ಡಿಜಿಟಲ್ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆ
- Ananthamurthy m Hegde
- Jul 3
- 1 min read

ಕುಮಟಾ : ಮತದಾನದ ಚೀಟಿಯ ಮೂಲಕ ಮತ ಚಲಾಯಿಸುವ ಪ್ರಕ್ರಿಯೆ ಈ ಹಿಂದೆ ಸಾರ್ವತ್ರಿಕ ಚುನಾವಣೆಯಲ್ಲಿಯೂ ನಡೆಯುತ್ತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಚುನಾವಣಾ ಆಯೋಗವು ಇವಿಎಂ ಮಷೀನ್ ಗಳ ಮೂಲಕ ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಂಡಿರುವುದನ್ನು ಗಮನಿಸಬಹುದಾಗಿದೆ. ಡಿಜಿಟಲ್ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಹಾಗೂ ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಚುನಾವಣಾ ಇವಿಎಂ ಮಾದರಿಯಲ್ಲಿಯೇ ಚುನಾವಣೆ ನಡೆಸುವ ಪ್ರಯತ್ನಕ್ಕೆ ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರ ಮುಂದಾಗಿತ್ತು.
ಸರಸ್ವತಿ ವಿದ್ಯಾ ಕೇಂದ್ರದಲ್ಲಿ 2025-26 ನೇ ಸಾಲಿನ ಶಾಲಾ ಸಂಸತ್ ನ ಮುಖ್ಯಮಂತ್ರಿ, ಕ್ರೀಡಾ ಮಂತ್ರಿ ಹಾಗೂ ಸಾಂಸ್ಕೃತಿಕ ಮಂತ್ರಿಗಳ ಆಯ್ಕೆ ಪ್ರಕ್ರಿಯೆಗಾಗಿ ಚುನಾವಣೆ ಹಮ್ಮಿಕೊಳ್ಳಲಾಗಿತ್ತು. ಪ್ರತೀ ಸ್ಥಾನಕ್ಕೆ ಮೂವರು ಸ್ಪರ್ಧಿಗಳು ಸ್ಪರ್ಧೆಯಲ್ಲಿದ್ದರು. ಸುಮಾರು 350 ವಿದ್ಯಾರ್ಥಿಗಳು ಈ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಐದು, ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳು ಅತ್ಯುತ್ಸಾಹದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಚುನಾವಣಾ ಪ್ರಕ್ರಿಯೆ ಯಾವ ರೀತಿಯಲ್ಲಿ ನಡೆಯಲಿದೆ ಎಂಬುದರ ಅರಿವನ್ನೂ ಪಡೆದರು.
ಡಿಜಿಟಲ್ ಮಾದರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸ್ಪರ್ಧಾಳುಗಳ ಭಾವಚಿತ್ರ ಸಹಿತ ಬೆಲೆಟ್ ಗಳು ಕಾಣುವಂತೆ ಮಾಡಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಗುರುತನ್ನು ಚಲಾಯಿಸಿದರು. ವಿದ್ಯಾರ್ಥಿಗಳ ಎಡಗೈ ತೋರು ಬೆರಳಿಗೆ ಚುನಾವಣಾ ಪ್ರಕ್ರಿಯೆ ನಡೆದ ಬಗ್ಗೆ ಶಾಯಿ ಹಚ್ಚುವುದರ ಮೂಲಕ ಹಾಗೂ ಮತದಾನ ಪ್ರಕ್ರಿಯೆಗೆ ಬಂದ ಸಂದರ್ಭದಲ್ಲಿ ಅವರ ದಾಖಲೆಗಳನ್ನು ಪರಿಶೀಲಿಸಿ, ಗುರುತು ಮಾಡಿಕೊಳ್ಳುವ ಮೂಲಕ ಸಾರ್ವತ್ರಿಕ ಚುನಾವಣಾ ಮಾದರಿಯನ್ನೇ ಪಾಲಿಸಲಾಗಿತ್ತು. ಸ್ಪರ್ಧಾಳುಗಳಿಗೆ ಕ್ಷಣ ಕ್ಷಣದ ಅಪ್ಡೇಟ್ ಲಭ್ಯವಾಗುವಂತೆ ಮಾಡಲಾಗಿತ್ತು. ಡಿಜಿಟಲ್ ಸ್ಕ್ರೀನ್ ಮೂಲಕ ವಿದ್ಯಾರ್ಥಿಗಳು ತಾವು ಪಡೆದ ಓಟುಗಳ ಲೆಕ್ಕವನ್ನು ಪರಿಶೀಲಿಸಿದರು.
Comments