ಕುಮಟಾ-ಶಿರಸಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಕ.ರ.ವೇ ಸ್ವಾಭಿಮಾನಿ ಬಣದಿಂದ ಪ್ರತಿಭಟನೆ
- Ananthamurthy m Hegde
- Jun 27
- 1 min read
ಕುಮಟಾ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಕುಮಟಾ-ಶಿರಸಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಹಾಗೂ ಪ್ರಸ್ತುತ ಹೊಂಡಬಿದ್ದ ಸ್ಥಳಗಳಲ್ಲಿ ರಸ್ತೆ ನಿರ್ಮಾಣ ದುರಸ್ತಿಗೊಳಿಸಿ, ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಮತ್ತು ಕತಗಾಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನಿಯೋಜಿಸುವಂತೆ ಆಗ್ರಹಿಸಿ, ಕುಮಟಾ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯ ವೇಳೆ ಕುಮಟಾ ತಾಲೂಕಿನ ಅಳಕೋಡ, ಅಂತ್ರವಳ್ಳಿ ,ಹರೀಟಾ, ಕೊಡಂಬಳೆ, ಗ್ರಾಮದ ಕೆಲವು ಸ್ಥಳಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿರುವ ಸ್ಥಳಗಳಲ್ಲಿ ಓಡಾಡಲು ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುವುದನ್ನು ಅಣಕಿಸಲು ಆಡಳಿತ ಸೌಧದ ಎದುರೇ ಕೆಲವರು ಕಂಬಳಿ ಹಾಸಿ ಸಾಂಕೇತಿಕವಾಗಿ ಮಲಗುವ ಮೂಲಕ ಸರ್ಕಾರ, ಮತ್ತು ಸಂಬಂಧಿಸಿದ ಇಲಾಖೆಗಳು, ರಾ.ಹೆ ಪ್ರಾಧಿಕಾರ ಮತ್ತು ಗುತ್ತಿಗೆ ಪಡೆದ ಆರ್.ಎನ್.ಎಸ್ ಕಂಪನಿಯವರನ್ನು ಅಣಕಿಸಿದರು.
ಈ ವೇಳೆಗೆ ಕತಗಾಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನಿಯೋಜಿಸುವಂತೆ ಆಗ್ರಹಿಸಿದರು. ರಾಜು ಮಾಸ್ತಿಹಳ್ಳ ಸರ್ಕಾರಕ್ಕೆ ಎಂ.ಬಿ.ಬಿ.ಎಸ್. ವೈದ್ಯರನ್ನು ನೇಮಿಸುವ ಯೋಗ್ಯತೆ ಇಲ್ಲವೆ. ವೈದ್ಯರು ಬಾರದಿದ್ದರೆ ಆ ಭಾಗದ 15-20 ಸಾವಿರ ಜನ ಹೀಗೆ ಸಾಯಬೇಕೆ ಎಂದರು.
ಕಳೆದ ಒಂದು ವರ್ಷಗಳಿಂದ ಹೊಸ ಹೆದ್ದಾರಿ ಕಾಮಗಾರಿ ಆರಂಭಿಸುವ ವರೆಗೆ ಕತಗಾಲನಿಂದ ಮಾಸ್ತಿಹಳ್ಳ ವರೆಗೆ ಸುಮಾರು 4 ಕಿ.ಮೀ ರಸ್ತೆ ದುರಸ್ತಿ ಮಾಡಿಕೊಡುವುದಾಗಿ ರಾ.ಹೆ ಪ್ರಾಧಿಕಾರ, ಎಸಿ ಮತ್ತು ಶಾಸಕರ ಎದುರಲ್ಲಿ ಒಪ್ಪಿಕೊಂಡ ಆರ್.ಎನ್.ಎಸ್ ಕಂಪನಿಯವರು ವರ್ಷ ಕಳೆದರೂ ರಸ್ತೆ ಸರಿಪಡಿಸದ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ವಿಶ್ವ ಮಾನವ ಹಕ್ಕು ಆಯೋಗ ದ ಕರ್ನಾಟಕ ಪಶ್ಚಿಮ ಭಾಗದ ಮಹಿಳಾ ಅಧ್ಯಕ್ಷೆ ಹಾಗೂ ಉ.ಕ ಲೀಗಲ್ ಅಡ್ವೈಸರ್ ಅರ್ಚನಾ ಜಯಪ್ರಕಾಶ ಹಾಗೂ ಜಿಲ್ಲಾ ಅಧ್ಯಕ್ಷ ಮಹೇಂದ್ರ ನಾಯ್ಕ ಕತಗಾಲ ರವರು ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಈ ವೇಳೆಗೆ ಕ.ರ.ವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ, ಕುಮಟಾ ತಾಲೂಕಾ ಅಧ್ಯಕ್ಷ ಮಾರುತಿ ಆನೆಗುಂದಿ, ನಾಗರಾಜ ಹೆಗಡೆ ವಕೀಲರು ಸೇರಿದಂತೆ ಇತರ ಕಾರ್ಯಕರ್ತರು, ಅಳಕೋಡ, ಕತಗಾಲ, ಅಂತ್ರವಳ್ಳಿ, ಕೋಡಂಬಳೆ, ಹರೀಟಾ ಭಾಗದ ಸ್ಥಳಿಯರು ಭಾಗವಹಿಸಿದ್ದರು.
Comments