ಕಾಶ್ಮೀರದಿಂದ ಕರಾವಳಿ ತೀರಕ್ಕೆ: ಏರೋಪೋನಿಕ್ಸ್ ಬಳಸಿ ಮನೆಯ ಟೆರೇಸ್ ನಲ್ಲಿ ಕೇಸರಿ ಬೆಳೆದ ಉಡುಪಿಯ ಟೆಕ್ಕಿ!
- Ananthamurthy m Hegde
- Mar 26
- 2 min read
ಉಡುಪಿ: ಭೂಮಿ ಮೇಲಿನ ಸ್ವರ್ಗ ಎಂದು ಕರೆಯಲ್ಪಡುವ ಕಾಶ್ಮೀರ ಎಂದಾಕ್ಷಣ ನೆನಪಿಗೆ ಬರುವುದು ಮಂಜಿನ ಹೊದಿಕೆ, ಕಾಶ್ಮೀರದ ಹೆದ್ದಾರಿಗಳ ಇಕ್ಕೆಲಗಳಲ್ಲಿ ಕಾಣುವ ಆಕರ್ಷಕ ಹೂವುಗಳು. ನೈಸರ್ಗಿಕ ವರ್ಣಗಳಲ್ಲಿ ಮುಳುಗಿರುವ ಕೇಸರಿ ಹೊಲಗಳು ಸಾವಿರಾರು ನೇರಳೆ ಬಣ್ಣದ ರೋಮಾಂಚಕ ಹೂವುಗಳು ಕಣ್ಣಿಗೆ ಅದೆಷ್ಟು ಮುದ ನೀಡುತ್ತವೆ. ಚಳಿಗಾಲ ಮುಗಿದು ಬೇಸಿಗೆಯ ಹೊತ್ತಿಗೆ ಕಾಶ್ಮೀರದ ಟುಲಿಪ್ ಹೂವುಗಳು ಜಗದ್ವಿಖ್ಯಾತ.

ಕಾಶ್ಮೀರ ವಸಂತ ಋತು ಮತ್ತು ಬೇಸಿಗೆಯಲ್ಲಿ ಹೂವುಗಳಿಗೆ ಜನಪ್ರಿಯ. ಭಾರತೀಯ ಕಮಲ, ಟುಲಿಪ್, ಕೇಸರಿ ಕ್ರೋಕಸ್, ಕಾಶ್ಮೀರಿ ಐರಿಸ್, ಕಾಶ್ಮೀರಿ ಗುಲಾಬಿ, ಹಿಮಾಲಯನ್ ಇಂಡಿಗೊ, ಕಾರ್ನೇಷನ್, ಡ್ಯಾಫೋಡಿಲ್, ಅಟ್ರೋಪಾ, ಮಾರಿಗೋಲ್ಡ್ ಮೊದಲಾದ ಹೂವುಗಳು ಜನಪ್ರಿಯವಾಗಿದೆ. ಈ ಹೂವುಗಳು ಕೇಸರಿ ಆಹಾರ ಮತ್ತು ಪಾನೀಯಗಳಲ್ಲಿ ಸಾಟಿಯಿಲ್ಲದ ಬಣ್ಣ ಮತ್ತು ಪರಿಮಳವನ್ನು ತುಂಬುತ್ತದೆ, ಇದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಇಲ್ಲಿನ ಮಸಾಲೆ ಪದಾರ್ಥಗಳು ಸಹ ಜನಪ್ರಿಯ.
ಉಡುಪಿಯ ಯುವ ಐಟಿ ವೃತ್ತಿಪರರಾದ ಅನಂತಜಿತ್ ತಂತ್ರಿ ತಮ್ಮ ಸ್ನೇಹಿತ ಅಕ್ಷತ್ ಬಿ ಕೆ ಅವರೊಂದಿಗೆ ಸೇರಿ ಕೇಸರಿ ಗೆಡ್ಡೆಯನ್ನು ಅತ್ಯಾಧುನಿಕ ರೀತಿಯಲ್ಲಿ ತಮ್ಮ ಮನೆಗೆ ತಂದು ಏರೋಪೋನಿಕ್ಸ್ ಕೃಷಿ ವಿಧಾನದ ಮೂಲಕ ಕೇಸರಿಯನ್ನು ಬೆಳೆದಿದ್ದಾರೆ, ಕಳೆದ ವರ್ಷ ಮಸಾಲೆಯನ್ನು ಬೆಳೆಸುವ ಅವರ ಆರಂಭಿಕ ಪ್ರಯೋಗವು ನಿರೀಕ್ಷಿತ ಫಲಿತಾಂಶ ಕೊಡಲಿಲ್ಲ.
ಏರೋಪೋನಿಕ್ಸ್ ಎಂಬುದು ಮಣ್ಣು-ಮುಕ್ತ ಸಸ್ಯಗಳನ್ನು ಬೆಳೆಸುವ ವಿಧಾನವಾಗಿದ್ದು, ಅಲ್ಲಿ ಬೇರುಗಳು ಗಾಳಿಯಲ್ಲಿ ತೇಲುತ್ತವೆ. ಉತ್ತಮವಾದ, ಪೋಷಕಾಂಶ-ಭರಿತ ಮಂಜಿನಿಂದ ಪೋಷಿಸಲ್ಪಡುತ್ತವೆ. ಹೈಡ್ರೋಪೋನಿಕ್ಸ್ ಗಿಂತ ಭಿನ್ನವಾಗಿ ಬೇರುಗಳು ಪೋಷಕಾಂಶಗಳಿಂದ ತುಂಬಿದ ದ್ರಾವಣದಲ್ಲಿ ಮುಳುಗಿರುವಾಗ, ಏರೋಪೋನಿಕ್ಸ್ ಮಂಜಿನ ಮೂಲಕ ನೇರವಾಗಿ ಪೋಷಕಾಂಶಗಳನ್ನು ತಲುಪಿಸುತ್ತದೆ, ಬೆಳವಣಿಗೆ ಮತ್ತು ಸಂಪನ್ಮೂಲ ದಕ್ಷತೆಯನ್ನು ಹೆಚ್ಚಿಸುತ್ತದೆ.
ಅನಂತಜಿತ್ ತಂತ್ರಿ ಅವರ ಕುಟುಂಬಸ್ಥರು ತೆಂಗಿನ ಬೆಳೆಯನ್ನು ಹೆಚ್ಚಾಗಿ ಬೆಳೆಸುತ್ತಿದ್ದು, ಒಳಾಂಗಣ ಕೃಷಿ ಮಾಡಲು ಬಯಸುತ್ತಿದ್ದರು. ಕೇಸರಿ ಗೆಡ್ಡೆಗಳನ್ನು ಆನ್‌ಲೈನ್‌ನಲ್ಲಿ ಪಡೆದುಕೊಂಡು ಮಣ್ಣಿನಲ್ಲಿ ಬೆಳೆಯುವ ಪ್ರಯೋಗ ಮಾಡಿದರು.
ಅದು ಪ್ರಯೋಜನವಾಗದಿದ್ದಾಗ, ಕಳೆದ ವರ್ಷ ಬೆಳಗಾವಿಯಲ್ಲಿ ತರಬೇತಿ ಪಡೆಯಲು ಹೋದರು. ಏರೋಪೋನಿಕ್ಸ್ ತಂತ್ರಗಳ ಮೂಲಕ ಕೇಸರಿ ಗೆಡ್ಡೆಗಳನ್ನು ಬೆಳೆಸಬಹುದು ಎಂದು ಕಲಿತರು. ಅದರಂತೆ, ಉಡುಪಿ ಜಿಲ್ಲೆಯ ಬೈಲೂರಿನಲ್ಲಿರುವ ತಮ್ಮ ಮನೆಯ ಮೇಲಿನ ಮಹಡಿಯಲ್ಲಿರುವ ಒಂದು ಕೋಣೆಯನ್ನು ನಿಯಂತ್ರಿತ ಪರಿಸರದಲ್ಲಿ ಕೇಸರಿ ಬೆಳೆಯಲು ಆರಂಭಿಸಿದರು.
ಪ್ರಸ್ತುತ, ಅವರ 180 ಚದರ ಅಡಿ ಕೋಣೆಯು ಕ್ರೋಕಸ್ ಸ್ಯಾಟಿವಸ್ ಜಾತಿಯ ಕೇಸರಿಯನ್ನು ಉತ್ಪಾದಿಸಲು ಮೂಲವಾಗಿದೆ, ಈ ವರ್ಷ ಸುಮಾರು 110 ಕೆಜಿ ಕೇಸರಿ ಗೆಡ್ಡೆಗಳನ್ನು ಬೆಳೆಸಿದ್ದು, ಮುಂದಿನ ಅಕ್ಟೋಬರ್ ವೇಳೆಗೆ ಬೆಳೆ ಕೊಯ್ಲಿಗೆ ಸಿದ್ಧವಾಗಲಿದೆ.
ಮಣ್ಣಿಲ್ಲದೆ ಕೃಷಿ ಮಾಡಿದರೂ ಬೆಳೆ ಚೆನ್ನಾಗಿ ಬೆಳೆಯುತ್ತಿದೆ. ಈ ಬಾರಿ ನಾನು ಸಸ್ಯವನ್ನು ಹಿಡಿದಿಡಲು ಕೊಕೊಪೀಟ್ ನ್ನು ಆಧಾರವಾಗಿ ಬಳಸಿಕೊಂಡು ಬೆಳೆದಿದ್ದೇನೆ. ಕೋಣೆಯಲ್ಲಿ ಇರಿಸಿರುವ ಆರ್ದ್ರಕವು ಕೋಣೆಯೊಳಗಿನ ಗಾಳಿಯಲ್ಲಿ ತೇವಾಂಶದ ಮಟ್ಟವನ್ನು ಹೆಚ್ಚಿಸುತ್ತದೆ, ಹೂಬಿಡುವ ಸಮಯದಲ್ಲಿ ತಾಪಮಾನವು 6 ಡಿಗ್ರಿ ಸೆಲ್ಸಿಯಸ್‌ನಿಂದ 9 ಡಿಗ್ರಿ ಸೆಲ್ಸಿಯಸ್ ಮಿತಿಯಲ್ಲಿರಬೇಕು ಎಂದು ಅನಂತಜಿತ್ ತಂತ್ರಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಈ ಉದ್ಯಮವು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಆಧರಿಸಿರುವುದರಿಂದ, ಕಳೆದ ವರ್ಷ 50 ಕೆಜಿ ಕೇಸರಿ ಗೆಡ್ಡೆಗಳನ್ನು ಬೆಳೆಸಿದ್ದೆವು. ಈ ವರ್ಷ, ಒಟ್ಟಾರೆಯಾಗಿ 110 ಕೆಜಿ ಕೇಸರಿ ಗೆಡ್ಡೆಗಳನ್ನು ಬೆಳೆಯಲಾಗುತ್ತಿದೆ. ಇದಲ್ಲದೆ, ಮುಂದಿನ ವರ್ಷದ ವೇಳೆಗೆ ಸುಮಾರು 200 ಕೆಜಿ ಕೇಸರಿ ಗೆಡ್ಡೆಗಳನ್ನು ಬೆಳೆಯುವ ಯೋಜನೆಯನ್ನು ಹೊಂದಿರುವುದಾಗಿ ತಂತ್ರಿ ಹೇಳಿದರು.
ಮಾರುಕಟ್ಟೆ ನಿರೀಕ್ಷೆಗಳಿಗೆ ಸಂಬಂಧಿಸಿದಂತೆ, ಅವರು ಬೆಳೆದ ಕೇಸರಿಯನ್ನು ಪಡೆಯಲು ಬೇಕರಿಗಳು ಮತ್ತು ಅಡುಗೆಯವರು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ವಿವರಿಸಿದರು. ತಂತ್ರಿಯವರ ಉದ್ಯಮಕ್ಕೆ ಆರಂಭಿಕ ಹೂಡಿಕೆ 10 ಲಕ್ಷ ರೂಪಾಯಿಗಳ ಅಗತ್ಯವಿದ್ದ ಕಾರಣ, ಅವರು ಸರ್ಕಾರಿ ಯೋಜನೆಯ ಮೂಲಕ 6 ಲಕ್ಷ ರೂಪಾಯಿ ಸಾಲ ಪಡೆದು ಉಳಿದ ಮೊತ್ತವನ್ನು ತಮ್ಮ ಕೈಯಿಂದಲೇ ಹೂಡಿಕೆ ಮಾಡಿದರು.
ಕೇಸರಿ ಆಹಾರ ಮತ್ತು ಪಾನೀಯ ಉದ್ಯಮದಿಂದ ಹೆಚ್ಚಿನ ಬೇಡಿಕೆಯಲ್ಲಿದ್ದರೂ, ಹೂವುಗಳು ಮತ್ತು ದಳಗಳ ಬೇಡಿಕೆಯೂ ಹೆಚ್ಚುತ್ತಿದೆ. ದಳಗಳನ್ನು ಕೆಜಿಗೆ 20,000 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ, ಸ್ಟಿಗ್ಮಾಗಳಿಗೆ ಮಾರುಕಟ್ಟೆ ಬೆಲೆ ಪ್ರತಿ ಗ್ರಾಂಗೆ 400 ರೂ.ಗಳು. (1 ಕೆಜಿ ಸ್ಟಿಗ್ಮಾ ಬೆಲೆ 4 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ).
ಕಳೆದ ವರ್ಷ, ತಂತ್ರಿಯವರು 37 ಗ್ರಾಂ ಕೇಸರಿ ಸ್ಟಿಗ್ಮಾದ ಇಳುವರಿಯನ್ನು ಗಳಿಸಿದರು. ಅಕ್ಷತ್ ಅವರು ಬೆಳೆಯನ್ನು ಮಾರಾಟ ಮಾಡುವ ಮೊದಲು ಕೊಯ್ಲು ಮತ್ತು ಒಣಗಿಸುವ ಪ್ರಕ್ರಿಯೆಗಳಲ್ಲಿ ತಂತ್ರಿಗೆ ಸಹಾಯ ಮಾಡುತ್ತಾರೆ. ಕೇಸರಿ ಗೆಡ್ಡೆಗಳ ಸರಿಯಾದ ಬೆಳವಣಿಗೆಗೆ ವಾರಕ್ಕೊಮ್ಮೆ ಕೇಸರಿ ಗಿಡಗಳಿಗೆ ನೀರುಣಿಸುತ್ತಾರೆ.
ತಂತ್ರಿ ಮತ್ತು ಅಕ್ಷತ್ ಕೇಸರಿಯನ್ನು ಬೆಳೆಯಲು ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸುವುದಿಲ್ಲ, ಬದಲಿಗೆ ಶಿಲೀಂಧ್ರಗಳ ದಾಳಿಯನ್ನು ತಡೆಯುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿರುವ ಬೇವಿನ ಎಣ್ಣೆಯನ್ನು ಸಿಂಪಡಿಸುತ್ತಾರೆ. ಉತ್ತಮ ಗುಣಮಟ್ಟದ ಕೇಸರಿ ಗೆಡ್ಡೆಗಳನ್ನು ಆಯ್ಕೆ ಮಾಡಲು, ಜುಲೈ ತಿಂಗಳಲ್ಲಿ ಕಾಶ್ಮೀರದ ಹೊಲಗಳಿಗೆ ಭೇಟಿ ಅಲ್ಲಿನ ರೈತರನ್ನು ಭೇಟಿ ಮಾಡಿ ಅವರು ಮಣ್ಣಿನಿಂದ ಅಗೆದ ಗೆಡ್ಡೆಗಳನ್ನು ತರಬೇಕು ಎನ್ನುತ್ತಾರೆ.
Comments