ರಯಾಣದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವ ಸುದೀಪ್, ತಮ್ಮ ಅಭಿಮಾನಿಗಳೊಂದಿಗೆ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

'ನನ್ನ ಅನುಭವಗಳಿಗಾಗಿ ನಾನು ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಪ್ರೇಕ್ಷಕರನ್ನು ರಂಜಿಸಲು ಮತ್ತು ಅನೇಕರಿಗೆ ಅನುರಣಿಸುವ ಕಥೆಗಳನ್ನು ಹೇಳಲು ಇದು ಒಂದು ಸುಯೋಗವಾಗಿದೆ. ನಿಮ್ಮೆಲ್ಲರಿಂದ ನನಗೆ ದೊರೆತ ಪ್ರೀತಿ ಮತ್ತು ಬೆಂಬಲವು ನಿರಂತರ ಪ್ರೇರಣೆಯಾಗಿದೆ. ನಾನು ನಿಮ್ಮಂತಹ ಅಭಿಮಾನಿಗಳನ್ನು ಹೊಂದಿರುವುದಕ್ಕೆ ನಾನು ನಿಜವಾಗಲು ಅದೃಷ್ಟವಂತನಾಗಿದ್ದೇನೆ. ನಿಮ್ಮ ಅಚಲವಾದ ಪ್ರೋತ್ಸಾಹವು ಪ್ರತಿ ಸವಾಲನ್ನು ಸಾರ್ಥಕಗೊಳಿಸಿದೆ' ಎಂದಿದ್ದಾರೆ.

ಸುದೀಪ್ ನಟನೆಯ ಜೊತೆಗೆ ರಿಯಾಲಿಟಿ ಶೋ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡದ ಹೋಸ್ಟ್ ಆಗಿ ಅವರು 11 ಸೀಸನ್‌ಗಳಲ್ಲಿ ನಿರೂಪಣೆ ಮಾಡಿದ್ದಾರೆ. ಇನ್ಮುಂದೆ ಬಿಗ್ ಬಾಸ್ ಹೋಸ್ಟ್ ಆಗಿರುವುದಿಲ್ಲ. ಇದುವೇ ನನ್ನ ಕೊನೆಯ ಸೀಸನ್ ಎಂದು ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಘೋಷಿಸಿದ್ದರು. ಸುದೀಪ್ ಕ್ರಿಕೆಟ್ ಉತ್ಸಾಹಿಯಾಗಿದ್ದು, ಅವರು ಸೆಲೆಬ್ರಿಟಿ ಕ್ರಿಕೆಟ್ ಪಂದ್ಯಾವಳಿ ಮತ್ತು ಇತರ ಲೀಗ್‌ಗಳಲ್ಲಿ ಭಾಗವಹಿಸಿದ್ದಾರೆ.

ಸುದೀಪ್ ಸದ್ಯ ಅನೂಪ್ ಭಂಡಾರಿ ನಿರ್ದೇಶನದ ಮುಂಬರುವ ಚಿತ್ರ 'ಬಿಲ್ಲಾ ರಂಗ ಬಾದ್‌ಶಾ' ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.


Kommentare


Top Stories

bottom of page