top of page

ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿದ್ಯಾಕೆ ?

  • Writer: Ananthamurthy m Hegde
    Ananthamurthy m Hegde
  • Dec 6, 2024
  • 1 min read

ree

ಅಡಿಲೇಡ್ ನಲ್ಲಿ ಫೀಲ್ಡಿಂಗ್ ನಡೆಸುತ್ತಿರುವ ಆಸ್ಟ್ರೇಲಿಯಾದ ಆಟಗಾರರು ಎಲ್ಲರೂ ತಮ್ಮ ಶರ್ಟಿನ ತೋಳುಗಳಲ್ಲಿ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡಿದ್ದಾರೆ. ಇದಕ್ಕೆ ಬಲವಾದ ಕಾರಣವಿದೆ.

ಹತ್ತು ವರ್ಷಗಳ ಹಿಂದೆ ಫಿಲ್ ಹ್ಯೂಸ್ ಎಂಬ ಆಸ್ಟ್ರೇಲಿಯಾದ ಪ್ರತಿಭಾವಂತ ಬ್ಯಾಟರ್ ನ ದುರ್ಮರಣವಾಗಿದ್ದನ್ನು ಯಾವ ಕ್ರಿಕೆಟ್ ಪ್ರೇಮಿ ತಾನೆ ಮರೆಯಬಲ್ಲರು? ಆಸ್ಚ್ರೇಲಿಯಾ ಅಂತಲ್ಲ, ಇಡೀ ಕ್ರಿಕೆಟ್ ವಿಶ್ವವೇ ಮರುಗಿದ ಘಟನೆಯದು. ಇದರ ಜೊತೆಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಇಯಾನ್ ರಿಚೀ ರಿಡ್ ಪಾತ್ ಅವರು ಸಹ ಡಿಸೆಂಬರ್ 1ರಂದು ನಿಧನರಾದರು. ಈ ಎರಡೂ ಶೋಕಾಚರಣೆಗೆ ಆಸ್ಟ್ರೇಲಿಯಾ ತಂಡ ಕಪ್ಪು ಪಟ್ಟಿ ಧರಿಸಿ ಆಡುತ್ತಿದೆ.

2014ರ ನವೆಂಬರ್ 25. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (SCG) ಶೆಫೀಲ್ಡ್ ಶೀಲ್ಡ್ ಟೂರ್ನಿಯ ಪಂದ್ಯ ನಡೆಯುತ್ತಿತ್ತು. ದಕ್ಷಿಣ ಆಸ್ಚ್ರೇಲಿಯಾ ಪರ ಬ್ಯಾಟಿಂಗ್ ನಡೆಸುತ್ತಿದ್ದ ಫಿಲ್ ಹ್ಯೂಸ್ ಕತ್ತಿಗೆ ವೇಗಿ ಸೀನ್ ಅಬಾಟ್ ಎಸೆದ ಬೌನ್ಸರ್ ಬಡಿಯಿತು. ಹೆಲ್ಮೆಟ್ ಧರಿಸಿದ್ದರೂ ಚೆಂಡು ಹೆಲ್ಮೆಟ್ ನ ಒಳನುಸುಳಿ ಹ್ಯೂಸ್ ಗೆ ಮೇಲೇಳಲಾರದಷ್ಟು ದೊಡ್ಡ ಹೊಡೆತ ಉಂಟಾಗಿತ್ತು.

ಮೈದಾನದಲ್ಲಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ರೀತಿಯ ಪ್ರಯೋಜನ ಆಗಲಿಲ್ಲ. ಬ್ರೈನ್ ಹ್ಯೂಮರೇಜ್ ಆದ ಅವರು ನವೆಂಬರ್ 27ರಂದು ಕೊನೆಯುಸಿರೆಳೆದರು. ಅದೂ ಅವರ 25ವರ್ಷದ ಹುಟ್ಟುಹಬ್ಬಕ್ಕೆ ಕೇವಲ 1 ದಿನ ಮೊದಲು. ಆಸ್ಟ್ರೇಲಿಯಾ ಮಾತ್ರವಲ್ಲ, ಇಡೀ ಜಗತ್ತೇ ಹ್ಯೂಸ್ ಬದುಕಿ ಬರಲಿ ಎಂದು ಪ್ರಾರ್ಥಿಸಿಕೊಂಡದ್ದು ವ್ಯರ್ಥವಾಯಿತು.

ಇಂದಿಗೂ ಆ ಕೆಟ್ಟ ಘಳಿಗೆಯನ್ನು ನೆನಪಿಸಿಕೊಂಡು ಸೀನ್ ಅಬಾಟ್ ದುಃಖಿಸುತ್ತಾರೆ. ಅಂದು ಹ್ಯೂಸ್ ತಲೆಗೆ ಬಡಿದ ಕೆಂಪು ಚೆಂಡಿನಲ್ಲಿ ಸೀನ್ ಅಬಾಟ್ ಅವರು ಐ ಆ್ಯಮ್ ಸಾರಿ ಹ್ಯೂಸ್ ಎಂದು ಬರೆದಿಟ್ಟಿರುವುದು ಸಿಡ್ನಿ ಕ್ರಿಕೆಟ್ ಗ್ರೌಂಡಿನಲ್ಲಿ ಸ್ಮಾರಕದ ರೀತಿ ಮೌನವಾಗಿ ನೋವಿನ ಕತೆಯನ್ನು ಹೇಳುತ್ತಿದೆ.

ಕಾಕತಾಳೀಯವೆಂದರೆ ಹ್ಯೂಸ್ ಅವರ ಜೆರ್ಸಿ ನಂಬರ್ 63. ಅವರು ನಿಧನರಾದ ಪಂದ್ಯದಲ್ಲೂ ಅವರು 63 ರನ್ ಹೊಡೆದು ನಾಟೌಟ್ ಆಗಿ ಉಳಿದಿದ್ದರು. ಹೀಗಾಗಿ ಅವರಿಗೆ ಕ್ರಿಕೆಟ್ ಜಗತ್ತು #63NotOut ಎಂದು ಹ್ಯಾಶ್ ಟ್ಯಾಗ್ ಬಳಸಿ ಗೌರವ ಸಮರ್ಪಿಸುತ್ತಿದೆ.

ಎರಡನೇಯದಾಗಿ 60 ಮತ್ತು 70ನೇ ದಶಕದಲ್ಲಿ ಆಸ್ಚ್ರೇಲಿಯಾ ತಂಡದ ಅವಿಭಾಜ್ಯ ಅಂಗವೇ ಆಗಿದ್ದ ಇಯಾನ್ ರಿಚೀ ರಿಡ್ ಪಾತ್ ಅವರು ಡಿಸೆಂಬರ್ 1ರಂದು ಕೊನೆಯುಸಿರೆಳೆದರು. ಈ ಶೋಕಾಚರಣೆಯ ಸಲುವಾಗಿಯೂ ಆಸ್ಟ್ರೇಲಿಯಾ ತಂಡದ ಆಟಗಾರರು ಇದೀಗ ಕಪ್ಪು ಪಟ್ಟಿ ಧರಿಸಿ ಆಡುತ್ತಿದ್ದಾರೆ.

Comments


Top Stories

bottom of page