top of page

ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬ – ಅಪ್ಪು ಸಮಾಧಿ ಬಳಿ ಅಭಿಮಾನಿಗಳ ಸಂಭ್ರಮಾಚರಣೆ

  • Writer: Ananthamurthy m Hegde
    Ananthamurthy m Hegde
  • Mar 17
  • 1 min read

ಬೆಂಗಳೂರು: ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್‌ಕುಮಾರ್‌ಗೆ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಬಾರದ ಲೋಕಕ್ಕೆ ಹೋಗಿದ್ದರೂ ಅಪ್ಪು ಅಭಿಮಾನಿಗಳ ಪ್ರೀತಿ, ವಿಶ್ವಾಸ, ಹುಟ್ಟುಹಬ್ಬ ಆಚರಿಸುವ ಉತ್ಸಾಹ ಕಿಂಚಿತ್ತೂ ಕಮ್ಮಿಯಾಗಿಲ್ಲ. ಜೊತೆಗಿರದ ಜೀವವನ್ನು ಜೀವಂತವಾಗಿಸಿಕೊಂಡ ಅಭಿಮಾನಿಗಳು ರಾತ್ರಿಯಿಂದಲೇ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿ ಹುಟ್ಟುಹಬ್ಬ ಆಚರಣೆಯಲ್ಲಿ ತೊಡಗಿದ್ದಾರೆ.

ree

ಅದೆಷ್ಟು ವರ್ಷ ಕಳೆದರೂ ಸಹ ಅಪ್ಪು ಇಲ್ಲ ಎನ್ನುವುದನ್ನು ಅಭಿಮಾನಿಗಳು ಜೀರ್ಣಿಸಿಕೊಳ್ಳಲಾರರು. ಅಂದು ಕಣ್ಮುಂದಿದ್ದ ಅಪ್ಪು, ಈಗ ಕಣ್ಮುಂದಿನ ದೇವರಾಗಿದ್ದಾರೆ ಎಂಬುದು ಅಭಿಮಾನಿಗಳ ನಂಬಿಕೆಯಾಗಿದೆ. ಅದರಂತೆ ಅವರ 50ನೇ ವರ್ಷದ ಹುಟ್ಟುಹಬ್ಬವನ್ನ ಅಭಿಮಾನಿಗಳು ಭಾರೀ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅಪ್ಪು ಸಮಾಧಿ ಬಳಿ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ.

ಕಂಠೀರವ ಸ್ಟುಡಿಯೋದಲ್ಲಿ ಇಂದು (ಮಾ.17) ಬೆಳಗ್ಗೆ 9 ಗಂಟೆ ಸುಮಾರಿಗೆ ಅಭಿಮಾನಿಗಳ ಸಮ್ಮುಖದಲ್ಲೇ ಅಪ್ಪು ಕುಟುಂಬಸ್ಥರು ಪೂಜೆ ಮಾಡಲಿದ್ದಾರೆ. ಬಳಿಕ ಸಮಾಧಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಇರುತ್ತದೆ. ನಾನಾ ಊರುಗಳಿಂದ ಸಾವಿರಾರು ಅಪ್ಪು ಅಭಿಮಾನಿಗಳು ಭೇಟಿ ಕೊಡುವ ನಿರೀಕ್ಷೆ ಇದೆ. ತಡರಾತ್ರಿ 12 ಗಂಟೆಯಿಂದ ಶುರುವಾದ ಅಪ್ಪು ಹುಟ್ಟುಹಬ್ಬ ಆಚರಣೆಯನ್ನು ಇಂದು ಇಡೀ ದಿನ ಅಭಿಮಾನಿಗಳು ಹಬ್ಬದಂತೆ ಆಚರಿಸಲಿದ್ದಾರೆ.

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರ ಘೋಷಿಸಿದೆ. ಅದರಂತೆ ಸ್ಫೂರ್ತಿಯ ಚಿಲುಮೆ ಅಪ್ಪು ನೆನಪಲ್ಲಿ ರಾಜ್ಯದೆಲ್ಲೆಡೆ ಅಭಿಮಾನಿಗಳು ತಮ್ಮಿಷ್ಟ ಬಂದಂತೆ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಜೊತೆಗೆ ಕಂಠೀರವ ಸ್ಟುಡಿಯೋದಲ್ಲಂತೂ ಜಾತ್ರೆಯೇ ನಡೆಯಲಿದ್ದು ಅನ್ನದಾನ, ಉಚಿತ ಆರೊಗ್ಯ ತಪಾಸಣೆ, ರಕ್ತದಾನ ಶಿಬಿರ, ವ್ಯಾಪಾರ ವಹಿವಾಟು ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿದೆ.

ಪುನೀತ್ ರಾಜ್‌ಕುಮಾರ್ ಇದ್ದಿದ್ದರೇ ಹೇಗೆಲ್ಲಾ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಬೇಕು ಎಂದು ಫ್ಯಾನ್ಸ್ ಅಂದುಕೊಂಡಿದ್ದರೋ ಅದರಂತೆಯೇ ಅದ್ದೂರಿಯಾಗಿಯೇ ಆಚರಿಸಲಾಗುತ್ತಿದೆ. ಅಪ್ಪು ಕುಟುಂಬಸ್ಥರ ಜೊತೆ ಆಪ್ತರು ನಟ-ನಟಿಯರು ನಗುಮೊಗದ ಅರಸನ ಹುಟ್ಟುಹಬ್ಬಕ್ಕೆ ಕಳೆ ತುಂಬಲಿದ್ದಾರೆ. ಜೊತೆಗಿರದ ಈ ಯುವರತ್ನನನ್ನು ಕರುನಾಡು ಎಂದೆಂದಿಂಗೂ ಜೀವಂತವಾಗಿಸಿಕೊಂಡಿದೆ.

Comments


Top Stories

bottom of page