top of page

CSKಗೆ ದೊಡ್ಡ ಆಘಾತ; ಭರ್ಜರಿ ಫಾರ್ಮ್ ನಲ್ಲಿರುವ ಆಯುಷ್ ಮ್ಹಾತ್ರೆಗೆ ಗಾಯ; ಈಗ ಸೀಸನ್ ನಿಂದಲೇ ಔಟ್!

  • Writer: Ananthamurthy m Hegde
    Ananthamurthy m Hegde
  • 1 day ago
  • 1 min read

ಚೆನ್ನೈ: ಈಗಾಗಲೇ ಮಹೇಂದ್ರ ಸಿಂಗ್ ಧೋನಿ ಅವರು ಅಲಭ್ಯರಾಗಿರುವುದರಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಐಪಿಎಲ್‌ 2026ರ ಸೀಸನ್ ನ ಆರಂಭದಿಂದಂಲೂ ಭರ್ಜರಿ ಫಾರ್ಮ್‌ನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅವರು ಗಾಯದ ಕಾರಣದಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಅವರು ಈ ಸೀಸನ್ ನಲ್ಲಿ ಉಳಿದ ಪಂದ್ಯಗಳನ್ನು ಆಡಲು ಲಭ್ಯವಿಲ್ಲ ಎಂದು ಫ್ರಾಂಚೈಸಿಯು ಅಧಿಕೃತವಾಗಿ ತಿಳಿಸಿದ್ದು ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಏಪ್ರಿಲ್ 18 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದ ವೇಳೆ ಆಯುಷ್ ಮ್ಹಾತ್ರೆ ಗಾಯಗೊಂಡಿದ್ದರು. ಬ್ಯಾಟಿಂಗ್ ಮಾಡುವಾಗ ಎರಡನೇ ರನ್ ಓಡುವ ಆತುರದಲ್ಲಿ ಅವರ ಎಡಗಾಲಿನ ಸ್ನಾಯು ಸೆಳೆತಕ್ಕೆ (Hamstring Injury) ಒಳಗಾಗಿತ್ತು. ತೀವ್ರ ನೋವಿನ ನಡುವೆಯೂ ಆ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರಿಸಿದ್ದ ಅವರು, ಆ ಬಳಿಕ ನೋವು ಉಲ್ಬಣಗೊಂಡು ಮೈದಾನ ತೊರೆದಿದ್ದರು. ಸೋಮವಾರ ನಡೆದ ವೈದ್ಯಕೀಯ ತಪಾಸಣೆ ಮತ್ತು ಸ್ಕ್ಯಾನಿಂಗ್ ವರದಿಯಲ್ಲಿ ಅವರ ಸ್ನಾಯುವಿಗೆ ಏಟಾಗಿರುವುದು ದೃಢಪಟ್ಟಿದ್ದು, ಕನಿಷ್ಠ 8 ರಿಂದ 12 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಭಾರತ ಅಂಡರ್ 19 ತಂಡದ ನಾಯಕನೂ ಆಗಿರುವ ಕೇವಲ 18 ವರ್ಷದ ಆಯುಷ್ ಮ್ಹಾತ್ರೆ ಅವರು ಈ ಸೀಸನ್‌ನಲ್ಲಿ ಸಿಎಸ್‌ಕೆ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಈ ಸೀಸನ್ ನಲ್ಲಿ ಆಡಿದ 6 ಪಂದ್ಯಗಳಲ್ಲಿ 33.50 ಸರಾಸರಿಯಲ್ಲಿ ಒಟ್ಟು 201 ರನ್ ಗಳಿಸಿದ್ದರು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 43 ಎಸೆತಗಳಲ್ಲಿ 73 ರನ್ ಸಿಡಿಸಿದ್ದ ಅವರು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ 59 ರನ್ ಗಳಿಸಿ ಮಿಂಚಿದ್ದರು. ಕಳೆದ ಸೀಸನ್ ನಲ್ಲಿ ಆಡಿದ 7 ಪಂದ್ಯಗಳಲ್ಲಿ 34.28 ಸರಾಸರಿಯಲ್ಲಿ 240 ರನ್ ಗಳಿಸಿದ್ದರು. ಈವರೆಗೆ ಆಡಿದ ಪಂದ್ಯಗಳಲ್ಲಿ ಅವರು 180ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆಹಾಕುವ ಮೂಲಕ ತಂಡದ ಬೆನ್ನೆಲುಬಾಗಿದ್ದರು.

ಕೋಚ್ ಬೇಸರ: ಆಯುಷ್ ತಂಡದಿಂದ ಹೊರಬಿದ್ದಿರುವ ಬಗ್ಗೆ ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಪ್ರತಿಕ್ರಿಯಿಸಿ, "ಆಯುಷ್ ಒಬ್ಬ ಅಪ್ರತಿಮ ಪ್ರತಿಭೆ. ಈ ವಯಸ್ಸಿನಲ್ಲೇ ಅವರು ತೋರುತ್ತಿದ್ದ ಪಕ್ವತೆ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ತಂಡಕ್ಕೆ ದೊಡ್ಡ ಶಕ್ತಿಯಾಗಿತ್ತು. ಅವರ ಅನುಪಸ್ಥಿತಿ ನಮಗೆ ಖಂಡಿತವಾಗಿಯೂ ಕಾಡಲಿದೆ. ಆದರೆ ಅವರ ಆರೋಗ್ಯ ಮತ್ತು ಮುಂದಿನ ಭವಿಷ್ಯ ನಮಗೆ ಮುಖ್ಯ," ಎಂದು ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನವೇ ಈ ಸುದ್ದಿ ಹೊರಬಿದ್ದಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಸದ್ಯ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಆಯುಷ್ ಬದಲಿಗೆ ಸೂಕ್ತ ಬದಲಿ ಆಟಗಾರನ ಹುಡುಕಾಟದಲ್ಲಿದೆ. ಭಾರತದ ಅಂಡರ್-19 ವಿಶ್ವಕಪ್ ವಿಜೇತ ನಾಯಕನಾಗಿರುವ ಆಯುಷ್, ಶೀಘ್ರವಾಗಿ ಚೇತರಿಸಿಕೊಂಡು ಮರಳಿ ಬರಲಿ ಎಂದು ಕ್ರೀಡಾಭಿಮಾನಿಗಳು ಹಾರೈಸುತ್ತಿದ್ದಾರೆ.

Comments


Top Stories

bottom of page