top of page

ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆ ವಿರೋಧಿಸಿ ಬಿಜಿಪಿ ಗ್ರಾಮೀಣ ಮಂಡಳದ ವತಿಯಿಂದ ಹೆಗಡೆಕಟ್ಟಾ ದಲ್ಲಿ ಪ್ರತಿಭಟನೆ

  • Writer: Ananthamurthy m Hegde
    Ananthamurthy m Hegde
  • Jul 2
  • 2 min read
ree

ಶಿರಸಿ: ರಾಜ್ಯ ಸರಕಾರದ ಪ್ರತಿ ವ್ಯವಸ್ಥೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿರುವುದರಿಂದ ಜನ ಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಗ್ರಾಮೀಣ ಮಂಡಳದ ವತಿಯಿಂದ ತಾಲೂಕಿನ ಹೆಗಡೆಕಟ್ಟಾ-ಶಿವಳ್ಳಿ ಗ್ರಾಪಂ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ನಿವೇಶನಗಳ ಸಮಸ್ಯೆ, ಅಕ್ರಮ-ಸಕ್ರಮ ಅರ್ಜಿ ತಿರಸ್ಕರಿಸಿರುವುದು, ಹೊಸ ಆಶ್ರಯ ಮನೆಗಳ ಮಂಜೂರಾತಿ, ವೃದ್ಧಾಪ್ಯ, ವಿಧವಾ ವೇತನ, ಗ್ರಾಮೀಣ ರಸ್ತೆಗಳ ದುರಸ್ತಿ, ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಪಂ ಮಾಜಿ ಸದಸ್ಯ ಆರ್.ಡಿ.ಹೆಗಡೆ ಜಾನ್ಮನೆ ಮಾತನಾಡಿ, ಸರ್ಕಾರದ ಅವ್ಯವಸ್ಥೆ ಕಾರಣದಿಂದ ಪ್ರತಿ ಗ್ರಾಪಂ ಮಟ್ಟದಲ್ಲಿ ರೈತರು, ಕೂಲಿಕಾರ್ಮಿಕರು, ದಲಿತರು, ಬಡವರು ಸಮಸ್ಯೆ ಎದುರಿಸುವಂತಾಗಿದ್ದು, ಗ್ರಾಮೀಣ ಜನರಿಗೆ ಧ್ವನಿಯಾಗಲು ತಾಲೂಕಿನ ಪ್ರತಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದ ಇತಿಹಾಸದಲ್ಲಿ ಗ್ರಾಪಂ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡ ಉದಾಹಣೆ ಇಲ್ಲವಾಗಿತ್ತು. ಧರಣಿ ಹಮ್ಮಿಕೊಳ್ಳುವ ಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ತಂದಿಟ್ಟಿದೆ. ಆಡಳಿತ ಕುಸಿತ ಭ್ರಷ್ಟಾಚಾರ ಮಿತಿಮೀರಿದ್ದು, ವಸತಿ ಯೋಜನೆಯಲ್ಲಿ ಅಕ್ರಮ ನಡೆಯುತ್ತಿದೆ. ಲಂಚ ನೀಡಿದರೆ ಮಾತ್ರ ಹಣ ಸಿಗುತ್ತದೆ ಎಂದು ಆಡಳಿತ ಪಕ್ಷದ ಶಾಸಕರು ಹೇಳುತ್ತಿದ್ದಾರೆ. ಗ್ರಾಮೀಣ ಮಟ್ಟದಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ. ಆಡಳಿತ ಪಕ್ಷದ ಶಾಸಕರೇ ಭ್ರಷ್ಟ ಸರ್ಕಾರ ಎಂದು ಹೇಳಿಕೆ ನೀಡುತ್ತಿದ್ದಾರೆ. ಪರಿಶುದ್ಧ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ಕೂಪದಲ್ಲಿ ಮುಳುಗಿದ್ದಾರೆ. ಎಸ್ಸಿ ಎಸ್ಟಿಗಳಿಗೆ ಮೀಸಲಿಟ್ಟ ೫೦ ಸಾವಿರ ಕೋಟಿ ಹಣವನ್ನು ಗ್ಯಾರೆಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ. ಗ್ಯಾರೆಂಟಿ ಯೋಜನೆಗೆ ನಮ್ಮ ವಿರೋಧವಿಲ್ಲ. ಘೋಷಣೆ ಮಾಡಿರುವ ಯೋಜನೆಯನ್ನು ಜನರಿಗೆ ನೀಡಲಿ. ವಸತಿ ಯೋಜನೆಗಳ ಮೂಲಕ ಹಂಚಿಕೆಯಾದ ಮನೆಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಇದರಿಂದ ಮನೆ ನಿರ್ಮಿಸಿಕೊಂಡಿರುವವರು ಆತಂಕದಲ್ಲಿದ್ದಾರೆ. ರಾಜ್ಯ ಸರ್ಕಾರದ ಕಣ್ತೆರಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಅಭಿವೃದ್ಧಿ ಶೂನ್ಯ ಆಡಳಿತದಲ್ಲಿ ಅಧಿಕಾರಿಗಳ ವರ್ಗಾವಣೆ ದಂದೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು ಮುಳುಗಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ನೋಂದಣಿ ಶುಲ್ಕ 100 ರೂ. ಪಡೆಯುತ್ತಿದ್ದಾರೆ. ಪ್ರತಿ ಹಂತದಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದ್ದು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಹುದ್ದೆಗೆ ಗುದ್ದಾಟ ನಡೆಯುತ್ತಿದ್ದು, ಹಿಂದೂಗಳನ್ನು ಹತ್ತಿಕ್ಕುವ ಕೆಲಕ್ಕೆ ಕೈ ಹಾಕಿದೆ. ಮತ್ತೊಮ್ಮೆ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣಕ್ಕೆ ಕೈ ಹಾಕಿದೆ. ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಜನರ ಸಂಕಷ್ಟ ಆಲಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕ್ಷೇತ್ರದ ಶಾಸಕರೂ ಸಹ ಆಡಳಿತ ವ್ಯವಸ್ಥೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಮನೆಗಳಿಗೆ ಆದೇಶ ಪತ್ರ ನೀಡಿದ್ದಾರೆ, ಆದರೆ ಬಿಲ್ ಪಾವತಿ ಆಗುತ್ತಿಲ್ಲ. ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ನಡೆಯುತ್ತಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ವಿರುದ್ಧ ಹರಿಹಾಯ್ದರು.

ಶಿವಳ್ಳಿ ಗ್ರಾಪಂ ಅಧ್ಯಕ್ಷೆ ರೇಣುಕಾ ಹರಿಜನ, ಜಿಪಂ ಮಾಜಿ ಸದಸ್ಯೆ ಪ್ರಭಾವತಿ ಗೌಡ, ಮಂಜಗುಣಿ ಗ್ರಾಪಂ ಉಪಾಧ್ಯಕ್ಷ ಸತೀಶ ಭಟ್ಟ, ಪ್ರಮುಖರಾದ ಪಿ.ವಿ.ಹೆಗಡೆ, ಹೆಗಡೆಕಟ್ಟಾ ಗ್ರಾಪಂ ಸದಸ್ಯ ಮಂಜುನಾಥ ಹೆಗಡೆ, ಶೇಖರ ಗೌಡ, ನಾಗರಾಜ ಮರಾಠಿ, ವಿನಾಯಕ ಭೋವಿವಡ್ಡರ್, ದೇವನಳ್ಳಿ ಗ್ರಾಪಂ ಸದಸ್ಯ ನಾರಾಯಣ ಹೆಗಡೆ, ಗಣಪತಿ ಹೆಗಡೆ, ಗಣೇಶ ಹೆಗಡೆ ಹುಣಸೇಕೊಪ್ಪ, ಪ್ರಸನ್ನ ಹೆಗಡೆ, ಶಶಿಕಲಾ ನಾಯ್ಕ, ಈಶ್ವರದಾಸ ನಾಯ್ಕ, ಸುನೀಲ ಭಟ್ಟ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Comments


Top Stories

bottom of page