top of page

ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನ ಮುಡಿಗೇರಿಸಿಕೊಂಡ ಭಾರತ

  • Writer: Ananthamurthy m Hegde
    Ananthamurthy m Hegde
  • Feb 2
  • 1 min read

ಕೌಲಾಲಂಪುರ: ಮಲೇಷ್ಯಾದ ಕೌಲಾಲಂಪುರದಲ್ಲಿ ಜ. 2ರಂದು ನಡೆದ 2025ರ ಅಂಡರ್ 19 ವನಿತೆಯರ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಗೆದ್ದ ಭಾರತ ತಂಡ, ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ನಲ್ಲಿ ಭಾರತದ ಅಂಡರ್-19 ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿದೆ.

ಫೈನಲ್ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವನ್ನು ಭಾರತವು ಕೇವಲ 82 ರನ್‌ಗಳಿಗೆ ಆಲೌಟ್ ಮಾಡಿತು. ನಂತರ ಬ್ಯಾಟಿಂಗ್ ಗೆ ಇಳಿದ ಭಾರತ ತಂಡ, 11.2 ಓವರ್ ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿ, ಒಟ್ಟು 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಭಾರತದ ಪರವಾಗಿ, ಆರಂಭಿಕ ಆಟಗಾರ್ತಿ ಗೊಂಗಡಿ ತ್ರಿಶಾ 44 ರನ್‌ಗಳ ಅಜೇಯ ರನ್ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಾನಿಕಾ ಚಲ್ಕೆ 26 ರನ್‌ಗಳೊಂದಿಗೆ ಕ್ರೀಸ್ ನಲ್ಲಿ ತ್ರಿಶಾರಿಗೆ ಉತ್ತಮ ಬೆಂಬಲ ನೀಡಿದರು. ಈ ಗೆಲುವಿನೊಂದಿಗೆ, ನಿಕ್ಕಿ ಪ್ರಸಾದ್ ನೇತೃತ್ವದ ಭಾರತ ತಂಡವು ಸತತ ಎರಡನೇ ಬಾರಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಂತಾಗಿದೆ.

ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಪಂದ್ಯಾವಳಿಯನ್ನು ಕಳೆದ ಬಾರಿಯೂ ಭಾರತೀಯ ವನಿತೆಯರೇ ಗೆದ್ದುಕೊಂಡಿದ್ದರು. 2023ರಲ್ಲಿ ನಡೆದಿದ್ದ ಆ ಪಂದ್ಯಾವಳಿಯ ಫೈನಲ್ ಪಂದ್ಯ ದಕ್ಷಿಣ ಆಫ್ರಿಕಾದ ಫಾಸೆಸ್ಟ್ ವ್ರೂಮ್ ಎಂಬಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಭಾರತ ತಂಡ, ಇಂಗ್ಲೆಂಡ್ ತಂಡದ ವಿರುದ್ಧ ಜಯ ಗಳಿಸಿ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಆ ಪಂದ್ಯದಲ್ಲೂ ಇಂಗ್ಲೆಂಡ್ ತಂಡವನ್ನು ಭಾರತ, ಅತ್ಯಲ್ಪ ಮೊತ್ತಕ್ಕೆ (68 ರನ್) ಆಲೌಟ್ ಮಾಡಿತ್ತು. ಆನಂತರ ಬ್ಯಾಟಿಂಗ್ ಗೆ ಇಳಿದಿದ್ದ ಭಾರತೀಯ ವನಿತೆಯರು 3 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿ ಜಯದ ನಗೆ ಬೀರಿತ್ತು.

ಕಳೆದ ವರ್ಷ ಪುರುಷರ ಅಂಡರ್ 19 ವಿಶ್ವಕಪ್ ಪಂದ್ಯಾವಳಿ ನಡೆದಿದ್ದು. ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಆ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಪ್ರಶಸ್ತಿ ವಂಚಿತವಾಗಿತ್ತು. ಆ ನಿರಾಸೆಯನ್ನೂ ಈಗ ಭಾರತೀಯ ಅಂಡರ್ 19 ವನಿತೆಯರು ಮರೆಸಿದಂತಾಗಿದೆ.

Comments


Top Stories

bottom of page