ಅರ್ಚನಾ ಅಜಿತ್ ಹೆಗಡೆಗೆ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ
- Ananthamurthy m Hegde
- Jun 26
- 1 min read

ಯಲ್ಲಾಪುರ: ತಾಲೂಕಿನ ದೇಹಳ್ಳಿಯ ಮೆಣಸುಮನೆ ಮೂಲದ ಬಹುಮುಖ ಪ್ರತಿಭೆ ಅರ್ಚನಾ ಅಜಿತ್ ಹೆಗಡೆ ಅವರಿಗೆ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ ಲಭಿಸಿದೆ.
ಧಾರವಾಡದ ನಾಟ್ಯಸ್ಫೂರ್ತಿ ಆರ್ಟ್ಸ್ ಮತ್ತು ಕಲ್ಚರಲ್ ಅಕಾಡೆಮಿಯಿಂದ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಅರ್ಚನಾ ಅವರಿಗೆ ಬಸವಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿ, ಗೌರವಿಸಿದರು.
ಮೆಣಸುಮನೆಯ ಚಂದ್ರಶೇಖರ ಮೆಣಸುಮನೆ ಹಾಗೂ ಜಯಲಕ್ಷ್ಮಿ ಮೆಣಸುಮನೆ ದಂಪತಿಯ ಪುತ್ರಿಯಾಗಿರುವ ಅರ್ಚನಾ ಪ್ರಸ್ತುತ ಜೊಯಿಡಾ ತಾಲೂಕಿನ ನಂದಿಗದ್ದೆಯ ನಿವಾಸಿ. ಗೃಹಿಣಿಯಾಗಿ ಮನೆಯ ಜವಾಬ್ದಾರಿಯನ್ನೂ ನಿರ್ವಹಿಸುವ ಜತೆಗೆ, ಹವ್ಯಾಸಿಯಾಗಿ ಕಲೆಯಲ್ಲೂ ಅಷ್ಟೇ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾರೆ. ಅತ್ಯುತ್ತಮ ಚಿತ್ರಕಲಾ ಕಲಾವಿದರಾಗಿ, ಹವ್ಯಾಸಿ ಯಕ್ಷಗಾನ, ತಾಳಮದ್ದಲೆ ಕಲಾವಿದರಾಗಿ, ನಾಟಕಗಳಲ್ಲೂ ಅಭಿನಯಿಸುವ ಬಹುಮುಖ ಪ್ರತಿಭೆ ಇವರದು.
ಬಿಸಗೋಡ ಪ್ರೌಢಶಾಲೆಯಲ್ಲಿ ಕಲಿಯುವಾಗ ಅಲ್ಲಿನ ಚಿತ್ರಕಲಾ ಶಿಕ್ಷಕ ಸತೀಶ ಯಲ್ಲಾಪುರ ಅವರ ಮಾರ್ಗದರ್ಶನದಂತೆ ಚಿತ್ರಕಲೆಯಲ್ಲೇ ಮುಂದುವರಿದರು. ಧಾರವಾಡ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪದವಿ ಓದಿದರು. ವಿಶ್ವವಿದ್ಯಾಲಯಕ್ಕೆ ಮೂರನೇ ರ಼್ಯಾಂಕ್ ಪಡೆದರು. ಅದೇ ವೇಳೆ ನೆಹರು ಆರ್ಟ್ ಗ್ಯಾಲರಿ ಲಂಡನ್, ಮುಂಬೈ, ಹೈದರಾಬಾದ್, ಗೋವಾ, ಧಾರವಾಡ, ಬೆಂಗಳೂರು ಮುಂತಾದೆಡೆ ಚಿತ್ರಕಲಾ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ.
ಮದುವೆಯ ನಂತರವೂ ಕಲಾಯಾನ ಮುಂದುವರಿಸುವುದಕ್ಕೆ ಪತಿ ಅಜಿತ್ ಹೆಗಡೆ ಹಾಗೂ ಅವರ ಕುಟುಂಬದವರ ಸಹಕಾರವನ್ನು ಸದಾ ಸ್ಮರಿಸುತ್ತಾರೆ. ಪತಿಯೇ ನಡೆಸುತ್ತಿರುವ ಅಮರ ಹೋಮ್ ಸ್ಟೇಯಲ್ಲಿ ಅರ್ಚನಾ ಅವರ ಚಿತ್ರಕಲಾ ಪ್ರದರ್ಶನವಿದೆ. ಸುತ್ತಮುತ್ತಲಿನ ಆಸಕ್ತ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿತ್ರಕಲಾ ತರಬೇತಿ ನೀಡುತ್ತಿದ್ದಾರೆ. ಸ್ಥಳೀಯವಾಗಿ ಶಾಲೆಗಳ ಗೋಡೆಯ ಮೇಲೂ ಇವರ ಕುಂಚದಿಂದ ಮೂಡಿದ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಮದುವೆಯ ನಂತರ ಯಕ್ಷಗಾನ ಕಲಿತು, ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ. ವಿಶೇಷವಾಗಿ ಹಾಸ್ಯಪಾತ್ರಗಳಲ್ಲಿ ಮನ್ನಣೆ ಗಳಿಸಿದ್ದಾರೆ.
ಅರ್ಚನಾ ಅವರ ಬಹುಮುಖ ಪತ್ರಿಭೆಯನ್ನು ಗುರುತಿಸಿ, ಬಸವಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಬಗ್ಗೆ ಸಂತಸ ಹಂಚಿಕೊಂಡಿರುವ ಅರ್ಚನಾ, ತಂದೆ ತಾಯಿಗಳ ಪ್ರೋತ್ಸಾಹ, ಗಂಡ ಹಾಗೂ ಅತ್ತೆ-ಮಾವಂದಿರ ಬೆಂಬಲ, ಗುರುಗಳ ಆಶೀರ್ವಾದ ಇದಕ್ಕೆ ಕಾರಣ ಎಂದು ಸ್ಮರಿಸುತ್ತಾರೆ.
Comments