top of page

ಅಡಿಲೇಡ್ ನಲ್ಲಿ ಸಿರಾಜ್-ನಡುವೆ ವಾಗ್ವಾದ : ಐಸಿಸಿ ಶಿಸ್ತುಕ್ರಮಕ್ಕೆ ಒಳಗಾಗುವ ಸಾಧ್ಯತೆ

  • Writer: Ananthamurthy m Hegde
    Ananthamurthy m Hegde
  • Dec 9, 2024
  • 2 min read

ree

ಅಡಿಲೇಡ್‌ನಲ್ಲಿ ನಡೆದ ಬಾರ್ಡರ್- ಗವಾಸ್ಕರ್ ಟ್ರೋಫಿಯ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ವೇಳೆ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ನಡುವಿನ ಮಾತಿನ ಚಕಮಕಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗಂಭೀರವಾಗಿ ಪರಿಗಣಿಸಿದೆ. ಇಬ್ಬರೂ ಶಿಸ್ತುಕ್ರಮಕ್ಕೆ ಒಳಗಾಗುವ ಸಾಧ್ಯತೆ ಇದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ, ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನ 82ನೇ ಓವರ್‌ನಲ್ಲಿ ಸಿರಾಜ್ ಎಸೆದ ಅದ್ಭುತ ಯಾರ್ಕರ್‌ಗೆ ಟ್ರಾವಿಸ್ ಹೆಡ್ ಬೌಲ್ಡ್ ಆಗಿದ್ದರು. ಆದರೆ ಆಗಲೇ ಹೆಡ್ 140 ರನ್ ಚಚ್ಚಿದ್ದರು. ಹೆಡ್‌ರನ್ನು ಔಟ್ ಮಾಡಿದ್ದ ಸಿರಾಜ್, ಅವರಿಗೆ ಪೆವಿಲಿಯನ್ ದಾರಿ ತೋರಿಸುವಾಗ ಹದ್ದು ಮೀರಿ ವರ್ತಿಸಿದ್ದರು. ಅವರ ಆಕ್ರಮಣಕಾರಿ ಸ್ವಭಾವ ಚರ್ಚೆಗೆ ಗ್ರಾಸವಾಗಿತ್ತು.

ಈ ವೇಳೆ ಸಿರಾಜ್‌ಗೆ ಹೆಡ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಆದರೆ ಅವರಿಬ್ಬರ ನಡುವೆ ವಿನಿಮಯವಾದ ಮಾತುಗಳು ಏನು ಎನ್ನುವುದು ಸ್ಪಷ್ಟವಾಗಿಲ್ಲ.

ಅಡಿಲೇಡ್ ಟ್ರಾವಿಸ್ ಹೆಡ್ ತವರಾಗಿರುವುದರಿಂದ ಸಹಜವಾಗಿಯೇ ಅವರಿಗೆ ಪ್ರೇಕ್ಷಕರಿಂದ ಹೆಚ್ಚಿನ ಬೆಂಬಲ ಸಿಕ್ಕಿತ್ತು. ಸಿರಾಜ್ ಬೌಂಡರಿ ಲೈನ್ ಬಳಿ ಫೀಲ್ಡಿಂಗ್‌ಗೆ ನಿಂತಿದ್ದಾಗ ಆಸ್ಟ್ರೇಲಿಯಾ ಪ್ರೇಕ್ಷಕರು 'ಬೂ' ಎಂದು ಅವರನ್ನು ಅಣಕಿಸಿದ್ದರು.

ದಿ ಡೈಲಿ ಟೆಲಿಗ್ರಾಫ್ ವರದಿ ಪ್ರಕಾರ, ಸಿರಾಜ್ ಹಾಗೂ ಹೆಡ್ ಇಬ್ಬರೂ ಮೈದಾನದೊಳಗಿನ ಕಿತ್ತಾಟಕ್ಕಾಗಿ ಶಿಸ್ತುಕ್ರಮದ ವಿಚಾರಣೆಗೆ ಒಳಗಾಗುವ ಸಾಧ್ಯತೆ ಇದೆ. ಆದರೆ ಅವರಿಬ್ಬರೂ ಅಮಾನತಿಗೆ ಒಳಗಾಗುವ ಸಂಭವ ಕಡಿಮೆ. ಇದು ಪಂದ್ಯದ ವೇಳೆ ನಡೆಯುವ ಮಾಮೂಲಿ ಜಗಳವಾಗಿರುವುದರಿಂದ ಸಣ್ಣ ದಂಡ ವಿಧಿಸುವ ಸಾಧ್ಯತೆ ಇದೆ.

ಔಟ್ ಆಗುವುದಕ್ಕೂ ಮುನ್ನ ಸಿರಾಜ್ ಎಸೆತವನ್ನು ಹೆಡ್ ಸಿಕ್ಸರ್‌ಗೆ ಅಟ್ಟಿದ್ದರು. ತಾವು ವಿಕೆಟ್ ಒಪ್ಪಿಸಿದ ಬಳಿಕ 'ಚೆನ್ನಾಗಿ ಬೌಲ್ ಮಾಡಿದ್ದಿರಿ' ಎಂದು ಹೇಳಿದ್ದಾಗಿ ದಿನದ ಆಟದ ನಂತರ ಸುದ್ದಿಗೋಷ್ಠಿಯಲ್ಲಿ ಹೆಡ್ ಹೇಳಿದ್ದರು.

"ಇದು ಬಹುಶಃ ಸ್ವಲ್ಪ ಹೆಚ್ಚಾಯಿತು. ನಾನು ಮರಳಿ ನೀಡಿದ ಪ್ರತಿಕ್ರಿಯೆ ಬಗ್ಗೆ ಬೇಸರವಾಗಿದೆ. ಆದರೆ ಅ ಸಂದರ್ಭದಲ್ಲಿ ನಾನು ಮಾಡಿದ್ದು ಸರಿಯಿದೆ ಎಂದು ಸಮರ್ಥಿಸಿಕೊಳ್ಳುತ್ತೇನೆ. ನಾನು ಹೇಳಿದ್ದನ್ನು ಸಿರಾಜ್ ತಪ್ಪಾಗಿ ಅರ್ಥೈಸಿಕೊಂಡರು" ಎಂದು ತಿಳಿಸಿದ್ದರು.

ಆದರೆ ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸಿರಾಜ್, ಹೆಡ್‌ ಹೇಳಿಕೆಯನ್ನು ನಿರಾಕರಿಸಿದ್ದರು. 'ಚೆನ್ನಾಗಿ ಬೌಲ್ ಮಾಡಿದ್ದಿ' ಎಂಬುದಾಗಿ ಹೆಡ್ ಹೇಳಲೇ ಇಲ್ಲ ಎಂದಿದ್ದರು.

"ಒಳ್ಳೆಯ ಎಸೆತವನ್ನು ಸಿಕ್ಸರ್‌ಗೆ ಬಾರಿಸಿದಾಗ, ಅದು ನಿಮ್ಮಲ್ಲಿ ವಿಭಿನ್ನವಾಗಿ ಕಿಚ್ಚು ಹೊತ್ತಿಸುತ್ತದೆ. ನಾನು ಅವರನ್ನು ಬೌಲ್ಡ್ ಮಾಡಿದಾಗ ನಾನು ಸಂಭ್ರಮಿಸಿದ್ದೆ ಅಷ್ಟೆ. ಆಗ ಅವರು ನನ್ನನ್ನು ನಿಂದಿಸಿದರು. ಅದನ್ನು ನೀವೂ ಟಿವಿಯಲ್ಲಿ ನೋಡಿರುತ್ತೀರಿ" ಎಂದು ಸಿರಾಜ್ ಪ್ರತಿಕ್ರಿಯೆ ನೀಡಿದ್ದರು.

"ನಾನು ಮೊದಲು ಸಂಭ್ರಮಾಚರಣೆಯನ್ನಷ್ಟೇ ಮಾಡಿದ್ದೆ. ನಾನು ಅವರಿಗೆ ಏನನ್ನೂ ಹೇಳಿರಲಿಲ್ಲ. ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಸರಿಯಾಗಿಲ್ಲ. 'ವೆಲ್ ಬೌಲ್ಡ್' ಎಂದು ಮಾತ್ರ ಹೇಳಿದ್ದೆ ಎನ್ನುವುದು ಸುಳ್ಳು. ಅವರು ನನಗೆ ಹೇಳಿದ್ದು ಅದನ್ನಲ್ಲ ಎನ್ನುವುದು ಎಲ್ಲರಿಗೂ ಕಾಣುವಂತಿದೆ. ನಾವು ಎಲ್ಲರನ್ನೂ ಗೌರವಿಸುತ್ತೇವೆ; ಇತರೆ ಆಟಗಾರರನ್ನು ಅಗೌರವಿಸುತ್ತೇವೆ ಎಂದಲ್ಲ. ನಾನು ಪ್ರತಿಯೊಬ್ಬರನ್ನೂ ಗೌರವಿಸುತ್ತೇನೆ, ಏಕೆಂದರೆ ಕ್ರಿಕೆಟ್ ಜೆಂಟಲ್‌ಮನ್‌ಗಳ ಆಟ" ಎಂದಿದ್ದರು.

ಮೂರನೇ ದಿನ ಸಿರಾಜ್ ಬ್ಯಾಟಿಂಗ್‌ಗೆ ಬಂದಾಗ, ಹೆಡ್ ಮತ್ತು ಅವರ ನಡುವೆ ಸ್ವಲ್ಪ ಹೊತ್ತು ಮಾತುಕತೆ ನಡೆದಿತ್ತು. ಅವರಿಬ್ಬರೂ ವಿವಾದ ಇತ್ಯರ್ಥಪಡಿಸಿಕೊಂಡರು ಎನ್ನಲಾಗಿದೆ. ಪಂದ್ಯ ಮುಗಿದ ಬಳಿಕ ಇಬ್ಬರೂ ಪರಸ್ಪರ ಆಲಂಗಿಸಿಕೊಂಡ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments


Top Stories

bottom of page