top of page

ಡಿ.6ಕ್ಕೆ ಬನವಾಸಿಯಲ್ಲಿ ಬೃಹತ್ ಮೆರವಣಿಗೆ

  • Writer: Ananthamurthy m Hegde
    Ananthamurthy m Hegde
  • Nov 28, 2024
  • 1 min read

ಶಿರಸಿ: ಬುಧವಾರ ಬನವಾಸಿಯ ಶ್ರೀ ಮಧುಕೇಶ್ವರ ದೇವಾಲಯದ ಸಭಾಂಗಣದಲ್ಲಿ ಕದಂಬ ಕನ್ನಡ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಜನ ಜಾಗೃತಿ ಸಭೆ ನಡೆಯಿತು.

ಸಭೆಯಲ್ಲಿ ಡಿ. 6 ರಂದು ಬನವಾಸಿಯ ಶ್ರೀಮಧುಕೇಶ್ವರ ದೇವಾಲಯದಿಂದ ಬೃಹತ್ ಮೆರವಣಿಗೆ ಹೊರಟು, ಉಪತಹಶೀಲ್ದಾರ ಕಛೇರಿಗೆ ಮನವಿ ಸಲ್ಲಿಸಲು ಒಕ್ಕೊರಲಾಗಿ ನಿರ್ಣಯ ಮಾಡಲಾಯಿತು.

ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್‌ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಕನ್ನಡದ ಮೊದಲ ರಾಜಧಾನಿಯಾದ ಬನವಾಸಿಯನ್ನು ಸರಕಾರಗಳು ಕಡೆಗಣಿಸಿದ್ದು ಅಕ್ಷಮ್ಯ ಅಪರಾಧ. ಕದಂಬರನ್ನು ಮರೆತು ಈ ಪ್ರದೇಶವಿಲ್ಲ. ನಾವೆಲ್ಲರೂ ಒಕ್ಕೊರಲಾಗಿ ಕದಂಬ ಕನ್ನಡ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಗಾಗಿ ಹೋರಾಟ ಮಾಡೋಣ ಎಂದರು.

ಎಂ.ಎಂ. ಭಟ್ಟ ಮಾತನಾಡಿ, ಕದಂಬ ಕನ್ನಡ ಜಿಲ್ಲೆ ಪ್ರತ್ಯೇಕ ಜಿಲ್ಲೆಯ ಕನಸು ಮೂರು ದಶಕದ ಹಿಂದೆಯೇ ಚಿಗುರಿತ್ತು. ಡಾ. ಸೋಂದೆ, ಎನ್.ಎಸ್.ಹೆಗಡೆ ಮಾಳೇನಳ್ಳಿ, ಉಪೇಂದ್ರ ಪೈ ಅವರ ನೇತೃತ್ವದಲ್ಲಿ ಕಳೆದ 8-10 ವರ್ಷಗಳಿಂದ ನಡೆಯುತ್ತಿದೆ. ನಂತರ ಕೆಲ ಕಾರಣಾಂತರದಿಂದ ಹೋರಾಟ ಕಳೆಗುಂದಿತ್ತು. ಇದೀಗ ಯುವಕರಾಗಿರುವ ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ಮತ್ತೆ ಹೋರಾಟಕ್ಕೆ ಬಲ ನೀಡಿ, ಆರಂಭಿಸಲಾಗಿದೆ. ಅನಂತಮೂರ್ತಿ ಅವರು ಸಂಘಟನೆಯನ್ನು ಮಾಡುವಲ್ಲಿ ದಕ್ಷರಾಗಿದ್ದಾರೆ. ಅವರಿಗಿರುವ ಹೋರಾಟದ ಪ್ರವೃತ್ತಿ, ಸ್ಪಷ್ಟ ಗುರಿ ಮತ್ತು ಸಂಘಟನಾ ಚಾತುರ್ಯ ಜಿಲ್ಲೆ ರಚನೆ ಹೋರಾಟಕ್ಕೆ ಬಲ ನೀಡುತ್ತದೆ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿರಸಿ ತಾಲೂಕು ಅಧ್ಯಕ್ಷ ಗಣಪತಿ ಚನ್ನಯ್ಯ ಮಾತನಾಡಿ ಯಾವುದೇ ಕಾರಣಕ್ಕೂ ಕದಂಬ ಕನ್ನಡ ಜಿಲ್ಲೆಯಾಗಲೇಬೇಕು. ಎಲ್ಲರೂ ಒಗ್ಗಟ್ಟಾಗಿ, ಒಕ್ಕೊರಲಾಗಿ ಜಿಲ್ಲೆಯ ರಚನೆಗೆ ಆಗ್ರಹಿಸೋಣ ಎಂದರು.

ಜಯಶೀಲ ಗೌಡರ್ ಮಾತನಾಡಿ, ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಇಂದಿನ ಪರಿಸ್ಥಿತಿ ನೋಡಿದರೆ ನಮಗೆ ನಾಚಿಕೆಯಾಗುತ್ತದೆ. ಬೇರೆ ಬೇರೆ ರಾಜ್ಯದಿಂದ, ವಿದೇಶಗಳಿಂದ ಪ್ರವಾಸಿಗರು ಈ ಬನವಾಸಿಗೆ ಪ್ರತಿನಿತ್ಯ ಬರುತ್ತಾರೆ. ಆದರೆ ಬನವಾಸಿ ಮಾತ್ರ ಅಭಿವೃದ್ಧಿಯತ್ತ ಸಾಗುತ್ತಿಲ್ಲ. ಅಭಿವೃದ್ಧಿಗೆ, ಹೋರಾಟಕ್ಕೆ ಅಡ್ಡಗಾಲು ಹಾಕುವವರೇ ಜಾಸ್ತಿ.‌ ಈ ಕದಂಬ ಕನ್ನಡ ಜಿಲ್ಲೆ ಹೋರಾಟದಲ್ಲಿ ನಾನು ಸಂತಸದಿಂದ ಭಾಗಿಯಾಗುತ್ತೇನೆ ಎಂದರು.

ಉದಯಕುಮಾರ ಕಾನಳ್ಳಿ ಮಾತನಾಡಿ, ಕದಂಬ ಕನ್ನಡ ಜಿಲ್ಲೆ ಹೆಸರಿನ ಮೂಲಕ ಬನವಾಸಿಯ ಹೆಸರನ್ನು ಚಿರಸ್ಥಾಯಿಯನ್ನಾಗಿಸುವ ಮೊದಲ ಪ್ರಯತ್ನಕ್ಕೆ ನನಗೆ ಖುಷಿಯಿದೆ. ಜಿಲ್ಲಾಕೇಂದ್ರ ಕಾರವಾರ ಬನವಾಸಿಯಿಂದ 150 ಕಿ.ಮೀ ದೂರದಲ್ಲಿದೆ. ನಮ್ಮ ಜನರ ಸಮಸ್ಯೆಗಳಿಗೆ ಕಾರವಾರದ ಜಿಲ್ಲಾಕೇಂದ್ರದಿಂದ ಪರಿಹಾರ ದೊರೆಯುವುದು ವಿಳಂಬವಾಗುತ್ತಿದೆ. ಈ ಎಲ್ಲ ಕಾರಣಕ್ಕೆ ನಾವೆಲ್ಲ ಒಕ್ಕೊರಲಾಗಿ ಕದಂಬ ಕನ್ನಡ ಜಿಲ್ಲೆಗಾಗಿ ಧ್ವನಿಗೂಡಿಸಬೇಕಿದೆ ಎಂದರು.

ಸಭೆಯಲ್ಲಿ ಸ್ಥಳೀಯ ಹಿರಿಕಿರಿಯ ಸಾಮಾಜಿಕ ಕಾರ್ಯಕರ್ತರು, ಪ್ರಮುಖರು, ಮುಖಂಡರು ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡು, ಸಲಹೆ-ಸೂಚನೆ ನೀಡಿದರು.ಕಾರ್ಯಕ್ರಮಕ್ಕೂ ಮುನ್ನ ಶ್ರೀ ಉಮಾಮಧುಕೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

Comments


Top Stories

bottom of page