top of page

ಡಿಪೋ ಉದ್ಘಾಟನೆ ಆದರೂ ಆರಂಭವಾಗದ ಬಸ್ ಸೇವೆ

  • Writer: Ananthamurthy m Hegde
    Ananthamurthy m Hegde
  • Dec 26, 2024
  • 1 min read
ಹೊಸದಾಗಿ ನಿರ್ಮಾಣಗೊಂಡ  ಬಸ್ ಡಿಪೋ
ಹೊಸದಾಗಿ ನಿರ್ಮಾಣಗೊಂಡ ಬಸ್ ಡಿಪೋ

ಮುಂಡಗೋಡ: ಪಟ್ಟಣದ ಹುಬ್ಬಳ್ಳಿ ರಸ್ತೆಯ ಎಪಿಎಂಸಿ ಪಕ್ಕದಲ್ಲಿ ಕೋಟ್ಯಾಂತರ ವ್ಯಯಮಾಡಿ ಸುಸಜ್ಜಿತ ಬಸ್‌ ಡಿಪೋ ಉದ್ಘಾಟನೆಗೊಂಡು ಒಂಬತ್ತು ತಿಂಗಳು ಕಳೆದರೂ ಬಸ್‌ಗಳ ಸೇವೆಯನ್ನು ಆರಂಭಿಸದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ಬಸ್ ಡಿಪೋ ಇಲ್ಲದ ಕಾರಣ ಯಲ್ಲಾಪುರ, ಹಾನಗಲ್, ಹಾವೇರಿ ಘಟಕಗಳಿಂದ ಬಸ್ ಸಂಚಾರವಾಗುತ್ತಿದೆ. ಮುಂಡಗೋಡದಲ್ಲಿ ಬಸ್ ಡಿಪೋ ನಿರ್ಮಾಣ ಮಾಡಿಸುವಲ್ಲಿ ಜನಪ್ರತಿನಿಧಿಗಳು ಯಶಸ್ವಿಯಾಗಿದ್ದರು. ಆದರೆ ಮಹಿಳೆಯರಿಗೆ ಬಸ್ ಫ್ರಿ ಯೋಜನೆ ಜಾರಿಯಾಗಿದ್ದರಿಂದ ಪ್ರಯಾಣಿಕರು ಸಹ ಹೆಚ್ಚಾಗಿದ್ದಾರೆ. ಇದಕ್ಕೆ ತಕ್ಕಂತೆ ಶಿರಸಿ ಹುಬ್ಬಳ್ಳಿ ಮಾರ್ಗದ ಬಸ್ ಗಳ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾತು ಕೇಳಿ ಬರುತ್ತಿತ್ತು.

ಪಟ್ಟಣದ ಹೊರವಲಯ ಎಪಿಎಂಸಿ ಪಕ್ಕದಲ್ಲಿ ಸುಮಾರು ನಾಲ್ಕು ಕೋಟಿ ರೂ.ಅನುದಾನದಲ್ಲಿ ಡಿಪೋ ನಿರ್ಮಾಣ ಮಾಡಲಾಗಿದೆ.

ಸುಸುಜ್ಜಿತವಾಗಿ ನಿರ್ಮಾಣಗೊಂಡ ಬಸ್ ಡಿಪೋವನ್ನು ೨೦೨೪ರ ಮಾರ್ಚ್ ತಿಂಗಳಿನಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಉದ್ಘಾಟನೆ ಮಾಡಿದರು. ಸಚಿವರು ಬಸ್ ಡಿಪೋ ಉದ್ಘಾಟನೆ ಮಾಡಿದ ನಂತರ ತಾಲೂಕಿನ ಜನರಲ್ಲಿ ಸಂತಸ ಮೂಡಿತ್ತು. ಇನ್ನೂ ಶಿರಸಿ ಹುಬ್ಬಳ್ಳಿಯತ್ತ ತೆರಳಲು ಹೆಚ್ಚುವರಿ ಬಸ್ ಓಡುತ್ತವೆ ಎಂಬ ಕನಸನ್ನು ಕಂಡಿದ್ದರು. ಆದರೆ ಕನಸು ಇದೂವರೆಗೂ ಕನಸಾಗಿಯೆ ಉಳಿದುಕೊಂಡಿದೆ.

ಡೀಸಲ್ ಟ್ಯಾಂಕ್ ಅಳವಡಿಕೆ ಕಾರ್ಯ ಬಾಕಿ ಇತ್ತು. ಮೂರು ತಿಂಗಳಲ್ಲಿ ಬಾಕಿ ಉಳಿದ ಕೆಲಸ ಮುಗಿಸಿ ಡೀಪೋ ಕಾರ್ಯಾರಂಭವಾಗುತ್ತದೆ. ಬಸ್ ಸೇವೆ ಆರಂಭವಾಗುತ್ತದೆ ಎಂದು ಉದ್ಘಾಟನೆಯ ದಿನದಂದು ಶಿರಸಿ ಸಾರಿಗೆ ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದೀಗ ಡೀಸೆಲ್ ಟ್ಯಾಂಕ್ ಸಹ ಅಳವಡಿಸಲಾಗಿದೆ. ಆದರೂ ಸಹ ಡೀಪೋ ಕಾರ್ಯಾರಂಭವಾಗದೇ ಇರುವುದು ದುರದೃಷ್ಟ.

ಪ್ರತಿದಿನ ಹುಬ್ಬಳ್ಳಿ ಶಿರಸಿಯತ್ತ ತೆರಳುವ ಬಸ್‌ಗಳಲ್ಲಿ ಸಂಚರಿಸುವುದು ತುಂಬಾ ಕಷ್ಟವಾಗುತ್ತಿದೆ. ಪ್ರತಿಯೊಂದು ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಸಮಯಕ್ಕೆ ಸರಿಯಾಗಿ ಬಸ್ ಸಿಗದೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಹಳ್ಳಿಗಳಿಗೆ ತೆರಳು ಬಸ್‌ಗಳ ಸಹ ಜನರಿಂದ ತುಂಬಿ ತುಳುಕುತ್ತಿರುತ್ತದೆ. ಬಸ್ ಡಿಪೋ ಆರಂಭವಾದರೆ ಹೆಚ್ಚುವರಿ ಬಸ್‌ಗಳ ಸಂಚಾರ ಆರಂಭಿಸುತ್ತಾರೆ ಎಂಬ ಜನರ ಕನಸು ಕನಸಾಗಿಯೆ ಉಳಿದಿದೆ. ಈ ಕುರಿತು ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೆ ಮುಂಡಗೋಡ ಬಸ್ ಡಿಪೋ ಕಾರ್ಯಾರಂಭ ಮಾಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Comments


Top Stories

bottom of page