top of page

ಟೀಮ್ ಇಂಡಿಯಾಕ್ಕೆ 2024ರಲ್ಲಿ ಕಹಿಯೇ ಹೆಚ್ಚು!

  • Writer: Ananthamurthy m Hegde
    Ananthamurthy m Hegde
  • Dec 31, 2024
  • 1 min read

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಪಾಲಿಗೆ 2024 ಮಿಶ್ರ ಫಲ ತಂದುಕೊಟ್ಟಿದೆ. ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಹೊರತಾಗಿಯೂ ಏಕದಿನ ಹಾಗೂ ಟೆಸ್ಟ್‌ನಲ್ಲಿ ಭಾರತ ತೀರಾ ಕಳಪೆ ಪ್ರದರ್ಶನ ತೋರಿದೆ.

ಈ ವರ್ಷ ಭಾರತ ತಂಡ ಒಟ್ಟು 15 ಟೆಸ್ಟ್‌ ಪಂದ್ಯಗಳನ್ನಾಡಿದ್ದು, ಈ ಪೈಕಿ 8ರಲ್ಲಿ ಗೆಲುವು ಸಾಧಿಸಿದೆ. 6ರಲ್ಲಿ ತಂಡ ಸೋತಿದ್ದರೆ, 1 ಪಂದ್ಯ ಡ್ರಾಗೊಂಡಿದೆ. ಕೇಪ್‌ಟೌನ್‌ನಲ್ಲಿ ದ.ಆಫ್ರಿಕಾ ವಿರುದ್ಧ ಗೆಲ್ಲುವ ಮೂಲಕ 2024ರಲ್ಲಿ ಶುಭಾರಂಭ ಮಾಡಿದ್ದ ಭಾರತ ಬಳಿಕ, ಇಂಗ್ಲೆಂಡ್‌ ವಿರುದ್ಧ ಹೈದರಾಬಾದ್‌ ಟೆಸ್ಟ್‌ನಲ್ಲಿ ಸೋತಿತ್ತು. ಬಳಿಕ ಇಂಗ್ಲೆಂಡ್‌ ವಿರುದ್ಧ ಸತತ 4, ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್‌ ಗೆದ್ದಿತ್ತು. ಆದರೆ ಇತ್ತೀಚೆಗಷ್ಟೇ ತವರಿನಲ್ಲೇ ನ್ಯೂಜಿಲೆಂಡ್‌ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ತಂಡ 0-3 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮುಖಭಂಗಕ್ಕೆ ಒಳಗಾಗಿತ್ತು. ಸದ್ಯ ಆಸ್ಟ್ರೇಲಿಯಾ ಸರಣಿಯಲ್ಲಿ 1ರಲ್ಲಿ ಗೆದ್ದು, 2ರಲ್ಲಿ ಸೋಲನುಭವಿಸಿದೆ.

ಒಂದು ಏಕದಿನ ಪಂದ್ಯದಲ್ಲಿಯೂ ಗೆಲುವಿಲ್ಲ

ಭಾರತ 2024ರಲ್ಲಿ ಕೇವಲ 3 ಏಕದಿನ ಪಂದ್ಯವಾಡಿದೆ. ಆದರೆ ಒಂದರಲ್ಲೂ ಗೆದ್ದಿಲ್ಲ. ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ತಂಡ 2ರಲ್ಲಿ ಸೋತಿದ್ದರೆ, ಮತ್ತೊಂದು ಪಂದ್ಯ ಟೈ ಆಗಿತ್ತು.

ಟಿ20ಯಲ್ಲಿ ತಂಡಕ್ಕೆ ಭರ್ಜರಿ ಯಶಸ್ಸು

ಭಾರತ ತಂಡ 2024ರಲ್ಲಿ ಟಿ20 ಕ್ರಿಕೆಟ್‌ನಲ್ಲಿ ಮಾತ್ರ ಭರ್ಜರಿ ಯಶಸ್ಸು ಸಾಧಿಸಿದೆ. ತಂಡ ಟಿ20 ವಿಶ್ವಕಪ್‌ ಸೇರಿದಂತೆ ಒಟ್ಟು 26 ಪಂದ್ಯಗಳನ್ನಾಡಿದ್ದು, ಈ ಪೈಕಿ 24 ಪಂದ್ಯಗಳಲ್ಲಿ ಜಯಗಳಿಸಿದೆ. ಕೇವಲ 2 ಪಂದ್ಯಗಳಲ್ಲಿ ಸೋತಿದೆ. ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ತಲಾ 1 ಪಂದ್ಯ ಸೋತಿದ್ದು ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲಿ ಟೀಂ ಇಂಡಿಯಾ ಅಭೂತಪೂರ್ವ ಗೆಲುವು ಸಾಧಿಸಿದೆ. 

ತಂಡ ಅಫ್ಘಾನಿಸ್ತಾನ, ಜಿಂಬಾಬ್ವೆ, ಶ್ರೀಲಂಕಾ, ಬಾಂಗ್ಲಾದೇಶ, ದ.ಆಫ್ರಿಕಾ ವಿರುದ್ಧ ಸರಣಿ ಗೆದ್ದಿದೆ. ತಂಡ 2024ರಲ್ಲಿ ಶೇ.92.31 ಗೆಲುವಿನ ದಾಖಲೆ ಹೊಂದಿದೆ. ಇದು ವರ್ಷದಲ್ಲಿ ಯಾವುದೇ ತಂಡದ ಗರಿಷ್ಠ. 2018ರಲ್ಲಿ ಪಾಕಿಸ್ತಾನ 19ರಲ್ಲಿ 17 ಪಂದ್ಯ ಗೆದ್ದು, ಶೇ.89.47 ಗೆಲುವಿನ ದಾಖಲೆ ಹೊಂದಿತ್ತು.

ಭಾರತ ಅನುಭವಿಸಿದ ಕಹಿಗಳು

45 ವರ್ಷದಲ್ಲೇ ಮೊದಲ ಬಾರಿ ವರ್ಷದಲ್ಲಿ ಒಂದೂ ಏಕದಿನ ಪಂದ್ಯದಲ್ಲಿ ಗೆಲುವಿಲ್ಲ.

27 ವರ್ಷಗಳ ಬಳಿಕ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋಲು

ತವರಿನಲ್ಲಿ 24 ವರ್ಷ ಬಳಿಕ ಟೆಸ್ಟ್‌ ಸರಣಿಯಲ್ಲಿ ಕ್ಲೀನ್‌ಸ್ವೀಪ್‌ ಮುಖಭಂಗ

12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್‌ ಸರಣಿ ಸೋತ ಭಾರತ.

1983ರ ಬಳಿಕ ತವರಿನಲ್ಲಿ ವರ್ಷವೊಂದರಲ್ಲಿ 4 ಟೆಸ್ಟ್‌ ಪಂದ್ಯ ಸೋಲು.

ತವರಿನ ಟೆಸ್ಟ್‌ ಇತಿಹಾಸದಲ್ಲೇ ಅತಿ ಕನಿಷ್ಠ ಮೊತ್ತ(46)ಕ್ಕೆ ಆಲೌಟಾದ ಭಾರತ.

Comments


Top Stories

bottom of page