top of page

ಜಗತ್ತಿನ ಹಲವು ದೇಶಗಳಲ್ಲಿ ಭೂಕಂಪನ : ಭಾರತದ ಆಂಧ್ರ ಪ್ರದೇಶದಲ್ಲೂ ಅನುಭವ

Writer: Ananthamurthy m Hegde
Ananthamurthy m Hegde
Dec 23, 2024
1 min read

ನವದೆಹಲಿ: ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಭಾರಿ ಭೂಕಂಪನ ಸಂಭವಿಸಿದ್ದು, ಭಾರತದ ಆಂಧ್ರ ಪ್ರದೇಶ, ನೆರೆಯ ನೇಪಾಳ, ಕ್ಯೂಬಾ ಮತ್ತು ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ದ್ವೀಪರಾಷ್ಟ್ರ ವನವಾಟುವಿನಲ್ಲಿ ಭಾರಿ ಕಂಪನ ದಾಖಲಾಗಿವೆ.

ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕಳೆದ ಮೂರು ದಿನಗಳಲ್ಲಿ ಮೂರನೇ ಬಾರಿಗೆ ಕಂಪನದ ಅನುಭವವಾಗಿದೆ. ಜಿಲ್ಲೆಯ ಮುಂಡ್ಲಮೂರಿನಲ್ಲಿ ಇಂದು ಕೂಡ ಭೂಕಂಪನದ ಅನುಭವವಾಗಿದ್ದು, ಕಳೆದ ಮೂರು ದಿನಗಳಿಂದ ಮುಂಡ್ಲಮೂರಿನಲ್ಲಿ ಸತತ ಭೂಕಂಪನ ಉಂಟಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಶನಿವಾರ ಮತ್ತು ಭಾನುವಾರ ಬೆಳಗ್ಗೆ 10:35ಕ್ಕೆ ಭೂಮಿ ಕಂಪಿಸಿತು.

ಸೋಮವಾರ ಮತ್ತೊಮ್ಮೆ ಕಂಪನದ ಅನುಭವವಾಗಿದೆ. ಇದರಿಂದ ಜನರು ಮನೆ ಬಿಟ್ಟು ಓಡಿ ಬಂದರು. ಶನಿವಾರ ಮತ್ತು ಭಾನುವಾರದಂದು ಕಂಪಿಸಿದ ಕಾರಣ ಮನೆಗಳಲ್ಲಿನ ವಸ್ತುಗಳು ಸಹ ಅಲುಗಾಡಿದವು. ಮೂರು ದಿನಗಳಿಂದ ಭೂಮಿ ಕಂಪಿಸುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಆ ಪ್ರದೇಶದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂದು ಅವರಿಗೆ ಅರ್ಥವಾಗುತ್ತಿಲ್ಲ ಮತ್ತು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ನೇಪಾಳದಲ್ಲಿ ಸೋಮವಾರ ಮುಂಜಾನೆ 3.59ರ ಸಮಯದಲ್ಲಿ ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರ ಬಿಂದು 29.17 N ಅಕ್ಷಾಂಶ ಮತ್ತು 81.59 E ರೇಖಾಂಶದಲ್ಲಿ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ.

ಅಂತೆಯೇ ನೇಪಾಳದ ಬಜುರಾ ಜಿಲ್ಲೆಯ ಜಗನ್ನಾಥ್ ಗ್ರಾಮೀಣ ಪುರಸಭೆಯ ವಾರ್ಡ್ ಸಂಖ್ಯೆ 5 ರ ಗೋತ್ರಿಯಲ್ಲಿ ಈ ಕೇಂದ್ರಬಿಂದು ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂತೆಯೇ ಮೇಲಿನ ಮತ್ತು ಕೆಳಗಿನ ಗೋತ್ರಿಯಲ್ಲಿ 123 ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಇಲ್ಲಿ ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.

ನಿನ್ನೆಯಷ್ಟೇ ಪೆಸಿಫಿಕ್ ದ್ವೀಪಸಮೂಹದ ವನವಾಟು ದೇಶದಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಭಾನುವಾರ ಮುಂಜಾನೆ ವನವಾಟುವಿನ ಮುಖ್ಯ ದ್ವೀಪದಲ್ಲಿ 6.1 ತೀವ್ರತೆಯ ಭೂಕಂಪವು ಕಟ್ಟಡಗಳನ್ನು ನಡುಗಿಸಿತು. ಈ ಘಟನೆಯಲ್ಲಿ ಕನಿಷ್ಠ 12 ಮಂದಿ ಸಾವಿಗೀಡಾಗಿ ಹಲವು ಕಟ್ಟಡಗಳಿಗೆ ಹಾನಿಯಾಗಿತ್ತು. ಭೂಕಂಪನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಭೂಕಂಪನದ ಕೇಂದ್ರ ಬಿಂದು 40 ಕಿಲೋಮೀಟರ್ (25 ಮೈಲುಗಳು) ಆಳದಲ್ಲಿ ಸಂಭವಿಸಿದ್ದು, ರಾಜಧಾನಿಯಿಂದ ಪಶ್ಚಿಮಕ್ಕೆ ಸುಮಾರು 30 ಕಿಲೋಮೀಟರ್ ದೂರದಲ್ಲಿತ್ತು ಎನ್ನಲಾಗಿದೆ.

ಇನ್ನು ಕ್ಯೂಬಾದಲ್ಲೂ ಭೂಕಂಪನವಾಗಿದ್ದು, 5.9 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ ಬಿಂದು ಇಲ್ಲಿನ ಗುಯಿಸಾದಿಂದ 46 ಕಿ.ಮೀ ದಕ್ಷಿಣಕ್ಕೆ ಸುಮಾರು 25 ಕಿ.ಮೀ ಆಳದಲ್ಲಿ ದಾಖಲಾಗಿದೆ ಎಂದು EMSC ವರದಿ ಮಾಡಿದೆ.

Comments

Couldn’t Load Comments
It looks like there was a technical problem. Try reconnecting or refreshing the page.

Top Stories

1/322
bottom of page