ಕಾಂಕ್ರೀಟ್ ರಸ್ತೆ ಲೋಕಾರ್ಪಣೆ ಮಾಡಿದ ಪರ್ತಗಾಳಿ ಶ್ರೀ
- Ananthamurthy m Hegde
- Dec 6, 2024
- 1 min read

ಭಟ್ಕಳ : ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಭಟ್ಕಳ ಜನತಾ ಬ್ಯಾಂಕ್ ಹಿಂಬದಿಯಲ್ಲಿ ನಿರ್ಮಾಣಗೊಂಡ ಒಂದು ಕೋಟಿ ರೂ. ಮೊತ್ತದ ಕಾಂಕ್ರೀಟ್ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು.
ನಂತರ ಆಶೀರ್ವಚನ ನೀಡಿ ಭಕ್ತರನ್ನುದ್ದೇಶಿಸಿ ಮಾತನಾಡಿದ ವಡೇರ ಸ್ವಾಮೀಜಿ ಸಚಿವರು ಗುರುಗಳಿಗೆ ಕೊಟ್ಟ ಮಾತಿನಂತೆ ರಸ್ತೆ ನಿರ್ಮಾಣ ಮಾಡುವ ಭರವಸೆ ಈಡೇರಿಸಿ ಕೊಟ್ಟ ಮಾತನ್ನು ತಪ್ಪಿಸಿಲ್ಲ. ೬೦ ಸಂವತ್ಸರ ದಾಟಿದ ದಿನೇಶ ಪೈ ಷಷ್ಠಬ್ದ ಪೂರ್ತಿ ಉಗ್ರ ರಥ ಶಾಂತಿಯನ್ನು ಮಾಡಿ ದೇವರ ಸೇವ ಮಾಡಿದರೆ, ಸಚಿವ ಮಂಕಾಳ ವೈದ್ಯರು ದೇವರ ಭಕ್ತರಿಗೆ ಮಾರ್ಗವನ್ನು ಕೊಡಬೇಕಾಗಿ ರಸ್ತೆ ನಿರ್ಮಿಸಿ ದೇವರ ಸೇವೆ ಮಾಡಿದ್ದಾರೆ. ಇಲ್ಲಿ ಎರಡು ಭಕ್ತರಿಂದ ಎರಡು ಬಗೆಯ ದೇವರ ಸೇವೆ ಮಾಡಿದ್ದಾರೆ. ಒಬ್ಬರು ನೇರವಾಗಿ ದೇವರ ಸೇವೆ ಮಾಡಿದರೆ. ಇನ್ನೊಬ್ಬರು ದೇವರನು ನೋಡಲು ಬರುವ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗಬಾರದೆನ್ನುವ ಉದ್ದೇಶದಿಂದ ದೇವರ ಸೇವೆ ಮಾಡಿದ್ದಾರೆ ಎಂದರು.
ಗುರುಗಳಿಗೆ ಹೊಸದಾದ ಮಾರ್ಗದ ದರ್ಶನ ಆಗುವಂತೆ ಸಚಿವ ಮಂಕಾಳ ವೈದ್ಯರು ಮಾಡಿದ್ದಾರೆ. ಇಂದು ಭಟ್ಕಳದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಸ್ಥಳದಲ್ಲಿ ರಸ್ತೆ ನಿರ್ಮಾಣ ಮಾಡಿ ಹೊಸ ಮಾರ್ಗದ ದರ್ಶನ ಮಾಡಿಸಿದ್ದಾರೆ. ಮುಂದಿನ ದಿನ ಹೊನ್ನಾವರ ಭಾಗದ ಕೋಡ್ಲುಮನೆ ಭಾಗದ ಕಾರ್ಯಕ್ಕೆ ಹೋಗುತ್ತಿದ್ದೇವೆ. ಅಲ್ಲಿಯೂ ಕೂಡ ಹೊಸ ಮಾರ್ಗದ ದರ್ಶನ ಮಾಡಿಸುತ್ತಿದ್ದಾರೆ. ಗುರುಗಳು ಎಲ್ಲೆಲ್ಲಿಗೆ ಮೊಕ್ಕಾ೦ ಹೋಗುತ್ತಿದ್ದರೋ ಅಲ್ಲಿ ಮಂಕಾಳ ವೈದ್ಯರು ಹೊಸ ಮಾರ್ಗದ ದರ್ಶನ ಮಾಡಿಸಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ ಯಾರು ಗುರುಗಳಿಗೆ ತಲೆಬಾಗುತ್ತಾರೊ ಅವರು ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುತ್ತಾರೆ. ಗುರುಗಳ ಪಾದ ಸ್ಪರ್ಶ ಎಲ್ಲಿ ಆಗುತ್ತೋ ಅಲ್ಲಿ ಎಲ್ಲವೂ ಸಾಧ್ಯ ಮಠ ಮಂದಿರಗಳಿಗೆ ಎಂದೂ ಕೊರತೆ ಆಗಬಾರದು ಎನ್ನುವದು ನಮ್ಮ ಬಯಕೆ ಎಂದು ಹೇಳಿದರು.
ಸಚಿವ ವೈದ್ಯರು ತಮ್ಮ ಮಾತಿಗೆ ಬದ್ದರಾಗಿದ್ದಾರೆ. ಅಧಿಕಾರ ಇಲ್ಲದಾಗಲೂ ಅವರು ಹೇಳಿದ ಕಾರ್ಯವನ್ನು ಮಾಡಿಕೊಟ್ಟಿದ್ದಾರೆ ಎಂದು ಹಾಂಗ್ಯೂ ಐಸ್ ಕ್ರೀಂ ಎಂಡಿ ಪ್ರದೀಪ ಪೈ ಹೇಳಿದರು.
ಬಳಿಕ ಶ್ರೀಗಳು ರಸ್ತೆ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ ಹೆಸ್ಕಾಂ, ಪುರಸಭೆ, ವಿದ್ಯುತ್ ಗುತ್ತಿಗೆದಾರರು ಸೇರಿ ಸಹಕರಿಸಿದವರಿಗೆ ಮತ್ತು ಸಚಿವ ಮಂಕಾಳ ವೈದ್ಯ ಅವರಿಗೆ ಮಂತ್ರಾಕ್ಷತೆ ನೀಡಿ ಗೌರವಿಸಿದರು. ಜಿಎಸ್‌ಬಿ ಸಮಾಜದ ಗೌರವಾಧ್ಯಕ್ಷ ಸುರೇಂದ್ರ ಶ್ಯಾನಭಾಗ, ಅಧ್ಯಕ್ಷ ನಾಗೇಶ ಕಾಮತ, ಮುಖಂಡ ರಾಜೇಶ ನಾಯಕ, ಕಾಮಾಕ್ಷೀ ದೇವಸ್ಥಾನದ ಅಧ್ಯಕ್ಷ ಹರೀಶ ಕಾಮತ ಇತರರು ಇದ್ದರು.
Comments