ಮುಂದುವರಿದ ಆಸೀಸ್ ಬೌಲಿಂಗ್ ಪಾರುಪತ್ಯ : ಶತಕದ ಮೂಲಕ ಆಸರೆಯಾದ ನಿತೀಶ್ ರೆಡ್ಡಿ
- Ananthamurthy m Hegde
- Dec 28, 2024
- 1 min read

ಮೆಲ್ಬೋರ್ನ್: ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 4ನೇ ಪಂದ್ಯದ 3ನೇ ದಿನದಾಟ ಮಳೆಕಾಟದಿಂದಾಗಿ ಬೇಗನೇ ಅಂತ್ಯಗೊಂಡಿದ್ದು, ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ನಿತೀಶ್ ಕುಮಾರ್ ರೆಡ್ಡಿ ಆಸರೆಯಾಗಿದ್ದಾರೆ.
4ನೇ ಪಂದ್ಯದಲ್ಲೂ ಆಸಿಸ್ ವೇಗಿಗಳ ಬಿಗಿ ಹಿಡಿತ ಮುಂದುವರೆದಿದ್ದು, ನಾಯಕ ರೋಹಿತ್ ಶರ್ಮಾ, ರಿಷಬ್ ಪಂತ್ ಸೇರಿದಂತೆ ಭಾರತ ತಂಡದ ಘಾಟಾನುಘಟಿ ಬ್ಯಾಟರ್ ಗಳು ಹೆಚ್ಚು ಸ್ಕೋರ್ ಮಾಡದೇ ಪೆವಿಲಿಯನ್ ಸೇರಿಕೊಂಡಿದ್ದು, ಭಾರತ ತಂಡಕ್ಕೆ ತೀವ್ರ ಹಿನ್ನಡೆಯಾಗಿತ್ತು. ಆದರೆ ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ನಿತೀಶ್ ಕುಮಾರ್ ರೆಡ್ಡಿ ಶತಕ ಸಿಡಿಸಿ ಭಾರತಕ್ಕೆ ನೆರವಾದರು.
ಒಂದು ಹಂತದಲ್ಲಿ ಭಾರತ ಕೇವಲ 191ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿ ಸಿಲುಕಿತ್ತು. ಈ ಹಂತದಲ್ಲಿ ಬ್ಯಾಟಿಂಗ್ ಗೆ ಇಳಿದ ನಿತೀಶ್ ಕುಮಾರ್ ರೆಡ್ಡಿ ನಿಧಾನವಾಗಿ ಬ್ಯಾಟಿಂಗ್ ಲಯ ಕಂಡುಕೊಂಡು ಆಸಿಸ್ ಬೌಲರ್ ಗಳ ಮೇಲೆ ಸವಾರಿ ಮಾಡಿ ಭರ್ಜರಿ ಶತಕ ಸಿಡಿಸಿದರು. ಒಟ್ಟು 176 ಎಸೆತಗಳನ್ನು ಎದುರಿಸಿದ ನಿತೀಶ್ ಕುಮಾರ್ ರೆಡ್ಡಿ 1 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 105 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಇನ್ನು ಭಾರತದ ಪರ ರಿಷಬ್ ಪಂತ್ ಮತ್ತೆ ಗ್ಲಾಮರ್ ಶಾಟ್ ಗೆ ಬಲಿಯಾಗಿದ್ದು, ಈ ವೇಳೆ ಅವರು ಕೇವಲ 28ರನ್ ಮಾತ್ರ ಗಳಿಸಿದ್ದರು. ಅಂತೆಯೇ ರವೀಂದ್ರ ಜಡೇಜಾ ಕೂಡ 17ರನ್ ಗಳಿಸಿ ಔಟಾದರು. ಈ ಹಂತದಲ್ಲಿ ವಾಷಿಂಗ್ಟನ್ ಸುಂದರ್ ಕ್ರೀಸ್ ಗೆ ಬಂದು ನಿತೀಶ್ ಕುಮಾರ್ ರೆಡ್ಡಿಗೆ ಉತ್ತಮ ಸಾಥ್ ನೀಡಿದರು. ಸುಂದರ್ ಕೂಡ ಅರ್ಧಶತಕ ಸಿಡಿಸಿ ಲೈಆನ್ ಬೌಲಿಂಗ್ ನಲ್ಲಿ ಔಟಾದರು.
ಸುಂದರ್ ಬೆನ್ನಲ್ಲೇ ಜಸ್ ಪ್ರೀತ್ ಬುಮ್ರಾ ಕೂಡ ಶೂನ್ಯಕ್ಕೆ ನಿರ್ಗಮಿಸಿದರು. ಮಹಮದ್ ಸಿರಾಜ್ ಕ್ರೀಸ್ ಗೆ ಬಂದ ಕೆಲವೇ ಕ್ಷಣಗಳಲ್ಲಿ ಮೈದಾನದಲ್ಲಿ ಮೋಡ ಕವಿದು ಮಂದ ಬೆಳಕು ಉಂಟಾಯಿತು. ಈ ವೇಳೆ ಅಂಪೈರ್ ಗಳು ಆಟ ಸ್ಥಗಿತಗೊಳಿಸಿದರು. ಇದೇ ವೇಳೆ ಮಳೆ ಆರಂಭವಾದ್ದರಿಂದ ಅಂಪೈರ್ ಗಳು ದಿನದಾಟ ಅಂತ್ಯ ಮಾಡಲು ನಿರ್ಧರಿಸಿದರು.
ಹೀಗಾಗಿ ಭಾರತ ತಂಡ 9 ವಿಕೆಟ್ 358 ರನ್ ಗಳಿಸಿದ್ದಾಗ 3ನೇ ದಿನದಾಟವನ್ನು ಅಂತ್ಯಗೊಳಿಸಲಾಯಿತು. ಅಂತೆಯೇ ಭಾರತ ತಂಡ ಇನ್ನೂ 116ರನ್ ಗಳ ಹಿನ್ನಡೆಯಲ್ಲಿದ್ದು ಕೇವಲ 1 ವಿಕೆಟ್ ಮಾತ್ರ ಭಾರತದ ಬಳಿ ಇದೆ. ಆಸ್ಟ್ರೇಲಿಯಾ ಪರ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಬೋಲ್ಯಾಂಡ್ ತಲಾ 3 ವಿಕೆಟ್ ಪಡೆದಿದ್ದು, ನಾಥನ್ ಲೈಯಾನ್ 2 ವಿಕೆಟ್ ಪಡೆದಿದ್ದಾರೆ. ನಾಳೆ ಅರ್ಧಗಂಟೆ ಮುಂಚಿತವಾಗಿ 4ನೇ ದಿನದಾಟ ಆರಂಭವಾಗಲಿದೆ ಎಂದು ಅಂಪೈರ್ ಗಳು ತಿಳಿಸಿದ್ದಾರೆ.
Comments