ಟೀಂ INDIAಗೆ ಉಡುಪಿ ಹೈದ ಎಂಟ್ರಿ
- Ananthamurthy m Hegde
- Dec 29, 2024
- 1 min read

ಸ್ಪಿನ್ ದಿಗ್ಗಜ ಆರ್. ಅಶ್ವಿನ್ ರಾಜೀನಾಮೆ ಕೊಟ್ಟಿದ್ದೇ ಕೊಟ್ಟಿದ್ದು, ಕನ್ನಡದ ಕುವರನಿಗೆ ಲಕ್ ಕುಲಾಯಿಸಿದೆ. ಉಡುಪಿಯ ತನುಷ್, ಟೀಂ ಇಂಡಿಯಾ ಬಳಗ ಸೇರ್ಕೊಂಡಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಅನ್ನೋದು ಬರೀ ಕ್ರೀಡೆಯಲ್ಲ. ಇದೊಂದು ಧರ್ಮ, ದಿಲ್ಲಿಯಿಂದ ಹಿಡಿದು ಗಲ್ಲಿವರೆಗೂ ಕ್ರಿಕೆಟ್ ಆಡೋರಿದ್ದಾರೆ. ಕ್ರಿಕೆಟ್ನ್ನೇ ಉಸಿರಾಗಿಸಿಕೊಂಡವರಿದ್ದಾರೆ. ಟೀಂ ಇಂಡಿಯಾಗೆ ಒಮ್ಮೆ ಸೆಲೆಕ್ಟ್ ಆಗ್ಬೇಕು, ಒಮ್ಮೆ ಇಂಡಿಯಾ ಜರ್ಸಿ ತೊಡ್ಬೇಕು ಅಂತಾ ಅದೆಷ್ಟೋ ಆಟಗಾರರು ಮಹದಾಸೆ ಇಟ್ಕೊಂಡು ಕಾಯ್ತಿದ್ದಾರೆ. ಆದರೆ, ಈ ಅವಕಾಶ ಎಲ್ಲರಿಗೂ ಸಿಗಲ್ಲ. ಪರ್ಫಾರ್ಮೆನ್ಸ್ ಜೊತೆ ಲಕ್ ಸಹ ಇರ್ಬೇಕು. ಇದೇ ಲಕ್ ಈಗ ಉಡುಪಿಗೆ ಹುಡ್ಕೊಂಡು ಬಂದಿದೆ. ಕರಾವಳಿಯ ಸ್ಪಿನ್ ಮಾಂತ್ರಿಕ ತನುಷ್, ಟೀಂ ಇಂಡಿಯಾದ 15ರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಂ ಇಂಡಿಯಾದ ಗ್ರೇಟ್ ಸ್ಪಿನ್ನರ್ ಅಶ್ವಿನ್ ಮೊನ್ನೆಮೊನ್ನೆಯಷ್ಟೇ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದರು. ಆಸ್ಟ್ರೇಲಿಯಾ ಸೀರಿಸ್ ಮುಗಿಯೋದಕ್ಕೂ ಮೊದಲೇ ಟೀಂ ಇಂಡಿಯಾದಿಂದ ಹೊರಗೆ ನಡೆದಿದ್ದರು. ಹೀಗಾಗಿ ಅಶ್ವಿನ್ ಸ್ಥಾನ ತುಂಬೋದಕ್ಕೆ ಉಡುಪಿ ಮೂಲದ ತನುಷ್ ಕೋಟ್ಯಾನ್ರನ್ನ ಟೀಂ ಇಂಡಿಯಾ ಸೆಲೆಕ್ಟ್ ಮಾಡಿದೆ. ಸ್ಪಿನ್ ಬೌಲಿಂಗ್ ಜೊತೆಗೆ ಉತ್ತಮವಾಗಿ ಬ್ಯಾಟಿಂಗ್ ಸಹ ಮಾಡೋದ್ರಿಂದಾಗಿ, ಆಲ್ರೌಂಡರ್ ಪ್ರತಿಭೆಗೆ ಬಿಸಿಸಿಐ ಅವಕಾಶ ನೀಡಿದೆ. ವಿಜಯ್ ಹಜಾರೆ ಟ್ರೋಫಿ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ್ದ ತನುಷ್, ಬಲಗೈ ಆಫ್ ಸ್ಪಿನ್ನರ್ ಆಗಿ ಮಿಂಚು ಹರಿಸಿದ್ದರು. ಬೌಲಿಂಗ್ ಜೊತೆಗೆ ಅದ್ಭುತವಾಗಿ ಬ್ಯಾಟ್ ಬೀಸ್ತಿದ್ರೂ ಕುಡಾ ಸೂಕ್ತ ಅವಕಾಶ ಸಿಕ್ಕಿರ್ಲಿಲ್ಲ. ಹಲವು ವರ್ಷಗಳಿಂದ ಟೀಂ ಇಂಡಿಯಾ ಸೇರ್ಪಡೆಗೆ ಬಕಪಕ್ಷಿಯಂತೆ ಕಾಯ್ತಿದ್ದ ತನುಷ್ಗೆ ಶುಭಕಾಲ ಶುರುವಾಗಿದೆ. ದೇಸಿ ಕ್ರಿಕೆಟ್ ಹಾಗೂ ಐಪಿಎಲ್ನಲ್ಲಿ ಮಿಂಚು ಹರಿಸಿದ ಕನ್ನಡಿಗನನ್ನ ಭಾರತ ಎ ತಂಡದ ಸದಸ್ಯನಾಗಿ ಭರ್ತಿ ಮಾಡಿಕೊಳ್ಳಲಾಗಿದೆ. ಯಾವಾಗ ಮಗನಿಗೆ ಒಂದೊಳ್ಳೆ ಅವಕಾಶ ಸಿಕ್ತೋ ಹೆತ್ತವರು ಹಿರಿಹಿರಿ ಹಿಗ್ಗಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾಂಗಳ ಮೂಲದ ಕರುಣಾಕರ ಕೋಟ್ಯಾನ್, ಮಲ್ಲಿಕಾ ಕೋಟ್ಯಾನ್ ದಂಪತಿ ಪುತ್ರನೇ ತನುಷ್. ಇವರ ತಂದೆ ಮುಂಬೈನಲ್ಲಿ ನೆಲೆಸಿರುವುದರಿಂದ, ಅಲ್ಲೇ ಸೆಟಲ್ ಆಗಿದ್ದಾರೆ. ಊರು ಬಿಟ್ಟರೂ ಇಲ್ಲಿನ ಪ್ರೀತಿ ಕಮ್ಮಿ ಆಗಿಲ್ಲ. ಆಗಾಗ ಇಡೀ ಕುಟುಂಬ ಬಂದು ಹೋಗುತ್ತೆ. ಕೆಲದಿನಗಳ ಹಿಂದಷ್ಟೇ ನಾಗದೇವರ ಪೂಜೆ ಮಾಡಿಸಿದ್ದರಂತೆ. ಇವತ್ತು ದೈವದ ಬಲದಿಂದಲೇ ನಮ್ಮ ಮೊಮ್ಮಗನಿಗೆ ಈ ಸ್ಥಾನ ಸಿಕ್ಕಿದೆ ಅಂತಾ ತನುಷ್ ಅಜ್ಜ ಕೊಂಡಾಡ್ತಿದ್ದಾರೆ.
Comments