ಚಿಗಿತುಕೊಂಡ ಯೆಂಡಿ ಬಲೆ ಮೀನುಗಾರಿಕೆ
- Ananthamurthy m Hegde
- Jul 2
- 1 min read

ಕಾರವಾರ: ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ಚಟುವಟಿಕೆ ಸ್ಥಗಿತಗೊಂಡು ತಿಂಗಳು ಪೂರೈಸಿದ್ದು, ದಡದಲ್ಲೇ ನಿಂತು ಬಲೆ ಬೀಸುವ ಯೆಂಡಿ ಬಲೆ ಮೀನುಗಾರಿಕೆ ಗರಿಗೆದರಿದೆ. ಈಚೆಗೆ ಬಿರುಸಿನ ಗಾಳಿಯು ಬೀಸಿದ ಪರಿಣಾಮ ಆಳ ಸಮುದ್ರದಿಂದ ಮೀನುಗಳು ಸಮುದ್ರ ತೀರಕ್ಕೆ ವಲಸೆ ಬಂದಿದ್ದು, ಭರಪೂರ ಮೀನುಗಳು ಲಭಿಸಲಾರಂಭಿಸಿದೆ.
ಪ್ರತಿ ವರ್ಷ ಮುಂಗಾರು ಆರಂಭದ ಮೊದಲ ಎರಡು ತಿಂಗಳು ಯೆಂಡಿ ಬಲೆ ಮೀನುಗಾರಿಕೆಗೆ ಸುಗ್ಗಿ ಕಾಲ. ಈ ಅವಧಿಯಲ್ಲಿ ಪರ್ಸಿನ್, ಟ್ರಾಲರ್ ಬೋಟ್‌ಗಳ ಮೀನುಗಾರಿಕೆ ನಿಷೇಧ ಇರುವ ಕಾರಣ ಕಡಲತೀರದ ಬಳಿಯೇ ಮೀನುಗಾರಿಕೆ ನಡೆಸುವವರಿಗೆ ಹೇರಳ ಪ್ರಮಾಣದಲ್ಲಿ ಮೀನು ಲಭಿಸುತ್ತವೆ.
ಪ್ರತಿನಿತ್ಯ ನಸುಕಿನ ಜಾವ, ಇಳಿ ಸಂಜೆ ಹೊತ್ತಿನಲ್ಲಿ ಇಲ್ಲಿನ ಟ್ಯಾಗೋರ್ ಕಡಲತೀರ, ಅಲಿಗದ್ದಾ ಕಡಲತೀರದಲ್ಲಿ ಯೆಂಡಿ ಬಲೆ ಬೀಸಿ ಮೀನು ಹಿಡಿಯಲಾಗುತ್ತದೆ. ಸಾಂಪ್ರದಾಯಿಕ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿದ ಮೀನುಗಾರರ ಗುಂಪು ಈ ಪ್ರಕ್ರಿಯೆಯಲ್ಲಿ ತೊಡಗುತ್ತದೆ. ಪ್ರತಿ ಗುಂಪಿನಲ್ಲಿ 15ರಿಂದ 25 ಮಂದಿ ಇದ್ದು, ಸಮುದ್ರಕ್ಕೆ ಬಲೆ ಬೀಸಿ ರಾಶಿಗಟ್ಟಲೆ ಮೀನು ಹಿಡಿಯುತ್ತಾರೆ.
'ಒಂದೆರಡು ದಿನಗಳಿಂದ ಯೆಂಡಿ ಬಲೆಗೆ ಮೀನುಗಳು ರಾಶಿ ಪ್ರಮಾಣದಲ್ಲಿ ಬೀಳುತ್ತಿವೆ. ಬುರುಗು, ಬಂಗುಡೆ ತಳಿಯ ಮೀನುಗಳು ಮಾತ್ರ ಸದ್ಯಕ್ಕೆ ಸಿಗುತ್ತಿವೆ. ಸಿಗಡಿ, ತಾರ್ಲೆ ಮೀನುಗಳು ಬಲೆಗೆ ಬೀಳುವುದು ಇನ್ನೂ ಆರಂಭವಾಗಿಲ್ಲ. ಮಳೆ ರಭಸ ಕಡಿಮೆಯಾಗಿದ್ದರ ಜೊತೆಗೆ, ಗಾಳಿಯೂ ಇಲ್ಲದ ಕಾರಣದಿಂದ ನಿರೀಕ್ಷೆಯಷ್ಟು ಮೀನು ಸಿಗುತ್ತಿಲ್ಲ. ನಾಲೈದು ದಿನದ ಹಿಂದೆ ಗಾಳಿಯ ರಭಸಕ್ಕೆ ಸಮುದ್ರ ಪ್ರಕ್ಷುಬ್ಧಗೊಂಡಿದ್ದರಿಂದ ಮೀನು ಸಿಗುವ ಪ್ರಮಾಣದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ' ಎಂದು ಯೆಂಡಿ ಬಲೆ ಮೀನುಗಾರಿಕೆ ನಡೆಸುವ ಉದಯ ಬಾನಾವಳಿ ಹೇಳಿದರು.
ಗಾಳಿಯ ತೀವ್ರತೆ ಹೆಚ್ಚಿದರೆ ಮಾತ್ರ ಇನ್ನೂ ಹೇರಳ ಪ್ರಮಾಣದಲ್ಲಿ ಯೆಂಡಿ ಬಲೆಗೆ ಮೀನು ಬೀಳುತ್ತವೆ. ಮುಂದಿನ ಒಂದೆರಡು ತಿಂಗಳು ಉತ್ತಮ ಪ್ರಮಾಣದಲ್ಲಿ ಮೀನು ಸಿಗುವ ನಿರೀಕ್ಷೆ ಇದೆ.
-ರೋಹಿದಾಸ ಬಾನಾವಳಿ, ಮೀನುಗಾರ
Comments