ಅಡಕೆಗೆ ಎದುರಾದ ತೇವಾಂಶ ಮಿತಿ ಸಮಸ್ಯೆ : ಮಿತಿ ಹೆಚ್ಚಳಕ್ಕೆ ಒತ್ತಾಯ
- Ananthamurthy m Hegde
- Dec 20, 2024
- 1 min read

ಶಿರಸಿ: ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ನಿಗದಿಪಡಿಸಿದ್ದ ಅಡಕೆಯ ತೇವಾಂಶ ಮಿತಿಯೂ ಅಡಕೆ ವ್ಯವಹಾರ ವಲಯದಲ್ಲಿ ಸದ್ದಿಲ್ಲದೇ ರಗಳೆ ತಂದಿಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಈ ಮಾನದಂಡ ಪ್ರಭಾವಿಯಾಗಿ ಮುನ್ನೆಲೆಗೆ ಬರುತ್ತಿದ್ದು ಈ ಪ್ರಮಾಣ ಹೆಚ್ಚಳಕ್ಕೆ ಒತ್ತಾಯ ಕೇಳಿಬರುತ್ತಿದೆ.
ಅಡಕೆಯ ತೇವಾಂಶ ಪ್ರಮಾಣ ಶೇ.7ರಷ್ಟು ಮಾತ್ರ ಇರಬೇಕು ಎಂಬುದು ಎಫ್‌ಎಸ್‌ಎಸ್‌ಎಐನ ಮಾನದಂಡ. ಆದರೆ ಅಡಕೆ ಈ ತೇವಾಂಶದ ಪ್ರಮಾಣ ಶೇ.11ಕ್ಕಿಂತ ಕಡಿಮೆ ಇಳಿಸಲು ಸಾಧ್ಯವಿಲ್ಲ. ಹೀಗಿರುವಾಗ ಈ ಹಿಂದೆಯೇ ಕಡ್ಡಾಯಗೊಳಿಸಿರುವ ಶೇ.7ರ ಮಾನದಂಡ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡವರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಈ ಮಾನದಂಡ ಅಡಕೆಯನ್ನು ಅಡಕತ್ತರಿಯಲ್ಲಿ ಸಿಲುಕಿಸುವಂತೆ ಮಾಡುತ್ತಿದೆ.
ಅಡಕೆಗೆ ಶಾಪವೋ ವರವೋ ಗೊತ್ತಿಲ್ಲ. ಏನಾದರೂ ಒಂದು ರೀತಿಯಲ್ಲಿ ಸಮಸ್ಯೆ ಎದುರಾಗುತ್ತಲೇ ಇರುತ್ತವೆ. ಅಡಕೆ ತೇವಾಂಶ ನಿಗದಿ ಅದೆಷ್ಟೋ ವರ್ಷಗಳ ಹಿಂದೆಯೇ ಮಾಡಿರುವ ಮಾನದಂಡ. ಆದರೆ ಈ ನಿಯಮ ಕೆಲ ವರ್ಷಗಳಿಂದ ತನ್ನ ಇರುವಿಕೆ ತೋರಿಸುತ್ತಿದೆ. ಆದರೆ ಈ ಪ್ರಮಾಣದಲ್ಲಿಅಡಕೆ ಒಣಗಿಸುವುದು ಕಷ್ಟದ ಕೆಲಸ.
ವಿದೇಶಿ, ಕಳಪೆ ಗುಣಮಟ್ಟದ ಅಡಕೆ ಮಿಶ್ರಣ, ಅಡಕೆ ರೆಡ್‌ಆಕ್ಸೆತ್ರೖಡ್ ಸೇರ್ಪಡೆ, ಬಿಸಿಲಿಗೆ ಸರಿಯಾಗಿ ಒಣಗಿಸಿದೇ ಹಸಿಹಸಿಯಾಗಿಯೇ ಮಾರಾಟ ಇವೆಲ್ಲಅಡಕೆ ಗುಣಮಟ್ಟಕ್ಕೆ ಹೊಡೆತ ನೀಡುತ್ತಿವೆ. ಇವೆಲ್ಲ ನಿಯಮ ಬಿಗಿಯಾಗುವುದಕ್ಕೆ ಕಾರಣ ಎನ್ನಲಾಗುತ್ತಿದೆ.
ಹಣ್ಣಡಿಕೆ ಎರಡು ತಿಂಗಳು ಒಣಗಿಸಿ ಚಾಲಿ ಅಡಕೆ ತಯಾರಿಸಲಾಗುತ್ತದೆ. ಇನ್ನು ಹಸಿ ಅಡಕೆ ಸುಲಿದು ಅದನ್ನು ಬೇಯಿಸಿ 8 ರಿಂದ 10 ದಿನ ಬಿಸಿಲಿಗೆ ಒಣಗಿಸಲಾಗುತ್ತದೆ. ಇದು ಪಾರಂಪರಿಕವಾಗಿ ನಡೆದು ಬಂದ ಪದ್ಧತಿ. ಹೀಗೆ ಒಣಗಿಸಿ ದಾಸ್ತಾನಿಟ್ಟ ಅಡಕೆ ವಾತಾವರಣದಲ್ಲಿನ ತೇವಾಂಶ ಎಳೆದುಕೊಳ್ಳುತ್ತದೆ. ಅದರಲ್ಲೂಮಳೆಗಾಲದಲ್ಲಿಕ್ವಿಂಟಲ್ ಕೆಂಪಡಿಕೆ ಒಂದೆರಡು ಕೆಜಿ ಹೆಚ್ಚುತ್ತದೆ. ಚಳಿಗಾಲದಲ್ಲಿ ಕಡಿಮೆಯಾಗುತ್ತದೆ. ಹೀಗಾಗಿ ಎಷ್ಟೇ ಗುಣಮಟ್ಟದಿಂದ ಸಂಸ್ಕರಿಸಿದರೂ ವಾತಾವರಣದಲ್ಲಿನ ತೇವಾಂಶ ಎಳೆದುಕೊಳ್ಳುತ್ತದೆ.
ಕೆಲ ಪಾನ್ ಮಸಾಲಾ ಕಂಪನಿಗಳು ಅಡಕೆ ಗುಣಮಟ್ಟ ಪರೀಕ್ಷೆಗೆ ತಮ್ಮ ಕಂಪನಿಗಳಲ್ಲಿಯೇ ವ್ಯವಸ್ಥೆ ಕಲ್ಪಿಸಿಕೊಂಡಿವೆ. ಅವು ಶೇ.7ಕ್ಕಿಂತ ತೇವಾಂಶ ಇರುವ ಅಡಕೆ ತಿರಸ್ಕರಿಸುತ್ತಿವೆ. ಇದಕ್ಕೆ ಅವು ಮುಂದಿಡುವುದು ಎಫ್‌ಎಸ್‌ಎಸ್‌ಐಎನ ಮಾನದಂಡ. ಹೀಗಾಗಿ ಲೋಡ್‌ಗಟ್ಟಲೆ ಮಹಸೂಲು ಮತ್ತೆ ವಾಪಸ್ ಬರುತ್ತಿವೆ.
ಅಡಕೆ ವಹಿವಾಟು ಸಂಸ್ಥೆ ಕ್ಯಾಂಪ್ಕೋ ಕಳೆದ ಎರಡು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ತೇಧಿವಾಂಶ ಮಾನದಂಡ ಹೆಚ್ಚಳಕ್ಕೆ ಕೇಂದ್ರ ಸರಕಾರ ಹಂತದಲ್ಲಿಒತ್ತಡ ತರುತ್ತಲೇ ಇದೆ. ಇದೀಗ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಎಫ್‌ಎಸ್‌ಎಸ್‌ಐನ ಸಿಇಓ ಕಮಲ್ ವರ್ಧನ್ ಅವರನ್ನು ಭೇಟಿಯಾಗಿ ತೇವಾಂಶದ ಪ್ರಮಾಣ ಶೇ.7ರ ಬದಲು ಶೇ.11ಕ್ಕೆ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದಾರೆ.
ಅಡಕೆ ತೇವಾಂಶದ ಬಗ್ಗೆ ಸಿಪಿಸಿಆರ್‌ಐನಿಂದ ಸಂಶೋಧನೆ ನಡೆಸಿ ಶೇ.11ಕ್ಕಿಂತ ತೇವಾಂಶ ಇಳಿಸಲು ಸಾಧ್ಯವಿಲ್ಲಎಂಬುದನ್ನು ತಿಳಿಸಿದೆ. ಇದು ಎಫ್‌ಎಸ್‌ಎಸ್‌ಐನ ನಿಯಮದಲ್ಲಿಅನ್ವಯವಾಗಬೇಕು. ಈ ಬಗ್ಗೆ ಸಹಕಾರ ಸಂಘಸಂಸ್ಥೆಗಳು, ಜನಪ್ರತಿನಿಧಿಗಳು ಇಟ್ಟಿರುವ ಬೇಡಿಕೆಗೆ ಸ್ಪಂದನೆ ಸಿಗಬೇಕು ಎಂದು ಡಾ.ಕೇಶವ ಕೊರ್ಸೆ, ಸಂರಕ್ಷಣಾ ಜೀವಶಾಸ್ತ್ರಜ್ಞ ಹೇಳಿದ್ದಾರೆ.












Comments