top of page

ಅಡಿಲೇಡ್ ನಲ್ಲಿ ನಿತೀಶ್ ರೆಡ್ಡಿ ಜವಾಬ್ದಾರಿಯುತ ಪ್ರದರ್ಶನ

  • Writer: Ananthamurthy m Hegde
    Ananthamurthy m Hegde
  • Dec 6, 2024
  • 2 min read

ree

ಅಡಿಲೇಡ್ ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಸಹ ಪರ್ತ್ ಪಂದ್ಯದ ರಿಪ್ಲೈ ಆಗುತ್ತಿದೆಯಾ? ಇದೀಗ ನಿತೀಶ್ ಕುಮಾರ್ ಅವರು ತೋರಿರುವ ದಿಟ್ಟ ಬ್ಯಾಟಿಂಗ್ ಪ್ರದರ್ಶನವೇ ಇದಕ್ಕೆ ಕಾರಣ. ಒಂದೆಡೆ ವಿಕೆಟ್ ಗಳು ಉರುಳುತ್ತಿದ್ದರೆ ಇನ್ನೂ 2ನೇ ಪಂದ್ಯವಾಡುತ್ತಿರುವ ಈ ಯುವಕ ಮಾತ್ರ ಆಸೀಸ್ ಬೌಲಿಂಗ್ ಲೆಕ್ಕಕ್ಕೇ ಇಲ್ಲ ಎನ್ನುವ ರೀತಿ ಬ್ಯಾಟ್ ಬೀಸಿದ ಪರಿಯೇ ಕಣ್ಣುಗಳಿಗೆ ಹಬ್ಬವಾಗಿತ್ತು.

ಪಿಂಕ್ ಟೆಸ್ಟ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ತಂಡಕ್ಕೆ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಮೊದಲ ಎಸೆತದಲ್ಲಿ ಆಘಾತ ನೀಡಿದರು. ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನ ಶತಕ ವೀರ ಯಶಸ್ವಿ ಜೈಸ್ವಾಲ್ ಅವರನ್ನು ಪಂದ್ಯದ ಮೊದಲನೇ ಎಸೆತದಲ್ಲೇ ಎಲ್ ಬಿಡಬ್ಲ್ಯೂ ಬಲೆಗೆ ಕೆಡವಿದರು.

ಜೈಸ್ವಾಲ್ ಅವರು ನಿರಂತರ ಎರಡನೇ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲೂ ಸೊನ್ನೆ ಸುತ್ತಿದ ಕುಖ್ಯಾತಿಗೆ ಒಳಗಾದರು. ಎರಡೂ ಪಂದ್ಯಗಳಲ್ಲೂ ಅವರನ್ನು 0 ರನ್ನಿಗೆ ಔಟ್ ಮಾಡಿದ್ದು ಸ್ಟಾರ್ಕ್ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಅಲ್ಲಿಂದ ಬಳಿಕ ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅವರು ಭಾರತ ಇನ್ನಿಂಗ್ಸ್ ಗೆ ಜೀವಕಳೆ ತಂದರು. 2ನೇ ವಿಕೆಟ್ ಗೆ ಅವರಿಂದ 69 ರನ್ ಗಳ ಜೊತೆಯಾಟ ಬಂದಾಗ ಭಾರತ ಮತ್ತೆ ಬಹುದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿತ್ತು. ಆದರೆ ಕೆಎಲ್ ರಾಹುಲ್ (37) ಅವರ ವಿಕೆಟ್ ಪಡೆಯುವ ಮೂಲಕ ಸ್ಟಾರ್ಕ್ ಭಾರತಕ್ಕೆ ಮತ್ತೆ ಹೊಡೆತ ನೀಡಿದರೆ, ಬೋಲೆಂಡ್ ಅವರು ಶುಭಮನ್ ಗಿಲ್ (31) ಅವರ ವಿಕೆಟ್ ಪಡೆದರು.

ವಿರಾಟ್ ಕೊಹ್ಲಿ ಅವರ ಬಗ್ಗೆ ಭಾರೀ ಭರವಸೆ ಇತ್ತು. ಆದರೆ 7 ರನ್ ಗಳಿಸಿದ್ದ ಅವರನ್ನು ಸ್ಟಾರ್ಕ್ ಅವರು ಸ್ಮಿತ್ ಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ವಿಕೆಟ್ ಕೆಎಲ್ ರಾಹುಲ್ ಅವರ ಪತನದ ರಿಪ್ಲೇ ರೀತಿ ಇತ್ತು. ರೋಹಿತ್ ಶರ್ಮಾ ಅವರು ಸಹ 3 ರನ್ ಗಳಿಸಿ ಬೋಲೆಂಡ್ ಗೆ ವಿಕೆಟ್ ಒಪ್ಪಿಸಿದರು.

ಇದೀಗ ಸಂಪೂರ್ಣ ಜವಾಬ್ದಾರಿ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಮೇಲೆ ಬಿತ್ತು. ಉತ್ತಮ ವಾಗಿ ಆಡುತ್ತಿದ್ದ ರಿಷಬ್ ಪಂತ್ ಅವರನ್ನು ಲಬುಶೇನ್ ಅವರಿಗೆ ಕ್ಯಾಚ್ ಕೊಡಿಸುವಲ್ಲಿ ನಾಯಕ ಕಮಿನ್ಸ್ ಯಶಸ್ವಿಯಾದರು. ಅಲ್ಲಿಗೆ ಭಾರತದ 6ನೇ ವಿಕೆಟ್ ನ ಪತನವಾಯಿತು.

ಅನುಭವೀ ರವಿಚಂದ್ರನ್ ಅಶ್ವಿನ್ ಅವರು ಸಹ ನಿರಂತರವಾಗಿ ರನ್ ಗಳಿಸುತ್ತಿದ್ದುದರಿಂದ ಭಾರತವೂ 150 ರನ ದಾಟುವ ಲಕ್ಷಣ ತೋರಿಸಿತ್ತು. ಆದರೆ ಅಶ್ವಿನ್ ಅವರನ್ನು ಸ್ಟಾರ್ಕ್ ಅವರು ಎಲ್ ಬಿ ಡಬ್ಲ್ಯೂ ಬಲೆಗೆ ಕೆಡವಿದ್ದರಿಂದ ಟೀಂ ಇಂಡಿಯಾ ಮತ್ತೆ ಸಂಕಷ್ಟಕ್ಕೆ ಬಿತ್ತು.

ಈ ಹಂತದಲ್ಲಿ ಅನಿವಾರ್ಯವಾಗಿ ನಿತೀಶ್ ರೆಡ್ಡಿ ಅವರು ಭಾರತದ ಇನ್ನಿಂಗ್ಸ್ ಗೆ ವೇಗ ನೀಡಿದರು. 54 ಎಸೆತಗಳನ್ನು ಎದುರಿಸಿದ ಅವರು ತಲಾ 3 ಬೌಂಡರಿ, ಸಿಕ್ಸರ್ ಗಳನ್ನೊಳಗೊಂಡ 42 ರನ್ ಗಳಿಸಿ ಸ್ಟಾರ್ಕ್ ಗೆ ಔಟಾದರು. ಮಿಚೆಲ್ ಸ್ಟಾರ್ಕ್ 48 ರನ್ ಗಳಿಗೆ 6 ವಿಕೆಟ್ ಗಳಿಸುವ ಮೂಲಕ ಭಾರತದ ಸರ್ವಪತನಕ್ಕೆ ಕಾರಣರಾದರು. ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ್ ಬೋಲೆಂಡ್ ಅವರು ಸಹ ತಲಾ 2 ವಿಕೆಟ್ ಗಳಿಸಿದರು.


Comments


Top Stories

bottom of page