top of page

ಅನಂತಮೂರ್ತಿ ಹೆಗಡೆ ಹೋರಾಟಕ್ಕೆ ಸಂದ ಜಯ

  • Writer: Ananthamurthy m Hegde
    Ananthamurthy m Hegde
  • Jan 7
  • 2 min read

ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವಂತೆ ಆಗ್ರಹಿಸಿ ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಟ್ರಸ್ಟ್ ಇಂದ ಕೈಗೊಂಡ ಏಳು ದಿನಗಳ ಪಾದಯಾತ್ರೆಯ ಪರಿಣಾಮ, ಬರೊಬ್ಬರಿ ಒಂದು ವರ್ಷದ ನಂತರ ಸರ್ಕಾರ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಗೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಸೂಚನೆ ನೀಡಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಒಂದೂ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇಲ್ಲದ ಕಾರಣ, ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗಬೇಕೆಂಬುದು ಬಹುದಿನದ ಬೇಡಿಕೆಯಾಗಿತ್ತು. ಅದರಂತೆ ಬಿಜೆಪಿ ಸರ್ಕಾರದಲ್ಲಿ ಕುಮಟಾದಲ್ಲಿ ಸ್ಥಳವನ್ನು ಗುರುತಿಸಿ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ನಂತರ ಬದಲಾದ ಸರ್ಕಾರ ಜಿಲ್ಲೆಯ ಜನರ ಬಹುದಿನದ ಬೇಡಿಕೆಯನ್ನು ಮೂಲೆಗೆ ತಳ್ಳಿತ್ತು. ಇದನ್ನು ಅರಿತ ಅನಂತಮೂರ್ತಿ ಹೆಗಡೆ ಚ್ಯಾರಿಟೆಬಲ್ ಟ್ರಸ್ಟ್‌ ನ ಮುಖ್ಯಸ್ಥರಾದ ಅನಂತಮೂರ್ತಿ ಹೆಗಡೆ ಮತ್ತೆ ಹೋರಾಟವನ್ನು ಕೈಗೆತ್ತಿಕೊಂಡರು. ಅದರ ಭಾಗವಾಗಿ 2023 ನವೆಂಬರ್‌ನಲ್ಲಿ ಶಿರಸಿಯಿಂದ ಕಾರವಾರದವರೆಗೆ, ಜಿಲ್ಲೆಯ ಜನರ ಸಹಕಾರದೊಂದಿಗೆ ಏಳು ದಿನಗಳ ಕಾಲ 140 ಕಿ.ಮೀ ಗಳ ಪಾದಯಾತ್ರೆ ಮಾಡಿ, ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲೊಂದು ಮತ್ತು ಘಟ್ಟದ ಕೆಳಗೊಂದು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಈ ಕೂಡಲೇ ಮಂಜೂರು ಮಾಡಬೇಕು ಆಗ್ರಹಿಸಿದ್ದರು. ಕೇವಲ ಆಸ್ಪತ್ರೆ ನಿರ್ಮಿಸಿದಲ್ಲಿ ವೈದ್ಯರ ಸೇವೆ ಒದಗಿಸುವುದು ಕಷ್ಟಕರವಾಗುತ್ತದೆ. ಅಲ್ಲದೆ ಈಗಿರುವ ತಾಲ್ಲೂಕು ಆಸ್ಪತ್ರೆಗಳಲ್ಲೂ ವೈದ್ಯರ ಕೊರತೆ ಇರುತ್ತದೆ. ಆದ್ದರಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜೊತೆ ಜೊತೆಗೆ ಮೆಡಿಕಲ್ ಕಾಲೇಜು ನಿರ್ಮಿಸುವುದರಿಂದ ವೈದ್ಯಕೊರತೆ ನೀಗಿಸಬಹುದಾಗಿರುತ್ತದೆ. ಅದಕ್ಕೆ ಮಲ್ಟಿ ಆಸ್ಪತ್ರೆ ಜೊತೆಗೆ ಮೆಡಿಕಲ್ ಕಾಲೇಜನ್ನು ನಿರ್ಮಿಸಬೇಕು. ಘಟ್ಟದ ಮೇಲೆ ಶಿರಸಿಯಲ್ಲಿ ಮತ್ತು ಘಟ್ಟದ ಕೆಳಗೆ ಕುಮಟಾ ಭಾಗದಲ್ಲಿ ಆಸ್ಪತ್ರೆ ನಿರ್ಮಿಸಬೇಕು. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಮನವಿ ಸಲ್ಲಿಸಿದ್ದರು. ಅಲ್ಲದೆ ಈಗಾಗಲೇ ಕಾರವಾರದಲ್ಲಿರುವ ಮೆಡಿಕಲ್ ಕಾಲೇಜನ್ನು ಸೂಕ್ತ ಸ್ಥಳದಲ್ಲಿ ನಿರ್ಮಿಸದೆ ಇರುವುದರಿಂದ ಜಿಲ್ಲೆಯ ಜನರಿಗೆ ಪ್ರಯೋಜನ ಇಲ್ಲದಂತಾಗಿ ಜನತೆ ಗೋಳುಪಡುವಂತಾಗಿದೆ ಎಂದು ಸಹ ಸರ್ಕಾರಕ್ಕೆ ತಿಳಿಸಿದ್ದರು.

ಹೋರಾಟವನ್ನು ಕೈ ಬಿಡದೆ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕೆಂಬ ಕೂಗನ್ನು ಜೀವಂತವಾಗಿರಿಸಿದ್ದರ ಪರಿಣಾಮ ಸರ್ಕಾರ ಬರೊಬ್ಬರಿ ಒಂದು ವರ್ಷದ ನಂತರ ಎಚ್ಚೆತ್ತುಕೊಂಡಂತೆ ಕಂಡುಬಂದಿದ್ದು ಆಶಾದಾಯಕ ಬೆಳವಣಿಗೆಯೊಂದು ನಡೆದಿದೆ. ಹೋರಾಟದ ಮನವಿಯನ್ನಾಧರಿಸಿ ವೈದ್ಯಕೀಯ ಶಿಕ್ಷಣ ಸಚಿವರ ಸೂಚನೆಯಂತೆ, ವೈದ್ಯಕೀಯ ಶಿಕ್ಷಣ ಇಲಾಖೆ ಸರ್ಕಾರದ ಮುಖ್ಯಕಾರ್ಯದರ್ಶಿ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕರಿಗೆ ಸೂಚಿಸಿದ್ದು, ಅದರಂತೆ ಅವರು ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.ಅರ್ಜಿದಾರರ ಮನವಿಯನ್ನು ಪರಿಶೀಲಿಸಲಾಗಿ, ಮೆಡಿಕಲ್ ಕಾಲೇಜು ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೇಕಾದ ಸೂಕ್ತ ಕ್ರಮವನ್ನು ಕೈಗೊಂಡು ಮತ್ತು ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ ನೀಡಿ ಅದರ ಒಂದು ಪ್ರತಿಯನ್ನು 15 ದಿನಗಳೊಳಗೆ ನಿರ್ದೇಶನಾಲಯಕ್ಕೆ ಸಲ್ಲಿಸಲು ಸೂಚಿಸಿದೆ.

ಇನ್ನೂ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾದಯಾತ್ರೆಯ ರೂವಾರಿ, ಅನಂತಮೂರ್ತಿ ಹೆಗಡೆ, ಹೋರಾಟ ಸರ್ಕಾರದ ಗಮನ ಸಳೆಯಲು ಯಶಸ್ವಿಯಾಗಿದ್ದು, ಒಂದು ವರ್ಷದ ಹಿಂದೆ ನಡೆಸಿದ ಹೋರಾಟಕ್ಕೆ ಸರ್ಕಾರ ಈಗಲಾದರೂ ಗಮನ ಹರಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಬಂದ ನಂತರ ಮುಂದಿನ ನಿರ್ಧಾರಗಳು ಏನು ಎಂಬುದನ್ನು ತಿಳಿಸುತ್ತೇವೆ. ಒಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣದ ಕುರಿತಾಗಿ ಬೆಳವಣಿಗೆ ಆಗುತ್ತಿರುವುದು ಒಳ್ಳೆಯದು, ಸಂಪೂರ್ಣ ಫಲ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಖೋಟ್:

ಜಿಲ್ಲೆಗೆ ಮೆಡಿಕಲ್ ಕಾಲೇಜು ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತಾಗಿ ಸೂಕ್ತಕ್ರಮಕ್ಕೆ ಸೂಚಿಸಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಪತ್ರ ಬರೆದಿರುವ ಬಗ್ಗೆ ನನಗೂ ಮಾಹಿತಿ ನೀಡಿದ್ದಾರೆ. ಹಿಂದೆ ಸರಿಯದೆ ನಿರಂತರ ಹೋರಾಟ ಮಾಡಿದಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ ಎಂಬುದು ಇದರಿಂದ ಅರ್ಥವಾಗಿದೆ. ಅದಕ್ಕೆ ಹೋರಾಟ ಕೈಬಿಡುವ ಪ್ರಶ್ನೆ ಇಲ್ಲ. ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗುವವರೆಗೂ ಹೋರಾಟ ನಿರಂತರ ನಡೆಯಲಿದೆ.

ಅನಂತಮೂರ್ತಿ ಹೆಗಡೆ, ಸಾಮಾಜಿಕ ಹೋರಾಟಗಾರ

Comments


Top Stories

bottom of page